ಮಂಗಳೂರು : ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ MY Bharat – ದಕ್ಷಿಣ ಕನ್ನಡ, ಮಂಗಳೂರು ವಿಶ್ವವಿದ್ಯಾಲಯ, ಬೇಸೆಂಟ್ ಮಹಿಳಾ ಕಾಲೇಜು ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಇವರ ಸಂಯುಕ್ತ ಆಶ್ರಯದಲ್ಲಿ ಬೇಸೆಂಟ್ ಮಹಿಳಾ ಕಾಲೇಜಿನಲ್ಲಿ *ವಿಕಸಿತ ಭಾರತ್ ಯಂಗ್ ಲೀಡರ್ಸ್ ಡೈಲಾಗ್ 2027 ಇದರ ಅಡಿಯಲ್ಲಿ ಯೂತ್ ಪಾರ್ಲಿಮೆಂಟ್ 2027 – Lead the Path to Viksit Bharat ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ದಕ್ಷಿಣ ಕನ್ನಡದ ಮಾನ್ಯ ಸಂಸದರಾದ ಶ್ರೀ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಉದ್ಘಾಟಿಸಿ ಮಾತನಾಡಿದರು. 2047ರ ವೇಳೆಗೆ ಭಾರತವನ್ನು ವಿಕಸಿತ ರಾಷ್ಟ್ರವನ್ನಾಗಿ ಮಾಡುವಲ್ಲಿ ಯುವಜನರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಯುವಜನರು ಕೇವಲ ಪ್ರೇಕ್ಷಕರಾಗಿರದೆ, ನೀತಿ ನಿರೂಪಣೆಯಲ್ಲಿ ಭಾಗವಹಿಸುವ ನಾಯಕರಾಗಬೇಕು ಎಂದು ಅವರು ಕರೆ ನೀಡಿದರು. ಜಿಲ್ಲಾ ಮಟ್ಟದಿಂದ ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ಜಿಲ್ಲೆಗೆ ಕೀರ್ತಿ ತಂದುಕೊಡಬೇಕೆಂದು ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಕರೆ ನೀಡಿದರು.

ಕಾರ್ಯಕ್ರಮದ ಆರಂಭದಲ್ಲಿ ವಂದೇ ಮಾತರಂ ಮತ್ತು ನಾಡಗೀತೆ ಹಾಡಲಾಯಿತು. ನಂತರ ಗಣ್ಯರಿಂದ ದೀಪ ಪ್ರಜ್ವಲನೆ ನೆರವೇರಿತು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಿಮೆನ್ಸ್ ನ್ಯಾಷನಲ್ ಎಜುಕೇಷನ್ ಸೊಸೈಟಿಯ ಉಪಾಧ್ಯಕ್ಷರಾದ ಶ್ರೀ ಜೀವನ್ದಾಸ್ ನಾರಾಯಣ್ ಅವರು ವಹಿಸಿದ್ದರು. ವಿದ್ಯಾರ್ಥಿಗಳಿಗೆ ಭಾಗವಹಿಸುವಿಕೆ ಎಷ್ಟು ಮುಖ್ಯ ಎಂದು ಅವರು ತಿಳಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಪ್ರದೀಪ್ ಡಿ’ಸೋಜಾ, MY Bharat ದಕ್ಷಿಣ ಕನ್ನಡದ ಉಪ ನಿರ್ದೇಶಕರಾದ ಶ್ರೀ ಉಲ್ಲಾಸ್ ಕೆ.ಟಿ.ಕೆ, ಮಂಗಳೂರು ವಿಶ್ವವಿದ್ಯಾಲಯದ NSS ಕಾರ್ಯಕ್ರಮ ಸಂಯೋಜಕರಾದ ಡಾ. ಶೇಷಪ್ಪ ಕೆ. ಅಮಿನ್, MY Bharat ನ ಶ್ರೀ ಜಗದೀಶ್ ಕೆ ಅವರು ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಡಾ.ಪರಶುರಾಮ್ ಜಿ. ಮಾಲಗಿ ಅವರು ಶುಭನುಡಿಗಳನ್ನಾಡಿದರು.
ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾದ ಯೂತ್ ಪಾರ್ಲಿಮೆಂಟ್ ಅಧಿವೇಶನದಲ್ಲಿ ಯುವ ಪ್ರತಿನಿಧಿಗಳು ಸಂಸತ್ತಿನ ಮಾದರಿಯಲ್ಲಿ ತಮ್ಮ ವಿಚಾರಗಳನ್ನು ಮಂಡಿಸಿದರು. ವಿಕಸಿತ ಭಾರತ, ಯುವ ನಾಯಕತ್ವ, ಪ್ರಜಾಪ್ರಭುತ್ವದಲ್ಲಿ ಯುವಜನರ ಭಾಗವಹಿಸುವಿಕೆ ಹಾಗೂ ವಿದ್ಯಾರ್ಥಿಗಳು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಬಗ್ಗೆ ಭಾಷಣ ಸ್ಪರ್ಧೆ ನಡೆಯಿತು.
ಕಾರ್ಯಕ್ರಮದಲ್ಲಿ ಅಧ್ಯಾಪಕರು, MY Bharat ತಂಡ, NSS ಸ್ವಯಂಸೇವಕರು ಮತ್ತು ನೂರಾರು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

