ಮಂಗಳೂರು: ಕರ್ನಾಟಕ ಕಿವುಡರ ಕ್ರೀಡಾ ಒಕ್ಕೂಟದ ವತಿಯಿಂದ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಿವುಡರ ಸಂಘದ ಆತಿಥ್ಯದಲ್ಲಿ 12ನೇ ಕರ್ನಾಟಕ ರಾಜ್ಯ ಕಿವುಡರ ಟಿ20 ಟೆನ್ನಿಸ್ ಬಾಲ್ ಕ್ರಿಕೆಟ್ ಚಾಂಪಿಯನ್ಶಿಪ್ – 2026 ಅನ್ನು ಡಿಸೆಂಬರ್ 4ರಿಂದ 6ರವರೆಗೆ ಮಂಗಳೂರಿನಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ಕಿವುಡರ ಕ್ರೀಡಾ ಒಕ್ಕೂಟದ ಅಧ್ಯಕ್ಷ ಚರಣ್ ಕುಮಾರ್ ಟಿ.ಸಿ.ತಿಳಿಸಿದ್ದಾರೆ.
ಪತ್ರಿಕಾಭವನದಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಕ್ರೀಡಾಕೂಟದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಒಟ್ಟು 24 ಜಿಲ್ಲಾ ತಂಡಗಳು ಭಾಗವಹಿಸಲಿವೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ಕಿವುಡ ಕ್ರೀಡಾಪಟುಗಳು ತಮ್ಮ ಕ್ರೀಡಾ ಪ್ರತಿಭೆ, ಸಾಮರ್ಥ್ಯ ಮತ್ತು ತಂಡದ ಒಗ್ಗಟ್ಟನ್ನು ಪ್ರದರ್ಶಿಸಲಿದ್ದಾರೆ.

ಡಿಸೆಂಬರ್ 4ರಂದು ಬೆಳಿಗ್ಗೆ 9:30 ಗಂಟೆಗೆ ಮಂಗಳೂರಿನ ನೆಹರು ಮೈದಾನದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ರಾಜಕೀಯ ನಾಯಕರು, ಜನಪ್ರತಿನಿಧಿಗಳು, ಜಿಲ್ಲಾಡಳಿತದ ಅಧಿಕಾರಿಗಳು, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು, ಕ್ರೀಡಾ ಇಲಾಖೆಯ ಅಧಿಕಾರಿಗಳು ಮತ್ತು ವಿವಿಧ ಸಂಘ-ಸಂಸ್ಥೆಗಳ ಗಣ್ಯರನ್ನು ಆಹ್ವಾನಿಸಲಾಗುತ್ತಿದೆ.
ಉದ್ಘಾಟನಾ ಕಾರ್ಯಕ್ರಮದ ನಂತರ ಎಲ್ಲಾ ತಂಡಗಳು ತಮಗೆ ನಿಗದಿಪಡಿಸಿದ ಗುಂಪಿನ ಮೈದಾನಗಳಿಗೆ ತೆರಳಿ ಪಂದ್ಯಗಳಲ್ಲಿ ಭಾಗವಹಿಸಲಿವೆ. ಪಂದ್ಯಗಳು ನಾಲ್ಕು ಮೈದಾನಗಳಲ್ಲಿ ನಡೆಯಲಿವೆ. ಗುಂಪು A ಪಂದ್ಯಗಳು ಬೊಂದೇಲ್ ದೊಡ್ಡ ಮೈದಾನದಲ್ಲಿ, ಗುಂಪು B ಪಂದ್ಯಗಳು ಎ.ಜೆ ಮೈದಾನದಲ್ಲಿ, ಗುಂಪು C ಪಂದ್ಯಗಳು ನೆಹರು ಮೈದಾನದಲ್ಲಿ ಹಾಗೂ ಗುಂಪು D ಪಂದ್ಯಗಳು ಪದುವ ಓವರ್ಹೆಡ್ ನೀರಿನ ಟ್ಯಾಂಕ್ ಸಮೀಪದ ಮೈದಾನದಲ್ಲಿ ನಡೆಯಲಿವೆ.

ವಿವಿಧ ಜಿಲ್ಲೆಗಳಿಂದ ಆಗಮಿಸುವ ಆಟಗಾರರ ವಸತಿಗಾಗಿ KPTCL Employees Sabha Bhavana ವ್ಯವಸ್ಥೆ ಮಾಡಲಾಗಿದೆ. ಆಟಗಾರರಿಗೆ ಅಗತ್ಯವಿರುವ ಆಹಾರ, ಕುಡಿಯುವ ನೀರು ಮತ್ತು ಇತರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಆಯೋಜಕರು ಕ್ರಮ ಕೈಗೊಳ್ಳುತ್ತಿದ್ದಾರೆ.
