ಮಂಗಳೂರು : ಕರಾವಳಿಯ ಕಲಾವಿದರು, ನಿರ್ಮಾಪಕರು, ನಿರ್ದೇಶಕರು ಹಾಗೂ ತಂತ್ರಜ್ಞರ ಸಾಮೂಹಿಕ ಪ್ರಯತ್ನದಲ್ಲಿ ಮೂಡಿ ಬಂದಿರುವ ‘ವಾದಿರಾಜ ವಾಲಗ ಮಂಡಳಿ’ (ವಿ.ವಿ.ಎಂ.) ಕನ್ನಡ ಚಲನಚಿತ್ರ ಡಿಸೆಂಬರ್ ತಿಂಗಳ ಕೊನೆಯಲ್ಲಿ ರಾಜ್ಯಾದ್ಯಂತ ತೆರೆಕಾಣಲು ಸಿದ್ಧವಾಗಿದೆ. ಎಂ.ಎನ್.ಆರ್. ಪ್ರೊಡಕ್ಷನ್ ಬ್ಯಾನರ್ನಡಿ ನಿರ್ಮಾಣಗೊಂಡಿರುವ ಈ ಚಿತ್ರದ ಪೋಸ್ಟರ್ ಹಾಗೂ ಮೋಶನ್ ಪೋಸ್ಟರ್ಗಳನ್ನು ಶನಿವಾರ ನಗರದ ಓಶಿಯನ್ ಪರ್ಲ್ ಹೊಟೇಲ್ನಲ್ಲಿ ಅನಾವರಣಗೊಳಿಸಲಾಯಿತು.


ಚಿತ್ರದ ನಿರ್ಮಾಪಕ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿ, ಕರಾವಳಿಯ ಪ್ರತಿಭಾವಂತ ಕಲಾವಿದರು ಮತ್ತು ತಂತ್ರಜ್ಞರನ್ನು ಒಗ್ಗೂಡಿಸಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಈ ಚಿತ್ರದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದ್ದು, ಎಲ್ಲರೂ ಅತ್ಯಂತ ಉತ್ಸಾಹದಿಂದ ಕೆಲಸ ಮಾಡಿದ್ದಾರೆ. ಚಿತ್ರವು ಪ್ರೇಕ್ಷಕರ ಮೆಚ್ಚುಗೆ ಗಳಿಸುವುದರೊಂದಿಗೆ ಉತ್ತಮ ಯಶಸ್ಸು ಸಾಧಿಸಲಿದೆ ಎಂಬ ವಿಶ್ವಾಸವಿದೆ. ಕರಾವಳಿಯ ಸಾಂಸ್ಕೃತಿಕ ಸೊಗಡು ಮತ್ತು ಇಲ್ಲಿನ ಪ್ರತಿಭೆಗಳ ಸಾಮರ್ಥ್ಯವನ್ನು ಪರಿಚಯಿಸುವ ವಿಶಿಷ್ಟ ಪ್ರಯತ್ನ ಇದಾಗಿದೆ ಎಂದರು.


ಈ ಹಿಂದೆ ‘ಗಲಾಟೆ’ ಎಂಬ ಯಶಸ್ವಿ ಚಲನಚಿತ್ರ ಹಾಗೂ 400 ಸಂಚಿಕೆಗಳನ್ನು ಪೂರೈಸಿದ ‘ಜೋಗುಳ’ ಧಾರಾವಾಹಿಯನ್ನು ನಿರ್ಮಿಸಿರುವ ಎಂ.ಎನ್.ಆರ್. ಪ್ರೊಡಕ್ಷನ್, ಉತ್ತಮ ಅಭಿರುಚಿಯ ಕನ್ನಡ ಚಿತ್ರಗಳ ನಿರ್ಮಾಣಕ್ಕೆ ಆದ್ಯತೆ ನೀಡುತ್ತಾ ಬಂದಿದೆ. ಅದೇ ಆಶಯದೊಂದಿಗೆ ‘ವಾದಿರಾಜ ವಾಲಗ ಮಂಡಳಿ’ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲಾಗುತ್ತಿದೆ ಎಂದು ಅವರು ತಿಳಿಸಿದರು.
ಹಾಸ್ಯ, ಭಾವನೆಗಳ ಸಮ್ಮಿಲನದ ಕೌಟುಂಬಿಕ ಚಿತ್ರ
ಚಿತ್ರದ ವಿಶೇಷತೆಗಳನ್ನು ವಿವರಿಸಿದ ಡಾ. ರಾಜೇಂದ್ರ ಕುಮಾರ್, ‘ವಾದಿರಾಜ ವಾಲಗ ಮಂಡಳಿ’ ಸಂಪೂರ್ಣ ಮನರಂಜನಾತ್ಮಕ ಹಾಗೂ ಹಾಸ್ಯಭರಿತ ಕೌಟುಂಬಿಕ ಚಿತ್ರವಾಗಿದೆ. ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡುವ ಉದ್ದೇಶದಿಂದ ಚಿತ್ರವನ್ನು ರೂಪಿಸಲಾಗಿದೆ. ಕರಾವಳಿಯ ನವೋದಯ ಸಂಘದ ಸದಸ್ಯರೂ ಚಿತ್ರದಲ್ಲಿ ಪಾಲ್ಗೊಂಡಿದ್ದಾರೆ. ಚಿತ್ರದ ಮಲಯಾಳಂ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿದ್ದು, ತಮಿಳು ಮತ್ತು ತೆಲುಗು ಭಾಷೆಗಳಿಗೆ ರಿಮೇಕ್ ಮಾಡುವ ಬಗ್ಗೆಯೂ ಬೇಡಿಕೆ ವ್ಯಕ್ತವಾಗಿದೆ. ಚಿತ್ರದ ಬಗ್ಗೆ ತಂಡ ಹೆಚ್ಚಿನ ನಿರೀಕ್ಷೆ ಹೊಂದಿದೆ ಎಂದರು.


