ಅಬುಧಾಬಿ: ಯುಎಇಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದ ಎನ್ಎಂಸಿ ಹೆಲ್ತ್ಕೇರ್ ಆರ್ಥಿಕ ವಂಚನೆ ಪ್ರಕರಣದಲ್ಲಿ ಸಂಸ್ಥಾಪಕ ಬಿ.ಆರ್. ಶೆಟ್ಟಿ ಹಾಗೂ ಸಂಸ್ಥೆಯ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಪ್ರಶಾಂತ್ ಮಂಗತ್ ಅವರಿಗೆ ಅಬುಧಾಬಿ ಗ್ಲೋಬಲ್ ಮಾರ್ಕೆಟ್ ನ್ಯಾಯಾಲಯದಿಂದ ಹಿನ್ನಡೆಯಾಗಿದೆ. ಸುಮಾರು 5.4 ಬಿಲಿಯನ್ ಡಾಲರ್ ಮೌಲ್ಯದ ಆರ್ಥಿಕ ಅಕ್ರಮಗಳು ಮತ್ತು ವಂಚನೆಯ ವಹಿವಾಟುಗಳಲ್ಲಿ ಇಬ್ಬರೂ ಭಾಗಿಯಾಗಿರುವುದನ್ನು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.
ಕಂಪನಿಯ ಆಸ್ತಿಗಳಿಗೆ ಸಂಬಂಧಿಸಿದಂತೆ 5.397 ಬಿಲಿಯನ್ ಡಾಲರ್ ಮೊತ್ತವನ್ನು ಮರುಪಡೆಯಲು ಇಬ್ಬರೂ ಹೊಣೆಗಾರರಾಗಿರಬೇಕು ಎಂದು ನ್ಯಾಯಾಲಯ ನಿರ್ಧರಿಸಿದೆ. ಆದರೆ ಈ ಮೊತ್ತದಲ್ಲಿ ಪ್ರತಿಯೊಬ್ಬರ ವೈಯಕ್ತಿಕ ಹೊಣೆಗಾರಿಕೆ ಎಷ್ಟಿರಬೇಕು ಎಂಬುದನ್ನು ಮುಂದಿನ ವಿಚಾರಣೆಯಲ್ಲಿ ನಿರ್ಧರಿಸಲಾಗುವುದು ಎಂದು ತಿಳಿಸಿದೆ.
ನ್ಯಾಯಾಲಯದ ವಿಚಾರಣೆಯಲ್ಲಿ ಎನ್ಎಂಸಿ ಕಂಪನಿಯ ಹಣಕಾಸು ವ್ಯವಹಾರಗಳಲ್ಲಿ ನಡೆದಿದ್ದ ಹಲವು ಅಕ್ರಮಗಳು ಬಹಿರಂಗವಾಗಿವೆ. ಕಂಪನಿಯ ಖಾತೆಗಳಿಂದ ಸುಮಾರು 4.183 ಬಿಲಿಯನ್ ದಿರ್ಹಮ್ಗಳನ್ನು ಬಿ.ಆರ್. ಶೆಟ್ಟಿ ಅವರ ವೈಯಕ್ತಿಕ ಖಾತೆಗಳಿಗೆ ವರ್ಗಾಯಿಸಿರುವುದನ್ನು ನ್ಯಾಯಾಲಯ ಗಮನಿಸಿದೆ. ಮರುಪಾವತಿಯಾದ ಹಣವನ್ನು ಕಡಿತಗೊಳಿಸಿದ ಬಳಿಕ ಉಳಿದ ಸುಮಾರು 2.6 ಬಿಲಿಯನ್ ದಿರ್ಹಮ್ಗಳನ್ನು ಖಾಸಗಿ ಜೆಟ್, ಟ್ರಾವೆಲೆಕ್ಸ್ ಸಂಸ್ಥೆ, ದುಬೈ ಹಿಲ್ಸ್ನ ಆಸ್ತಿಗಳು ಹಾಗೂ ಅಮೆರಿಕದ ತೈಲ ಕ್ಷೇತ್ರದ ಹೂಡಿಕೆಗಳಿಗೆ ಬಳಸಲಾಗಿದೆ ಎಂಬ ಅಂಶವೂ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಕಂಪನಿಯ ನೈಜ ಸಾಲದ ಪ್ರಮಾಣವನ್ನು ಮರೆಮಾಚಲು ಎರಡು ಪ್ರತ್ಯೇಕ ಲೆಕ್ಕಪತ್ರಗಳನ್ನು ನಿರ್ವಹಿಸಲಾಗಿತ್ತು ಎಂಬುದನ್ನೂ ನ್ಯಾಯಾಲಯ ಉಲ್ಲೇಖಿಸಿದೆ. 2018ರ ಅಂತ್ಯದ ವೇಳೆಗೆ ಬಹಿರಂಗಪಡಿಸದ ಸಾಲದ ಮೊತ್ತ 3.888 ಬಿಲಿಯನ್ ಡಾಲರ್ಗೆ ತಲುಪಿತ್ತು ಎಂದು ತಿಳಿದುಬಂದಿದೆ.