ಈ ಚಾಂಪಿಯನ್ಶಿಪ್ನಲ್ಲಿ ಪ್ರಥಮ ಬಹುಮಾನವಾಗಿ ₹1,00,000, ದ್ವಿತೀಯ ಬಹುಮಾನವಾಗಿ ₹50,000 ಮತ್ತು ತೃತೀಯ ಬಹುಮಾನವಾಗಿ ₹25,000 ನೀಡಲಾಗುವುದು.
ಕರ್ನಾಟಕ ಕಿವುಡರ ಕ್ರೀಡಾ ಒಕ್ಕೂಟವು ಕರ್ನಾಟಕ ಕ್ರೀಡಾ ಪ್ರಾಧಿಕಾರದ ಮಾನ್ಯತೆ ಹೊಂದಿದ್ದು, ಅಖಿಲ ಭಾರತ ಕಿವುಡರ ಕ್ರೀಡಾ ಮಂಡಳಿಯೊಂದಿಗೆ ಸಂಯೋಜಿತವಾಗಿದೆ. ರಾಜ್ಯದ ವಿವಿಧ ಜಿಲ್ಲಾ ಕಿವುಡರ ಸಂಘಗಳು ಒಕ್ಕೂಟದೊಂದಿಗೆ ಸಂಯೋಜಿತವಾಗಿ ಕ್ರೀಡಾ ಚಟುವಟಿಕೆಗಳನ್ನು ನಡೆಸುತ್ತಿವೆ. ಕಿವುಡ ಕ್ರೀಡಾಪಟುಗಳಿಗೆ ಸಮಾನ ಅವಕಾಶ, ಉತ್ತಮ ತರಬೇತಿ, ಕ್ರೀಡಾ ಸೌಲಭ್ಯಗಳು ಮತ್ತು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸುವುದು ಈ ಕ್ರೀಡಾಕೂಟದ ಪ್ರಮುಖ ಉದ್ದೇಶವಾಗಿದೆ.
ಈ ರೀತಿಯ ಕ್ರೀಡಾಕೂಟಗಳನ್ನು ಆಯೋಜಿಸಲು ಹೆಚ್ಚಿನ ಆರ್ಥಿಕ ನೆರವು ಮತ್ತು ಪ್ರಾಯೋಜಕತ್ವದ ಅಗತ್ಯವಿದೆ. ಪ್ರಸ್ತುತ ಕರ್ನಾಟಕ ಕಿವುಡರ ಕ್ರೀಡಾ ಒಕ್ಕೂಟ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕಿವುಡರ ಸಂಘವು ತಮ್ಮ ಲಭ್ಯವಿರುವ ಸಂಪನ್ಮೂಲಗಳೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶ್ರಮಿಸುತ್ತಿವೆ. ಆದರೆ 24 ಜಿಲ್ಲಾ ತಂಡಗಳ ಆಟಗಾರರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲು ಇನ್ನಷ್ಟು ಸಹಕಾರ ಅಗತ್ಯವಿದೆ.
ಆದ್ದರಿಂದ ಕರ್ನಾಟಕ ಸರ್ಕಾರ, ಕ್ರೀಡಾ ಇಲಾಖೆ, ಜನಪ್ರತಿನಿಧಿಗಳು, ಉದ್ಯಮಿಗಳು, ಕಂಪನಿಗಳು, CSR ಸಂಸ್ಥೆಗಳು, ದಾನಿಗಳು ಮತ್ತು ಸಾರ್ವಜನಿಕರು ಕಿವುಡ ಕ್ರೀಡಾಪಟುಗಳ ಅಭಿವೃದ್ಧಿಗೆ ಆರ್ಥಿಕ ನೆರವು ಹಾಗೂ ಪ್ರಾಯೋಜಕತ್ವ ನೀಡುವಂತೆ ಅಧ್ಯಕ್ಷ ಚರಣ್ ಕುಮಾರ್ ಟಿ.ಸಿ. ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ದ.ಕ ಜಿಲ್ಲಾ ಕಿವುಡರ ಸಂಘದ ಅಧ್ಯಕ್ಷ ಮನೋಜ್, ಕಾರ್ಯದರ್ಶಿ ಚೇತನ್ ಕುಮಾರ್, ಖಜಾಂಚಿ ರಮೇಶ್, ಸದಸ್ಯರಾದ ಯಶವಂತ, ಅಂಡ್ರಿನ್ ಉಪಸ್ಥಿತರಿದ್ದರು
.

