ದುಬೈ: ಯುಎಇಯ ಫುಜೈರಾದಲ್ಲಿ ಸಂಭವಿಸಿದ ಭೀಕರ ಸರಣಿ ರಸ್ತೆ ಅಪಘಾತದಲ್ಲಿ 14 ಮಂದಿ ಮೃತಪಟ್ಟಿದ್ದು, 30 ಜನರು ಗಾಯಗೊಂಡಿದ್ದಾರೆ. 18 ಕಾರುಗಳು ಹಾಗೂ ಐದು ಟ್ರಕ್ಗಳು ಸೇರಿದಂತೆ ಒಟ್ಟು 23 ವಾಹನಗಳು ಅಪಘಾತದಲ್ಲಿ ಸಿಲುಕಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆಗೆ ಹಲವಾರು ವಾಹನಗಳು ಆಹುತಿಯಾಗಿವೆ. ಘಟನೆಯ ಬಗ್ಗೆ ಯುಎಇ ಆಂತರಿಕ ಸಚಿವಾಲಯ ಅಧಿಕೃತ ಮಾಹಿತಿ ನೀಡಿದೆ.

ಬುಧವಾರ ಮಧ್ಯರಾತ್ರಿ ಫುಜೈರಾ ಪ್ರವೇಶ ದ್ವಾರದ ಶೇಖ್ ಖಲೀಫಾ ಬಿನ್ ಜಾಯೆದ್ ರಸ್ತೆಯಲ್ಲಿ ಈ ಭೀಕರ ದುರಂತ ಸಂಭವಿಸಿದೆ. ವೇಗವಾಗಿ ಚಲಿಸುತ್ತಿದ್ದ ಟ್ರಕ್ನ ಚಾಲಕ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡ ಪರಿಣಾಮ ಟ್ರಕ್ ಪಲ್ಟಿಯಾಗಿ, ಸಂಚಾರ ದಟ್ಟಣೆಯಿಂದಾಗಿ ರಸ್ತೆಯಲ್ಲಿ ನಿಂತಿದ್ದ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಟ್ರಕ್ಗೆ ಬೆಂಕಿ ಹೊತ್ತಿಕೊಂಡಿದ್ದು, ಕ್ಷಣಾರ್ಧದಲ್ಲಿ ಬೆಂಕಿ ಸುತ್ತಮುತ್ತಲಿನ ವಾಹನಗಳಿಗೂ ವ್ಯಾಪಿಸಿದೆ. ಇದರಿಂದಾಗಿ ಸರಣಿ ಅಪಘಾತ ಸಂಭವಿಸಿ ಭಾರೀ ಪ್ರಮಾಣದ ಪ್ರಾಣಹಾನಿ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದಲ್ಲಿ ಮೃತಪಟ್ಟವರಲ್ಲಿ ಯುಎಇ ಪ್ರಜೆಗಳೂ ಸೇರಿದ್ದಾರೆ. ಕೆಲವು ಮೃತದೇಹಗಳನ್ನು ಗುರುತಿಸುವುದು ಕಷ್ಟವಾಗಿರುವ ಹಿನ್ನೆಲೆಯಲ್ಲಿ ಗುರುತು ಪತ್ತೆಗಾಗಿ ಡಿಎನ್ಎ ಪರೀಕ್ಷೆ ನಡೆಸಲಾಗುತ್ತಿದೆ. ಗಾಯಗೊಂಡವರಲ್ಲಿ ಯುಎಇ, ಓಮನ್, ಭಾರತ, ಬ್ರೆಜಿಲ್, ಪಾಕಿಸ್ತಾನ, ಜೋರ್ಡಾನ್ ಮತ್ತು ಈಜಿಪ್ಟ್ ದೇಶಗಳ ನಾಗರಿಕರಿದ್ದಾರೆ.
ಗಾಯಾಳುಗಳ ಪೈಕಿ 15 ಮಂದಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಉಳಿದ 15 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳಿಗೆ ಅತ್ಯುತ್ತಮ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗಿದ್ದು, ಅವರ ಆರೋಗ್ಯದ ಮೇಲೆ ವೈದ್ಯರು ನಿಗಾ ಇರಿಸಿದ್ದಾರೆ.

ಘಟನೆಯ ಮಾಹಿತಿ ಲಭಿಸುತ್ತಿದ್ದಂತೆ ಪೊಲೀಸರು, ಆಂಬ್ಯುಲೆನ್ಸ್ ಹಾಗೂ ನಾಗರಿಕ ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿ ತುರ್ತು ರಕ್ಷಣಾ ಕಾರ್ಯಾಚರಣೆ ಕೈಗೊಂಡವು. ಬೆಂಕಿ ನಂದಿಸುವುದರ ಜತೆಗೆ ಗಾಯಾಳುಗಳನ್ನು ರಕ್ಷಿಸಿ, ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಪಘಾತದ ಸ್ಥಳವನ್ನು ಭದ್ರಪಡಿಸಿ, ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಂಡರು.
ಅಪಘಾತಕ್ಕೆ ನಿಖರವಾದ ಕಾರಣ ಮತ್ತು ಘಟನೆಗೆ ಸಂಬಂಧಿಸಿದ ಇತರ ಅಂಶಗಳನ್ನು ಪತ್ತೆಹಚ್ಚಲು ಫುಜೈರಾ ಪೊಲೀಸ್ ಜನರಲ್ ಕಮಾಂಡ್ ತನಿಖೆ ಆರಂಭಿಸಿದೆ. ಇದೇ ವೇಳೆ, ಸಾವಿನ ಸಂಖ್ಯೆ, ಗಾಯಾಳುಗಳ ವಿವರ ಹಾಗೂ ಅವರ ರಾಷ್ಟ್ರೀಯತೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ದೃಢೀಕರಿಸದ ಮಾಹಿತಿಗಳನ್ನು ಹರಡದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಅಧಿಕೃತ ಮೂಲಗಳ ಮಾಹಿತಿಯನ್ನಷ್ಟೇ ನಂಬುವಂತೆ ಮನವಿ ಮಾಡಿದೆ.

