ಮಂಗಳೂರು: ನಗರದ ಬಜಿಲಕೇರಿಯ ಶ್ರೀ ಮುಖ್ಯಪ್ರಾಣ ದೇವಸ್ಥಾನದ ಆವರಣದಲ್ಲಿರುವ ಗುರುರಾಜ್ ಭಟ್ ಅವರ ಮಾಲೀಕತ್ವದ ಗೋಶಾಲೆಯಲ್ಲಿ ಸಾಮರಸ್ಯ ಮಂಗಳೂರು ಸಂಘಟನೆಯ ನೇತೃತ್ವದಲ್ಲಿ ಗೋಪೂಜೆ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು.

ಹಿಂದೂ ಧಾರ್ಮಿಕ ಸಂಪ್ರದಾಯದಲ್ಲಿ ಗೋವಿಗೆ ಅತ್ಯಂತ ಪವಿತ್ರ ಸ್ಥಾನವಿದ್ದು, 33 ಕೋಟಿ ದೇವತೆಗಳ ಆವಾಸಸ್ಥಾನವೆಂದು ಗೋವನ್ನು ಪೂಜಿಸಲಾಗುತ್ತದೆ. ಗೋಮಾತೆಯ ಆರಾಧನೆಯಿಂದ ಸಕಲ ಪಾಪಗಳು ನಿವಾರಣೆಯಾಗುತ್ತವೆ ಎಂಬ ಧಾರ್ಮಿಕ ನಂಬಿಕೆಯಿದೆ. ಅದೇ ರೀತಿ ಗೋವಿಗೆ ಗೋಗ್ರಾಸ ನೀಡುವುದರಿಂದ ಮಹಾನೈವೇದ್ಯ ಸಮರ್ಪಿಸಿದ ಪುಣ್ಯಫಲ ಲಭಿಸುತ್ತದೆ ಎಂಬ ಪ್ರತೀತಿ ಇದೆ ಎಂದು ಸಾಮರಸ್ಯ ಮಂಗಳೂರು ಅಧ್ಯಕ್ಷೆ ಶ್ರೀಮತಿ ಮಂಜುಳಾ ನಾಯಕ್ ತಿಳಿಸಿದರು.

ಗೋವಿನ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಮಹತ್ವವನ್ನು ಸಾರುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಭಕ್ತಿಯಿಂದ ಪಾಲ್ಗೊಂಡು ಗೋಮಾತೆಗೆ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಯೋಗೀಶ್ ನಾಯಕ್, ಸಮರ್ಥ್ ಭಟ್, ಸಿತಾರಾ, ರಾಧಿಕಾ ನಾಯಕ್, ನೀತ್ ಶರಣ್, ರಾಜೇಶ್ ದೇವಾಡಿಗ, ಟಿ.ಸಿ.ಗಣೇಶ್, ಸೀತಾರಾಮ್ ಶೆಟ್ಟಿ, ಸುನಿತಾ, ಸುನಂದಾ, ಮಾತಾಜಿ, ರತಿಕಾ, ರಚಿತಾ, ಪುಷ್ಪ ಆರ್. ಶೆಟ್ಟಿ, ರುಕ್ಮಿಣಿ, ಮೀರಾದೇವಿ, ಗಟು ಕವನ್ ಹಾಗೂ ಮೋಹನ್ ಕವನ್ ಉಪಸ್ಥಿತರಿದ್ದರು

