ರಾಯಚೂರು, ನ.11: ಪಾಠ ಸರಿಯಾಗಿ ಕಲಿಯುತ್ತಿಲ್ಲ ಎಂಬ ಕಾರಣಕ್ಕೆ 10 ವರ್ಷದ ಬಾಲಕನ ಮೇಲೆ ಶಿಕ್ಷಕನೊಬ್ಬ ಅಮಾನವೀಯವಾಗಿ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪಟ್ಟಣದ ಮದರಸಾವೊಂದರಲ್ಲಿ ಬೆಳಕಿಗೆ ಬಂದಿದೆ.
ಕವಿತಾಳದಲ್ಲಿರುವ ‘ಮದರಸಾ ದಾರುಲ್ ಹುಫ್ಫಾಜ್’ನಲ್ಲಿ ಮೂರನೇ ತರಗತಿಯಲ್ಲಿ ಓದುತ್ತಿದ್ದ ಬಾಲಕ ಶಿಕ್ಷಕನ ಕ್ರೌರ್ಯಕ್ಕೆ ತುತ್ತಾಗಿದ್ದಾನೆ. ಬಾಲಕನ ಬಾಯಿಗೆ ಬಟ್ಟೆ ತುರುಕಿ, ಕಣ್ಣು, ಬೆನ್ನು ಹಾಗೂ ಹೊಟ್ಟೆಯ ಭಾಗಕ್ಕೆ ಮನಬಂದಂತೆ ಥಳಿಸಿರುವ ಆರೋಪ ಕೇಳಿಬಂದಿದೆ. ಹಲ್ಲೆಯಿಂದಾಗಿ ಬಾಲಕನ ಕಣ್ಣುಗಳು ಊದಿಕೊಂಡಿದ್ದು, ದೇಹದ ವಿವಿಧ ಭಾಗಗಳಲ್ಲಿ ಗಾಯಗಳಾಗಿವೆ. ತೀವ್ರ ನೋವಿನಿಂದ ಬಾಲಕ ನರಳಾಡುವ ಸ್ಥಿತಿ ನಿರ್ಮಾಣವಾಗಿದೆ.
ಮಗನಿಗೆ ಉತ್ತಮ ಶಿಕ್ಷಣ ದೊರೆಯಲಿ ಎಂಬ ಉದ್ದೇಶದಿಂದ ತಂದೆ ಅಬ್ದುಲ್ ನಹೀಮ್ ಅವರು ಎರಡು ವರ್ಷಗಳ ಹಿಂದೆ ಮದರಸಾಕ್ಕೆ ದಾಖಲಿಸಿದ್ದರು. ನವೆಂಬರ್ 8ರಂದು ಮಗನನ್ನು ನೋಡಲು ಮದರಸಾಕ್ಕೆ ತೆರಳಿದ ಸಂದರ್ಭದಲ್ಲಿ ಬಾಲಕನ ದುಸ್ಥಿತಿ ಕಂಡು ತಂದೆ ಬೆಚ್ಚಿಬಿದ್ದಿದ್ದಾರೆ. ಮಗನ ದೇಹದ ಮೇಲಿನ ಗಾಯಗಳು ಹಾಗೂ ಆತನ ನೋವಿನ ಸ್ಥಿತಿಯ ಬಗ್ಗೆ ವಿಚಾರಿಸಿದಾಗ ಶಿಕ್ಷಕ ಅಬ್ಬಾಸ್ ಹಲ್ಲೆ ನಡೆಸಿರುವ ವಿಚಾರ ಬಹಿರಂಗವಾಗಿದೆ.
ಈ ಕುರಿತು ತಂದೆ ಪ್ರಶ್ನಿಸಿದಾಗ, ಬಾಲಕನಿಗೆ ಓದಲು ಬರುತ್ತಿಲ್ಲ. ಹೊಡೆದರೆ ಚೆನ್ನಾಗಿ ಓದುತ್ತಾನೆ ಎಂಬ ರೀತಿಯಲ್ಲಿ ಶಿಕ್ಷಕ ಅಬ್ಬಾಸ್ ಉತ್ತರಿಸಿದ್ದಾನೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ತಂದೆ ಕವಿತಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಹಲ್ಲೆ ನಡೆಸಿದ ಆರೋಪದ ಶಿಕ್ಷಕ ಅಬ್ಬಾಸ್, ಮುಖ್ಯ ಶಿಕ್ಷಕ ಹಜಮ್ ಮುರಾರಿ ಸೇರಿದಂತೆ ಮದರಸಾದ ಒಟ್ಟು ಆರು ಸಿಬ್ಬಂದಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಗಾಯಗೊಂಡಿರುವ ಬಾಲಕನಿಗೆ ಲಿಂಗಸುಗೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ದಾಖಲಾದ ಬೆನ್ನಲ್ಲೇ ಆರೋಪಿ ಶಿಕ್ಷಕ ಅಬ್ಬಾಸ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಎರಡು ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಇದೇ ಮದರಸಾದಲ್ಲಿ ಈ ಹಿಂದೆ ಮತ್ತೊಬ್ಬ ಬಾಲಕನ ಮೇಲೂ ಹಲ್ಲೆ ನಡೆಸಿ ಕಾಲು ಮುರಿಯಲಾಗಿತ್ತು ಹಾಗೂ ಆ ಪ್ರಕರಣವನ್ನು ಮುಚ್ಚಿಹಾಕಲಾಗಿತ್ತು ಎಂಬ ಗಂಭೀರ ಆರೋಪಗಳು ಇದೀಗ ಕೇಳಿಬಂದಿವೆ. ಈ ಆರೋಪಗಳ ಬಗ್ಗೆಯೂ ಸಮಗ್ರ ತನಿಖೆ ನಡೆಸಲಾಗುವುದು ಎಂದು ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ತಿಳಿಸಿದ್ದಾರೆ.
ಮಕ್ಕಳಿಗೆ ಓದಲು ಅಥವಾ ಬರೆಯಲು ತೊಂದರೆಯಿದ್ದರೆ ಅವರ ಪೋಷಕರ ಗಮನಕ್ಕೆ ತಂದು ಸೂಕ್ತ ಮಾರ್ಗದರ್ಶನ ನೀಡಬೇಕು. ಅದನ್ನು ಬಿಟ್ಟು ದೈಹಿಕವಾಗಿ ಹಿಂಸಿಸುವುದು ಕಾನೂನಿನಡಿ ಗಂಭೀರ ಅಪರಾಧವಾಗಿದ್ದು, ಇಂತಹ ಕೃತ್ಯಗಳನ್ನು ಸಹಿಸುವುದಿಲ್ಲ ಎಂದು ಎಸ್ಪಿ ಶಿಕ್ಷಕರಿಗೆ ಎಚ್ಚರಿಕೆ ನೀಡಿದ್ದಾರೆ.

