ಮಂಗಳೂರು: ಮಾ ಮಂತ್ರ ವೆಂಚರ್ಸ್ ಬ್ಯಾನರ್ ಅಡಿಯಲ್ಲಿ PK Productions ಅರ್ಪಿಸುವ ಬಹುನಿರೀಕ್ಷಿತ ತುಳು-ಕನ್ನಡ ಸಿನಿಮಾಕ್ಕೆ ಶೀಘ್ರದಲ್ಲೇ ಚಿತ್ರೀಕರಣ ಆರಂಭಗೊಳ್ಳಲಿದೆ ಎಂದು ಚಿತ್ರ ನಟ ಪ್ರಕಾಶ್ ಧರ್ಮನಗರ ತಿಳಿಸಿದರು.
ಸೋಮವಾರ ಸಂಜೆ ನಗರದ ಖಾಸಗಿ ಹೋಟೆಲೊಂದರಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜಸೇವೆಯಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡು, ಕ್ರೀಡಾ ಕ್ಷೇತ್ರದಲ್ಲಿ ಯುವಜನತೆಗೆ ಸದಾ ಪ್ರೋತ್ಸಾಹ ನೀಡುತ್ತಿರುವ ಯುವ ಸಮಾಜಸೇವಕ ಹಾಗೂ ಉದ್ಯಮಿ ಪ್ರಕಾಶ್ ಕುಂಪಲ ಅವರು ಈ ಸಿನಿಮಾದ ಮೂಲಕ ಚಿತ್ರ ನಿರ್ಮಾಪಕರಾಗಿ ತುಳು-ಕನ್ನಡ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಲಿದ್ದಾರೆ ಎಂದರು.
‘ನಮ್ಮ ಕುಡ್ಲ’ ಸಿನಿಮಾದ ನಿರ್ದೇಶನದ ಮೂಲಕ ತುಳು ಚಿತ್ರರಂಗದ ಪ್ರಥಮ ಮಹಿಳಾ ನಿರ್ದೇಶಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಅಶ್ವಿನಿ ಕೋಟ್ಯಾನ್ ಅವರು ಈ ಚಿತ್ರಕ್ಕೆ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ತುಳು ಮತ್ತು ಕನ್ನಡ ಭಾಷೆಗಳಲ್ಲಿ ಏಕಕಾಲದಲ್ಲಿ ನಿರ್ಮಾಣವಾಗಲಿರುವ ಈ ಚಿತ್ರದ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ ಎಂದವರು ವಿವರ ನೀಡಿದರು.

ಚಿತ್ರದ ನಿರ್ದೇಶಕಿ ಅಶ್ವಿನಿ ಕೋಟ್ಯಾನ್ ಅವರು ಮಾತನಾಡಿ, ಚಿತ್ರದ ಕಥೆಯನ್ನು ರಾಜ್ ಪ್ರಕಾಶ್ ಶೆಟ್ಟಿ ರಚಿಸಿದ್ದು, ಸಂಭಾಷಣೆಯನ್ನು ಡಿ.ಬಿ.ಸಿ.ಶೇಖರ್ ಬರೆದಿದ್ದಾರೆ. ಪ್ರಕಾಶ್ ಕುಂಪಲ ಹಾಗೂ ಎನ್.ಬಿ.ಶರವಣ ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಹೊಸ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡುವ ಉದ್ದೇಶ ಹೊಂದಿರುವ ಚಿತ್ರತಂಡವು ಪ್ರಸ್ತುತ ಕಲಾವಿದರು ಹಾಗೂ ತಾಂತ್ರಿಕ ವರ್ಗದ ಆಯ್ಕೆ ಪ್ರಕ್ರಿಯೆಗೆ ಸಿದ್ಧತೆ ನಡೆಸುತ್ತಿದೆ ಎಂದರು.

ನಿರ್ಮಾಪಕ ಪ್ರಕಾಶ್ ಕುಂಪಲ ಅವರು ಮಾತನಾಡಿ, ಮಂಗಳೂರು ಮತ್ತು ಉಡುಪಿ ಭಾಗದ ಪ್ರತಿಭಾವಂತ ಕಲಾವಿದರು ಹಾಗೂ ತಂತ್ರಜ್ಞರನ್ನು ಆಡಿಷನ್ ಮೂಲಕ ಆಯ್ಕೆ ಮಾಡಿ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ.
ಚಿತ್ರದ ಚಿತ್ರೀಕರಣ ಮಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು 35 ದಿನಗಳ ಕಾಲ ಒಂದೇ ಹಂತದಲ್ಲಿ ನಡೆಯಲಿದೆ. ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ಕನ್ನಡ ಚಿತ್ರರಂಗದ ಪ್ರಸಿದ್ಧ ಸಂಗೀತ ನಿರ್ದೇಶಕರೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗಿದೆ, ಚಿತ್ರೀಕರಣದ ಬಳಿಕ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ, ಮುಂದಿನ ವರ್ಷ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯನ್ನು ಚಿತ್ರತಂಡ ಹೊಂದಿದೆ. ಹೊಸ ಪ್ರತಿಭೆಗಳ ಸಮಾಗಮ, ವಿಭಿನ್ನ ಕಥಾಹಂದರ ಹಾಗೂ ಸಾಮಾಜಿಕ ಕಳಕಳಿಯ ಸಂದೇಶವನ್ನು ಒಳಗೊಂಡಿರುವ ಈ ತುಳು-ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಹೊಸ ಅನುಭವ ನೀಡುವ ನಿರೀಕ್ಷೆಯನ್ನು ಚಿತ್ರತಂಡ ಹೊಂದಿದೆ ಎಂದವರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಪಮ್ಮಿ ಕೊಡಿಯಾಲ್ ಬೈಲ್ ,ರಾಜ್ ಪ್ರಕಾಶ್ ಶೆಟ್ಟಿ, ಡಿ.ಬಿ.ಸಿ. ಶೇಖರ್, ಕಾರ್ಯಕಾರಿ ನಿರ್ಮಾಪಕ ಅನಿಲ್ ಕರ್ಕೇರ ಉಪಸ್ಥಿತರಿದ್ದರು
.