ಕಂಪನಿಯ ಹಣಕಾಸು ವ್ಯವಹಾರಗಳನ್ನು ನಿರ್ವಹಿಸುತ್ತಿದ್ದ ಮಾಜಿ ಸಿಇಒ ಪ್ರಶಾಂತ್ ಮಂಗತ್ ಅವರು ಬ್ಯಾಂಕ್ ಸಾಲದ ವಿವರಗಳನ್ನು ಲೆಕ್ಕಪರಿಶೋಧಕರಿಂದ ಮರೆಮಾಚಲು ಹಾಗೂ ಹಣವನ್ನು ಬೇರೆಡೆಗೆ ವರ್ಗಾಯಿಸುವ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇದೇ ವೇಳೆ, ಅಬುಧಾಬಿ ಕಮರ್ಷಿಯಲ್ ಬ್ಯಾಂಕ್ಗೆ ಸಂಬಂಧಿಸಿದ ಪ್ರತ್ಯೇಕ ಪ್ರಕರಣದಲ್ಲಿ ಮಂಗತ್ ಅವರ 1.189 ಬಿಲಿಯನ್ ಡಾಲರ್ ಹೊಣೆಗಾರಿಕೆಯನ್ನು ಕೂಡ ನ್ಯಾಯಾಲಯ ಅಂಗೀಕರಿಸಿದೆ.
2012ರಲ್ಲಿ ಲಂಡನ್ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಷೇರುಗಳನ್ನು ನೋಂದಾಯಿಸಿಕೊಂಡಿದ್ದ ಎನ್ಎಂಸಿ ಹೆಲ್ತ್ಕೇರ್ ಸಂಸ್ಥೆಯಲ್ಲಿನ ಭಾರಿ ಹಣಕಾಸು ಅಕ್ರಮಗಳು 2020ರಲ್ಲಿ ಬಹಿರಂಗಗೊಂಡ ಬಳಿಕ ಕಂಪನಿ ಆಡಳಿತ ನಿರ್ವಾಹಕರ ನಿಯಂತ್ರಣಕ್ಕೆ ಒಳಪಟ್ಟಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಡ್ಡಿ, ನ್ಯಾಯಾಲಯದ ವೆಚ್ಚಗಳು ಹಾಗೂ ಇತರ ಹಣಕಾಸು ಅಂಶಗಳ ಕುರಿತು ಮುಂದಿನ ವಾದಗಳನ್ನು ಆಲಿಸಿದ ಬಳಿಕ ಬಿ.ಆರ್. ಶೆಟ್ಟಿ ಮತ್ತು ಪ್ರಶಾಂತ್ ಮಂಗತ್ ಅವರ ವೈಯಕ್ತಿಕ ಹೊಣೆಗಾರಿಕೆಯ ಬಗ್ಗೆ ನ್ಯಾಯಾಲಯ ಅಂತಿಮ ಆದೇಶ ಪ್ರಕಟಿಸಲಿದೆ.