ಕರಾವಳಿಯ ಕಲಾವಿದರ ಪರಿಶ್ರಮಕ್ಕೆ ವೇದಿಕೆ
ನಟ ನವೀನ್ ಡಿ. ಪಡೀಲ್ ಮಾತನಾಡಿ, ವಿವಿಧ ಕ್ಷೇತ್ರಗಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಗುಣ ಹೊಂದಿರುವ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಈ ಚಿತ್ರದಲ್ಲಿಯೂ ಎಲ್ಲರಿಗೂ ಮಾರ್ಗದರ್ಶನ ನೀಡಿದ್ದಾರೆ. ಅವರ ಸಹಕಾರ ಮತ್ತು ಪ್ರೋತ್ಸಾಹದಿಂದ ಚಿತ್ರತಂಡ ಒಗ್ಗಟ್ಟಿನಿಂದ ಕೆಲಸ ಮಾಡಲು ಸಾಧ್ಯವಾಗಿದೆ. ಇದೊಂದು ಕ್ಲಾಸಿಕಲ್ ಶೈಲಿಯ ಸ್ಪರ್ಶ ಹೊಂದಿರುವ, ಭಾವನಾತ್ಮಕ ಸನ್ನಿವೇಶಗಳೊಂದಿಗೆ ಹಾಸ್ಯವನ್ನು ಬೆರೆಸಿದ ಕೌಟುಂಬಿಕ ಚಿತ್ರವಾಗಿದೆ. ಎಲ್ಲ ವಯೋಮಾನದ ಪ್ರೇಕ್ಷಕರೂ ಆಸ್ವಾದಿಸಬಹುದಾದ ರೀತಿಯಲ್ಲಿ ಚಿತ್ರ ಮೂಡಿಬಂದಿದೆ ಎಂದು ಹೇಳಿದರು.

55 ದಿನಗಳ ಕಾಲ ಎರಡು ಹಂತಗಳಲ್ಲಿ ಚಿತ್ರೀಕರಣ
ಚಿತ್ರದ ನಿರ್ದೇಶಕ ಶಶಿರಾಜ್ ಕಾವೂರು ಮಾತನಾಡಿ, ಬ್ರಹ್ಮಾವರ, ಮಂಗಳೂರು, ಮೂಲ್ಕಿ ಹಾಗೂ ಕಾಸರಗೋಡು ಸೇರಿದಂತೆ ಕರಾವಳಿಯ ವಿವಿಧ ಪ್ರದೇಶಗಳಲ್ಲಿ ಸುಮಾರು 55 ದಿನಗಳ ಕಾಲ ಎರಡು ಹಂತಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಕರಾವಳಿ ಕನ್ನಡದ ಭಾಷಾ ಸೊಗಡು, ಇಲ್ಲಿನ ಬದುಕು, ಸಂಸ್ಕೃತಿ ಹಾಗೂ ಹಾಸ್ಯದ ಲವಲವಿಕೆಯನ್ನು ಒಳಗೊಂಡಂತೆ ಚಿತ್ರವನ್ನು ರೂಪಿಸಲಾಗಿದೆ. ಸಂಪೂರ್ಣ ಹಾಸ್ಯಮಯ ನಿರೂಪಣೆಯೊಂದಿಗೆ ಕುಟುಂಬ ಸಮೇತ ಕುಳಿತು ವೀಕ್ಷಿಸಬಹುದಾದ ಮನರಂಜನಾತ್ಮಕ ಚಿತ್ರ ಇದಾಗಿದೆ.
ಚಿತ್ರದ ನಿರ್ಮಾಣದ ಸಂದರ್ಭದಲ್ಲಿ ಇಡೀ ತಂಡ ಒಂದು ಕುಟುಂಬದಂತೆ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದೆ. ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಯಜಮಾನರಂತೆ ನಿಂತು ಎಲ್ಲರಿಗೂ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡಿದ್ದಾರೆ. ಸ್ಥಳೀಯ ಪ್ರತಿಭೆಗಳ ಸಹಭಾಗಿತ್ವದಲ್ಲಿ ಉತ್ತಮ ಚಿತ್ರವೊಂದನ್ನು ರೂಪಿಸಿರುವ ಸಂತೃಪ್ತಿ ತಂಡಕ್ಕಿದೆ ಎಂದು ತಿಳಿಸಿದರು.

