ಬೆಂಗಳೂರು: ಮಂಗಳೂರಿನ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಗುರುತಿಸಿಕೊಂಡಿರುವ ರೋಹನ್ ಕಾರ್ಪೋರೇಶನ್ ಇದೀಗ ಬೆಂಗಳೂರಿನಲ್ಲೂ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿದೆ. ನಗರದ ಕನ್ನಿಂಗ್ಹ್ಯಾಮ್ ರಸ್ತೆಯ ಸ್ಯಾಂಕಿ ರಸ್ತೆ ಕ್ರಾಸ್ನಲ್ಲಿರುವ ದಿ ಕನ್ನಿಂಗ್ಹ್ಯಾಮ್ ಕಮರ್ಷಿಯಲ್ನ ಮೊದಲ ಮಹಡಿಯಲ್ಲಿ ಸಂಸ್ಥೆಯ ನೂತನ ಕಚೇರಿ ಆರಂಭಗೊಂಡಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಚೇರಿಯನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬೆಂಗಳೂರು ದೇಶದ ಪ್ರಮುಖ ಉದ್ಯಮ, ವಾಣಿಜ್ಯ ಹಾಗೂ ಹೂಡಿಕೆ ಕೇಂದ್ರವಾಗಿ ಬೆಳೆಯುತ್ತಿದೆ. ವಿವಿಧ ಉದ್ಯಮಗಳಿಗೆ ನಗರದಲ್ಲಿ ಉತ್ತಮ ಅವಕಾಶಗಳಿದ್ದು, ಈ ಹಿನ್ನೆಲೆಯಲ್ಲಿ ರೋಹನ್ ಕಾರ್ಪೋರೇಶನ್ ಬೆಂಗಳೂರಿನಲ್ಲಿ ತನ್ನ ಹೊಸ ಕಚೇರಿ ಆರಂಭಿಸಿರುವುದು ಸಂತಸದ ವಿಚಾರ. ಸಂಸ್ಥೆಯು ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸು ಸಾಧಿಸಲಿ ಎಂದು ಹಾರೈಸಿದರು.
ರೋಹನ್ ಕಾರ್ಪೋರೇಶನ್ನ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ.ರೋಹನ್ ಮೊಂತೆರೊ ಮಾತನಾಡಿ, ಬೆಂಗಳೂರಿನಲ್ಲಿ ನೂತನ ಕಚೇರಿ ಆರಂಭಿಸಿರುವುದು ಸಂಸ್ಥೆಯ ವಿಸ್ತರಣಾ ಪಯಣದಲ್ಲಿ ಪ್ರಮುಖ ಘಟ್ಟವಾಗಿದೆ. ಬೆಂಗಳೂರಿನ ಗ್ರಾಹಕರಿಗೆ ನಮ್ಮ ವಿವಿಧ ಯೋಜನೆಗಳನ್ನು ನೇರವಾಗಿ ಪರಿಚಯಿಸುವುದು, ಅವರ ಅಗತ್ಯಗಳನ್ನು ಅರಿತು ಸೇವೆ ಒದಗಿಸುವುದು ಹಾಗೂ ಗ್ರಾಹಕರೊಂದಿಗೆ ದೀರ್ಘಕಾಲೀನ ವಿಶ್ವಾಸದ ಸಂಬಂಧ ಬೆಳೆಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.
ಸಂಸ್ಥೆಯ ನಿರ್ದೇಶಕ ಡಿಯಾನ್ ಮೊಂತೆರೊ ಮಾತನಾಡಿ, ಬೆಂಗಳೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಗ್ರಾಹಕರ ನಿರೀಕ್ಷೆ, ವಸತಿ ಅಗತ್ಯಗಳು ಮತ್ತು ಜೀವನಶೈಲಿಯಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಗುಣಮಟ್ಟ, ವಿನ್ಯಾಸ ಹಾಗೂ ಗ್ರಾಹಕರ ಅಗತ್ಯಗಳಿಗೆ ಆದ್ಯತೆ ನೀಡುವ ವಸತಿ ಯೋಜನೆಗಳನ್ನು ಪರಿಚಯಿಸಲು ಸಂಸ್ಥೆ ಬದ್ಧವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಸಚಿವ ಪ್ರಿಯಾಂಕ್ ಖರ್ಗೆ, ಬೆಂಗಳೂರು ಮಹಾಧರ್ಮಪ್ರಾಂತ್ಯದ ಸಹಾಯಕ ಬಿಷಪ್ ಡಾ.ಜೋಸೆಫ್ ಸುಸೈನಾಥನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಖ್ಯಾತ ನಿರೂಪಕಿ ರೀನಾ ಡಿಸೋಜಾ ಕಾರ್ಯಕ್ರಮವನ್ನು ನಿರೂಪಿಸಿದರು.
