ಮಂಗಳೂರು: ಕೊಂಕಣಿ ಸಂಗೀತ ಕ್ಷೇತ್ರದಲ್ಲಿ ಹೊಸ ಇತಿಹಾಸ ನಿರ್ಮಿಸುವ ಉದ್ದೇಶದಿಂದ ಮಾಂಡ್ ಸೊಭಾಣ್ ಸಂಸ್ಥೆ ನಗರದ ಟೌನ್ ಹಾಲ್ನಲ್ಲಿ ಆಯೋಜಿಸಿರುವ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾಸಮಾವೇಶದ ನಿರಂತರ ಗಾಯನ ಕಾರ್ಯಕ್ರಮ 200 ಗಂಟೆಗಳನ್ನು ಯಶಸ್ವಿಯಾಗಿ ಪೂರೈಸಿದೆ. ಈ ಮೂಲಕ ಸಂಗೀತದ ಸುದೀರ್ಘ ಪಯಣದಲ್ಲಿ ಮತ್ತೊಂದು ಮಹತ್ವದ ಸಾಧನೆ ದಾಖಲೆಯಾಗಿದ್ದು, ಇದೀಗ 300 ಗಂಟೆಗಳ ವಿಶ್ವ ದಾಖಲೆಯ ಗುರಿಯತ್ತ ಕಾರ್ಯಕ್ರಮ ಮುನ್ನಡೆಯುತ್ತಿದೆ.

200ನೇ ಗಂಟೆಯ ವಿಶೇಷ ಘಟ್ಟದಲ್ಲಿ ಕುಂದಾಪುರದ ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ತಂಡವು ವೇದಿಕೆಯಲ್ಲಿ ಸಂಗೀತ ಪ್ರದರ್ಶನ ನೀಡಿ ಪ್ರೇಕ್ಷಕರ ಗಮನ ಸೆಳೆಯಿತು. ಈ ಐತಿಹಾಸಿಕ ಕ್ಷಣವನ್ನು ಮಾಂಡ್ ಸೊಭಾಣ್ ಅಧ್ಯಕ್ಷ ಲೂಯಿಸ್ ಜೆ. ಪಿಂಟೋ ಅವರ ನೇತೃತ್ವದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಗಾಯನ ಮಹೋತ್ಸವದ 200 ಗಂಟೆಗಳ ಸಾಧನೆಯನ್ನು ಸ್ಮರಣೀಯವಾಗಿಸಲು ಆಯೋಜಕರು, ಸ್ವಯಂಸೇವಕರು ಹಾಗೂ ಸಂಗೀತಾಭಿಮಾನಿಗಳು ಬ್ಯಾಂಡ್ ವಾದ್ಯಗಳೊಂದಿಗೆ ಸಂಭ್ರಮಿಸಿದರು. ಪಟಾಕಿ ಸಿಡಿಸಿ ಸಂಭ್ರಮ ಹಂಚಿಕೊಂಡರು. ತುಳು ರಂಗಭೂಮಿ ಮತ್ತು ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ಬೈಲ್ ಸೇರಿದಂತೆ ಹಲವು ಗಣ್ಯರು ಹಾಗೂ ನೂರಾರು ಸಂಗೀತಾಸಕ್ತರು ಈ ಸಂಭ್ರಮಕ್ಕೆ ಸಾಕ್ಷಿಯಾದರು. ನಿರಂತರವಾಗಿ ಗಾಯನದಲ್ಲಿ ತೊಡಗಿರುವ ವಿವಿಧ ತಂಡಗಳ ಕಲಾವಿದರನ್ನು ಅಭಿನಂದಿಸಿ ಪ್ರೋತ್ಸಾಹಿಸಿದರು.

200 ಗಂಟೆಗಳ ಮೈಲಿಗಲ್ಲು ದಾಟಿರುವ ಈ ಮಹಾ ಗಾಯನ ಯಜ್ಞವು ಇದೀಗ 300 ಗಂಟೆಗಳ ವಿಶ್ವ ದಾಖಲೆಯ ಗುರಿಯನ್ನು ಮುಟ್ಟುವತ್ತ ಸಾಗುತ್ತಿದೆ. ಮಾಂಡ್ ಸೊಭಾಣ್ ಸಂಸ್ಥೆಯ ಆಶ್ರಯದಲ್ಲಿ ಜಾಗತಿಕ ಕೊಂಕಣಿ ಸಮುದಾಯದ ಸಹಕಾರದೊಂದಿಗೆ ನಡೆಯುತ್ತಿರುವ ಈ ವಿಶಿಷ್ಟ ಪ್ರಯತ್ನದಲ್ಲಿ ವಿವಿಧ ಪ್ರದೇಶಗಳ ಅನೇಕ ಕಲಾವಿದರು ಭಾಗವಹಿಸುತ್ತಿದ್ದು, ಬಹು ಕಲಾವಿದರ ಸಹಭಾಗಿತ್ವದಲ್ಲಿ ಅತಿ ದೀರ್ಘಕಾಲ ನಿರಂತರ ಗಾಯನ ನಡೆಸಿದ ವಿಶ್ವ ದಾಖಲೆಯನ್ನು ನಿರ್ಮಿಸುವ ಮಹತ್ವಾಕಾಂಕ್ಷೆ ಹೊಂದಿದೆ.

ಒಟ್ಟು 12 ದಿನ, 12 ಗಂಟೆ ಮತ್ತು 12 ನಿಮಿಷಗಳ ಕಾಲ ನಿರಂತರವಾಗಿ ನಡೆಯಲಿರುವ ಈ ಸಂಗೀತ ಮಹೋತ್ಸವವು ನವೆಂಬರ್ 15ರ ಭಾನುವಾರ ಸಂಜೆ 5 ಗಂಟೆಗೆ ಮಂಗಳೂರಿನ ಟೌನ್ ಹಾಲ್ನಲ್ಲಿ ಸಮಾಪನಗೊಳ್ಳಲಿದೆ. ಈ ಐತಿಹಾಸಿಕ ಕ್ಷಣಕ್ಕೆ ದೇಶ-ವಿದೇಶಗಳ ಕೊಂಕಣಿ ಸಂಗೀತ ಪ್ರೇಮಿಗಳು, ಸಾಂಸ್ಕೃತಿಕ ಗಣ್ಯರು ಹಾಗೂ ಸಮುದಾಯದ ಪ್ರಮುಖರು ಸಾಕ್ಷಿಯಾಗುವ ನಿರೀಕ್ಷೆಯಿದೆ.