ತಾರಾಗಣ ಮತ್ತು ತಾಂತ್ರಿಕ ವರ್ಗ
ಚಿತ್ರದಲ್ಲಿ ಕರಾವಳಿಯ ಜನಪ್ರಿಯ ಕಲಾವಿದರಾದ ನವೀನ್ ಡಿ. ಪಡೀಲ್, ‘ಸುಪ್ರಮ್ ಸೋ’ ಖ್ಯಾತಿಯ ಪ್ರಕಾಶ್ ತುಮಿನಾಡು, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೊಳ್ಳಾರು, ಮೈಮ್ ರಾಮದಾಸ್, ಗೋಪಿನಾಥ್ ಭಟ್, ಶೋಭರಾಜ್ ಪಾವೂರು ಹಾಗೂ ಲಕ್ಷ್ಮಣ ಮಲ್ಲೂರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅರ್ಜುನ್ ವೇದಾಂತ್ ಮತ್ತು ಅಥರ್ವ ಪ್ರಕಾಶ್ ನಾಯಕ ನಟರಾಗಿ, ತನ್ವಿ ರಾವ್ ಹಾಗೂ ವೇನ್ಯ ರೈ ನಾಯಕಿಯರಾಗಿ ಅಭಿನಯಿಸಿದ್ದಾರೆ.
ಚೆನ್ನೈಯ ಅನುಭವಿ ಛಾಯಾಗ್ರಾಹಕ ಎಸ್. ಚಂದ್ರಶೇಖರನ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಖ್ಯಾತ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸಿದ್ದು, ಚಿತ್ರದ ಹಾಡುಗಳು ವಿಶೇಷ ಆಕರ್ಷಣೆಯಾಗಲಿವೆ. ಸಾಹಸ ನಿರ್ದೇಶನವನ್ನು ಸ್ಟಂಟ್ ಶಿವು ನಿರ್ವಹಿಸಿದ್ದಾರೆ, ವಿನಾಯಕ ಆಚಾರ್ಯ ನೃತ್ಯ ನಿರ್ದೇಶನ ಮಾಡಿದ್ದಾರೆ.

ಚಿತ್ರದಲ್ಲಿ ಒಟ್ಟು ಒಂಬತ್ತು ಹಾಡುಗಳಿದ್ದು, ಐದು ಪೂರ್ಣ ಪ್ರಮಾಣದ ಹಾಡುಗಳು ಹಾಗೂ ನಾಲ್ಕು ತುಣುಕು ಹಾಡುಗಳನ್ನು ಒಳಗೊಂಡಿವೆ. ‘ಬ್ರಹ್ಮಕಲಶ’ ಹಾಡಿನ ಮೂಲಕ ಜನಪ್ರಿಯತೆ ಗಳಿಸಿರುವ ಗಾಯಕ ಅಬ್ಬಿ ವಿ. ಅವರೊಂದಿಗೆ ಸಾಯಿ ವಿಶ್ಲೇಶ್, ಮೈಮ್ ರಾಮದಾಸ್, ಪ್ರಕಾಶ್ ಮಹಾದೇವನ್, ರವೀಂದ್ರ ಪ್ರಭು ಹಾಗೂ ಮಣಿಕಾಂತ್ ಕದ್ರಿ ಹಾಡುಗಳಿಗೆ ಧ್ವನಿಯಾಗಿದ್ದಾರೆ.
ಚಿತ್ರದ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಹೊಣೆಗಾರಿಕೆಯನ್ನು ‘ವರಾಹ ರೂಪಂ’ ಹಾಡಿನ ಮೂಲಕ ಖ್ಯಾತಿ ಗಳಿಸಿರುವ ನಟ, ನಿರ್ದೇಶಕ ಹಾಗೂ ಸಾಹಿತಿ ಶಶಿರಾಜ್ ಕಾವೂರು ವಹಿಸಿಕೊಂಡಿದ್ದಾರೆ. ಜಯಪ್ರಕಾಶ್ ತುಂಬೆ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ಸಂತೋಷ್ ಶೆಟ್ಟಿ ಮತ್ತು ಲಕ್ಷ್ಮಣ ಕುಮಾರ್ ಮಲ್ಲೂರು ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದು, ರಾಜೇಶ್ ಕುಡ್ಲ ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದಾರೆ. ಖ್ಯಾತ ಕಲಾವಿದ ದೇವಿ ಚಿತ್ರದ ಪೋಸ್ಟರ್ ವಿನ್ಯಾಸ ಮಾಡಿದ್ದಾರೆ.

ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಸಹ ನಿರ್ಮಾಪಕ ಜಯಪ್ರಕಾಶ್ ತುಂಬೆ, ನಟ ಗೋಪಿನಾಥ್ ಭಟ್, ಲಕ್ಷ್ಮಣ ಮಲ್ಲೂರು, ಸಂತೋಷ್ ಶೆಟ್ಟಿ, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಸೇರಿದಂತೆ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು.

