ಆಂಧ್ರಪ್ರದೇಶ: ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ತೆಲುಗು ಚಿತ್ರರಂಗದ ಖ್ಯಾತ ನಟ ಪವನ್ ಕಲ್ಯಾಣ್ ಮತ್ತು ಅವರ ಪತ್ನಿ ಅನ್ನಾ ಕೊನಿಡಾಲ ದಾಂಪತ್ಯ ಜೀವನದಿಂದ ಪ್ರತ್ಯೇಕವಾಗಲು ನಿರ್ಧರಿಸಿದ್ದಾರೆ. ಹಲವು ವರ್ಷಗಳ ವೈವಾಹಿಕ ಜೀವನದ ಬಳಿಕ ಪರಸ್ಪರ ತಿಳುವಳಿಕೆ, ಗೌರವ ಹಾಗೂ ಒಪ್ಪಿಗೆಯೊಂದಿಗೆ ಈ ನಿರ್ಧಾರ ಕೈಗೊಂಡಿರುವುದಾಗಿ ಉಪಮುಖ್ಯಮಂತ್ರಿ ಕಚೇರಿ ಬಿಡುಗಡೆ ಮಾಡಿರುವ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ದಂಪತಿಯ ಈ ನಿರ್ಧಾರ ಅಭಿಮಾನಿಗಳು ಹಾಗೂ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ತಮ್ಮ ವೈಯಕ್ತಿಕ ಬದುಕಿನ ಮಹತ್ವದ ಘಟ್ಟವನ್ನು ಸಾರ್ವಜನಿಕವಾಗಿ ಹಂಚಿಕೊಂಡಿರುವ ಅವರು, ದಾಂಪತ್ಯ ಸಂಬಂಧ ಅಂತ್ಯಗೊಂಡರೂ ಮಕ್ಕಳ ಮೇಲಿನ ಪ್ರೀತಿ ಮತ್ತು ಜವಾಬ್ದಾರಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದ್ದಾರೆ.

ನಮ್ಮ ಜೀವನದ ಮಹತ್ವದ ಭಾಗವನ್ನು ಒಟ್ಟಿಗೆ ಕಳೆದ ಬಳಿಕ, ಪರಸ್ಪರ ತಿಳುವಳಿಕೆ ಮತ್ತು ಗೌರವದೊಂದಿಗೆ ಪ್ರತ್ಯೇಕವಾಗಲು ನಿರ್ಧರಿಸಿದ್ದೇವೆ. ನಮ್ಮ ವೈವಾಹಿಕ ಸಂಬಂಧ ಕೊನೆಗೊಂಡಿದ್ದರೂ, ಮಕ್ಕಳಿಗೆ ಉತ್ತಮ ಸ್ನೇಹಿತರಾಗಿ ಹಾಗೂ ಬದ್ಧತೆಯುಳ್ಳ ಪೋಷಕರಾಗಿ ಮುಂದುವರಿಯುತ್ತೇವೆ. ಅವರ ಸಂತೋಷ, ಭವಿಷ್ಯ ಮತ್ತು ಯೋಗಕ್ಷೇಮವೇ ನಮ್ಮಿಬ್ಬರ ಮೊದಲ ಆದ್ಯತೆಯಾಗಿರುತ್ತದೆ” ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೆ, ಈ ವೈಯಕ್ತಿಕ ಬದಲಾವಣೆಯ ಸಂದರ್ಭದಲ್ಲಿ ತಮ್ಮ ಗೌಪ್ಯತೆಯನ್ನು ಗೌರವಿಸುವಂತೆ ಅಭಿಮಾನಿಗಳು, ಹಿತೈಷಿಗಳು ಹಾಗೂ ಸಾರ್ವಜನಿಕರಲ್ಲಿ ದಂಪತಿ ಮನವಿ ಮಾಡಿದ್ದಾರೆ. ಈವರೆಗೆ ತಮ್ಮೊಂದಿಗೆ ನಿಂತು ಬೆಂಬಲ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.

