ಮಂಗಳೂರು: ಕೊಂಕಣಿ ಸಂಗೀತ ಲೋಕದಲ್ಲಿ ಹೊಸ ಇತಿಹಾಸ ನಿರ್ಮಿಸುವ ಉದ್ದೇಶದಿಂದ ಮಾಂಡ್ ಸೊಭಾಣ್ ಸಂಸ್ಥೆ ಆಯೋಜಿಸಿರುವ 12 ದಿನ, 12 ಗಂಟೆ ಹಾಗೂ 12 ನಿಮಿಷಗಳ ನಿರಂತರ ಕೊಂಕಣಿ ಗಾಯನ ಮಾರಾಥಾನ್ ಯಶಸ್ವಿಯಾಗಿ ಎಂಟನೇ ದಿನ ಪೂರೈಸಿದೆ. ಮಂಗಳೂರಿನ ಟೌನ್ಹಾಲ್ನಲ್ಲಿ ನಡೆಯುತ್ತಿರುವ ಈ ವಿಶಿಷ್ಟ ಸಂಗೀತ ಅಭಿಯಾನವು ಈಗಾಗಲೇ 180 ಗಂಟೆಗಳ ಗಡಿಯನ್ನು ದಾಟಿದ್ದು, ವಿಶ್ವದಾಖಲೆಯ ಗುರಿಯತ್ತ ಮುನ್ನಡೆಯುತ್ತಿದೆ.


ಕಾರ್ಯಕ್ರಮ ಮುಕ್ತಾಯಕ್ಕೆ ಇನ್ನು ಕೇವಲ ನಾಲ್ಕು ದಿನಗಳು ಬಾಕಿಯಿದ್ದು, ಗಾಯನದ ಉತ್ಸಾಹ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈವರೆಗೆ ಒಟ್ಟು 180 ಸಂಗೀತ ತಂಡಗಳು ವೇದಿಕೆಯಲ್ಲಿ ತಮ್ಮ ಕಲಾಪ್ರತಿಭೆಯನ್ನು ಪ್ರದರ್ಶಿಸಿವೆ. ಯಾವುದೇ ವಿರಾಮವಿಲ್ಲದೆ ನಿರಂತರವಾಗಿ ಸಾಗುತ್ತಿರುವ ಈ ಗಾಯನ ಯಜ್ಞವು ಕೊಂಕಣಿ ಭಾಷೆ, ಸಂಗೀತ ಮತ್ತು ಸಂಸ್ಕೃತಿಯ ಶಕ್ತಿಯನ್ನು ಜಗತ್ತಿಗೆ ಪರಿಚಯಿಸುತ್ತಿದೆ.


ಈ ಮಹತ್ವದ ಪ್ರಯತ್ನದಲ್ಲಿ ಕರ್ನಾಟಕದ ಕರಾವಳಿ ಭಾಗದ ಕಲಾವಿದರೊಂದಿಗೆ ಗೋವಾ, ಕೇರಳ ಸೇರಿದಂತೆ ದೇಶದ ವಿವಿಧ ಭಾಗಗಳು ಹಾಗೂ ವಿದೇಶಗಳಿಂದಲೂ ಸಂಗೀತ ತಂಡಗಳು ಪಾಲ್ಗೊಂಡಿವೆ. ಭಾಷೆ ಮತ್ತು ಭೌಗೋಳಿಕ ಗಡಿಗಳನ್ನು ಮೀರಿ ಕೊಂಕಣಿ ಸಮುದಾಯವನ್ನು ಒಂದೇ ವೇದಿಕೆಯಲ್ಲಿ ಬೆಸೆಯುವಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿದೆ.


ಎಂಟನೇ ದಿನದ ಕಾರ್ಯಕ್ರಮಕ್ಕೆ ಹಲವು ಗಣ್ಯರು ಭೇಟಿ ನೀಡಿ ಕಲಾವಿದರಿಗೆ ಪ್ರೋತ್ಸಾಹ ನೀಡಿದರು. ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ದರ್ಶನ್ ಹೆಚ್.ವಿ. (ಐಎಎಸ್) ಸೇರಿದಂತೆ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ರಾಜಕೀಯ, ಕಲಾ ಮತ್ತು ಉದ್ಯಮ ಕ್ಷೇತ್ರದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.


ನಿರಂತರ ನೇರಪ್ರಸಾರ, ತಾಂತ್ರಿಕ ವ್ಯವಸ್ಥೆ ಮತ್ತು ಕಾರ್ಯಕ್ರಮದ ಸುಗಮ ನಿರ್ವಹಣೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಆಯೋಜಕರು, ತಾಂತ್ರಿಕ ಸಿಬ್ಬಂದಿ ಹಾಗೂ ಕಲಾವಿದರ ಕಾರ್ಯವೈಖರಿಯನ್ನು ಗಣ್ಯರು ಶ್ಲಾಘಿಸಿದರು.


ಒಟ್ಟು 12 ದಿನ, 12 ಗಂಟೆ ಮತ್ತು 12 ನಿಮಿಷಗಳ ಕಾಲ ನಡೆಯಲಿರುವ ಈ ಐತಿಹಾಸಿಕ ಗಾಯನ ಮಾರಾಥಾನ್ ನವೆಂಬರ್ 15ರ ಭಾನುವಾರ ಸಂಜೆ 5 ಗಂಟೆಗೆ ಅದ್ಧೂರಿ ಸಮಾರೋಪದೊಂದಿಗೆ ತೆರೆಕಾಣಲಿದೆ. ಈ ಸಂದರ್ಭದಲ್ಲಿ ವಿಶ್ವದಾಖಲೆಯ ಅಧಿಕೃತ ಘೋಷಣೆಯಾಗುವ ನಿರೀಕ್ಷೆಯಿದ್ದು, ಅದಕ್ಕೆ ಸಾಕ್ಷಿಯಾಗಲು ದೇಶ-ವಿದೇಶಗಳ ಕೊಂಕಣಿ ಸಂಗೀತಾಸಕ್ತರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.


ಮಾಂಡ್ ಸೊಭಾಣ್ನ ಈ ಪ್ರಯತ್ನ ಕೊಂಕಣಿ ಸಂಗೀತದ ಇತಿಹಾಸದಲ್ಲಿ ಸ್ಮರಣೀಯ ಅಧ್ಯಾಯವಾಗಿ ದಾಖಲಾಗುವ ಆಶಯ ಮೂಡಿಸಿದೆ.