ಮೂರು ದಿನಗಳ ಯೋಜನಾ ಪ್ರದರ್ಶನಕ್ಕೆ ವ್ಯವಸ್ಥೆ
ನೂತನ ಕಚೇರಿ ಉದ್ಘಾಟನೆಯ ಪ್ರಯುಕ್ತ ನವೆಂಬರ್ 6, 7 ಮತ್ತು 8ರಂದು ಮೂರು ದಿನಗಳ ವಿಶೇಷ ಪ್ರಾಜೆಕ್ಟ್ ಎಕ್ಸಿಬಿಷನ್ ಆಯೋಜಿಸಲಾಗಿದೆ. ಈ ಪ್ರದರ್ಶನದಲ್ಲಿ ರೋಹನ್ ಕಾರ್ಪೋರೇಶನ್ನ ವಿವಿಧ ವಸತಿ ಹಾಗೂ ರಿಯಲ್ ಎಸ್ಟೇಟ್ ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ಗ್ರಾಹಕರು ಪಡೆದುಕೊಳ್ಳಬಹುದು.
ಯೋಜನೆಗಳ ವೈಶಿಷ್ಟ್ಯಗಳು, ಲಭ್ಯವಿರುವ ಆಯ್ಕೆಗಳು ಹಾಗೂ ಖರೀದಿ ಪ್ರಕ್ರಿಯೆ ಕುರಿತು ಸಂಸ್ಥೆಯ ಪ್ರತಿನಿಧಿಗಳೊಂದಿಗೆ ನೇರವಾಗಿ ಚರ್ಚಿಸಲು ಅವಕಾಶ ಕಲ್ಪಿಸಲಾಗಿದೆ. ವಿಶೇಷವೆಂದರೆ, ಪ್ರದರ್ಶನದ ಅವಧಿಯಲ್ಲಿ ಆಯ್ದ ಯೋಜನೆಗಳನ್ನು ವಿಶೇಷ ಹಾಗೂ ಆಕರ್ಷಕ ದರಗಳಲ್ಲಿ ಖರೀದಿಸುವ ಅವಕಾಶವನ್ನೂ ಸಂಸ್ಥೆ ಒದಗಿಸಿದೆ.
1994ರಿಂದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಸೇವೆ
1994ರಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಿದ ರೋಹನ್ ಕಾರ್ಪೋರೇಶನ್, ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ 32 ವರ್ಷಗಳಿಗೂ ಹೆಚ್ಚಿನ ಅನುಭವ ಹೊಂದಿದೆ. ಮಂಗಳೂರಿನಲ್ಲಿ ತನ್ನದೇ ಆದ ಗ್ರಾಹಕ ವಲಯ ಮತ್ತು ವಿಶ್ವಾಸಾರ್ಹತೆಯನ್ನು ಬೆಳೆಸಿಕೊಂಡಿರುವ ಸಂಸ್ಥೆ, ಇದೀಗ ಬೆಂಗಳೂರಿನ ಮಾರುಕಟ್ಟೆ ಪ್ರವೇಶಿಸುವ ಮೂಲಕ ತನ್ನ ವಿಸ್ತರಣೆಗೆ ಹೊಸ ಆಯಾಮ ನೀಡಿದೆ. ಗುಣಮಟ್ಟದ ಯೋಜನೆಗಳು ಹಾಗೂ ಗ್ರಾಹಕ ಸ್ನೇಹಿ ಸೇವೆಗಳ ಮೂಲಕ ರಾಜಧಾನಿಯಲ್ಲೂ ತನ್ನದೇ ಆದ ಸ್ಥಾನ ನಿರ್ಮಿಸುವ ಗುರಿಯನ್ನು ಸಂಸ್ಥೆ ಹೊಂದಿದೆ.