ಮೂರನೇ ವಿವಾಹವೂ ಮುಕ್ತಾಯದ ಹಂತಕ್ಕೆ?
ಪವನ್ ಕಲ್ಯಾಣ್ ಅವರ ವೈಯಕ್ತಿಕ ಜೀವನ ಈ ಹಿಂದೆಯೂ ಹಲವು ಬಾರಿ ಸುದ್ದಿಯಲ್ಲಿತ್ತು. ಅವರು 1997ರಲ್ಲಿ ನಂದಿನಿ ಅವರನ್ನು ವಿವಾಹವಾಗಿದ್ದರು. ಆದರೆ ಈ ಸಂಬಂಧ 2008ರಲ್ಲಿ ವಿಚ್ಛೇದನದ ಮೂಲಕ ಅಂತ್ಯಗೊಂಡಿತ್ತು.
ನಂತರ ನಟಿ ಹಾಗೂ ಮಾಡೆಲ್ ರೇಣು ದೇಸಾಯಿ ಅವರನ್ನು 2009ರಲ್ಲಿ ವಿವಾಹವಾದರು. ಈ ದಂಪತಿಗೆ ಅಕಿರಾ ನಂದನ್ ಮತ್ತು ಆಧ್ಯಾ ಎಂಬ ಇಬ್ಬರು ಮಕ್ಕಳಿದ್ದಾರೆ. 2012ರಲ್ಲಿ ಇಬ್ಬರೂ ಪ್ರತ್ಯೇಕವಾಗಿದ್ದರು.
ಇದಾದ ಬಳಿಕ ರಷ್ಯಾ ಮೂಲದ ಮಾಡೆಲ್ ಹಾಗೂ ನಟಿ ಅನ್ನಾ ಕೊನಿಡಾಲ ಅವರೊಂದಿಗೆ ಪವನ್ ಕಲ್ಯಾಣ್ ಪರಿಚಯ ಬೆಳೆಸಿಕೊಂಡಿದ್ದರು. 2011ರಲ್ಲಿ ‘ತೀನ್ ಮಾರ್’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಇಬ್ಬರ ಪರಿಚಯವಾಗಿತ್ತು ಎನ್ನಲಾಗಿದೆ. ಸುಮಾರು ಎರಡು ವರ್ಷಗಳ ಸಂಬಂಧದ ಬಳಿಕ 2013ರ ಸೆಪ್ಟೆಂಬರ್ 30ರಂದು ಹೈದರಾಬಾದ್ನಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ ಪೋಲೆನಾ ಅಂಜನಾ ಪವನೋವಾ ಮತ್ತು ಮಾರ್ಕ್ ಶಂಕರ್ ಪವನೋವಿಚ್ ಎಂಬ ಇಬ್ಬರು ಮಕ್ಕಳಿದ್ದಾರೆ.

ಸಿನಿಮಾದಿಂದ ರಾಜಕೀಯದವರೆಗೆ ಪವನ್ ಕಲ್ಯಾಣ್ ಪಯಣ
ತೆಲುಗು ಚಿತ್ರರಂಗದ ಖ್ಯಾತ ನಟರಾದ ಚಿರಂಜೀವಿ ಮತ್ತು ನಾಗೇಂದ್ರ ಬಾಬು ಅವರ ಕಿರಿಯ ಸಹೋದರರಾಗಿರುವ ಪವನ್ ಕಲ್ಯಾಣ್, 1996ರಲ್ಲಿ ‘ಅಕ್ಕಡ ಅಮ್ಮಾಯಿ ಇಕ್ಕಡ ಅಬ್ಬಾಯಿ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ತಮ್ಮ ವಿಶಿಷ್ಟ ಅಭಿನಯ, ಸಾಹಸಮಯ ಪಾತ್ರಗಳು ಹಾಗೂ ಅಪಾರ ಅಭಿಮಾನಿ ಬಳಗದ ಮೂಲಕ ತೆಲುಗು ಚಿತ್ರರಂಗದಲ್ಲಿ ವಿಶಿಷ್ಟ ಸ್ಥಾನ ಗಳಿಸಿದ್ದಾರೆ.
ನಂತರ ಜನಸೇನಾ ಪಕ್ಷವನ್ನು ಸ್ಥಾಪಿಸಿ ರಾಜಕೀಯ ಪ್ರವೇಶಿಸಿದ ಅವರು, ಆಂಧ್ರಪ್ರದೇಶ ರಾಜಕೀಯದಲ್ಲಿ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ರಾಜ್ಯದ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಾರ್ವಜನಿಕ ಜೀವನದಲ್ಲಿ ರಾಜಕೀಯ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವ ಪವನ್ ಕಲ್ಯಾಣ್ ಅವರ ವೈಯಕ್ತಿಕ ಬದುಕಿನ ಈ ಬೆಳವಣಿಗೆ ಇದೀಗ ಗಮನ ಸೆಳೆದಿದೆ. ಆದರೆ ದಾಂಪತ್ಯ ಜೀವನಕ್ಕೆ ತೆರೆ ಎಳೆದರೂ ಮಕ್ಕಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸ್ನೇಹಪೂರ್ಣ ಸಂಬಂಧವನ್ನು ಮುಂದುವರಿಸುವುದಾಗಿ ದಂಪತಿ ನೀಡಿರುವ ಹೇಳಿಕೆ ಪ್ರಮುಖವಾಗಿದೆ.

