ಮಂಗಳೂರು: ಸೇಂಟ್ ಅಲೋಶಿಯಸ್ ಕಾಲೇಜು ಹಳೆಯ ವಿದ್ಯಾರ್ಥಿಗಳ ಸಂಘದ (SACAA) ಭಾಗವಾಗಿರುವ ಸೇಂಟ್ ಅಲೋಶಿಯಸ್ ಹೈಯರ್ ಪ್ರೈಮರಿ ಸ್ಕೂಲ್ ಹಳೆಯ ವಿದ್ಯಾರ್ಥಿಗಳ ಸಂಘವು ರೋಹನ್ ಕಾರ್ಪೊರೇಷನ್ ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ ವಿನೂತನ ರಸಪ್ರಶ್ನೆ ಸ್ಪರ್ಧೆ ‘ಅಲೋಯ್ ಕ್ವಿಜ್-ವಿಜ್ 2026’ ಅನ್ನು ಆಯೋಜಿಸಿದೆ ಎಂದು ಸಂಘದ ಕಾರ್ಯದರ್ಶಿ ನೀಲ್ ರಾಡ್ರಿಗಸ್ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ನವೆಂಬರ್ 15ರ ಭಾನುವಾರ ಮಂಗಳೂರಿನ ಪಾಂಡೇಶ್ವರದಲ್ಲಿರುವ ಫಿಝಾ ಬೈ ನೆಕ್ಸಸ್ ಮಾಲ್ನಲ್ಲಿ ಮಧ್ಯಾಹ್ನ 2ರಿಂದ ಸಂಜೆ 5.30ರವರೆಗೆ ಈ ಸ್ಪರ್ಧೆ ನಡೆಯಲಿದೆ. ನಂತರ ಸ್ವರ್ಧಾ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಜರುಗಲಿದೆ.

ವಿಶೇಷ ಮಕ್ಕಳಿಗೂ ಸಮಾನ ಅವಕಾಶ, ತಂಡ ಭಾವನೆಗೆ ಆದ್ಯತೆ
ಈ ರಸಪ್ರಶ್ನೆ ಸ್ಪರ್ಧೆಯ ವಿಶೇಷತೆಯೆಂದರೆ ವಿಶೇಷ ಚೇತನ ಮಕ್ಕಳು ಹಾಗೂ ಇತರ ಮಕ್ಕಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ಸಮಾನ ಅವಕಾಶ ಕಲ್ಪಿಸುವುದು. ಪ್ರತಿಯೊಂದು ತಂಡದಲ್ಲಿ ಒಬ್ಬ ದೃಷ್ಟಿದೋಷ ಹೊಂದಿರುವ ವಿದ್ಯಾರ್ಥಿ, ಒಬ್ಬ ಶ್ರವಣ ಮತ್ತು ವಾಕ್ ದೋಷ ಹೊಂದಿರುವ ವಿದ್ಯಾರ್ಥಿ, ಒಬ್ಬ ಸರ್ಕಾರಿ ಶಾಲೆಯ ವಿದ್ಯಾರ್ಥಿ ಹಾಗೂ ಇಬ್ಬರು ಖಾಸಗಿ ಶಾಲೆಯ ವಿದ್ಯಾರ್ಥಿಗಳು ಇರಲಿದ್ದಾರೆ.
ಸಾಮಾನ್ಯವಾಗಿ ರಸಪ್ರಶ್ನೆ ಸ್ಪರ್ಧೆಗಳು ಜ್ಞಾನ ಮತ್ತು ಬೌದ್ಧಿಕ ಸಾಮರ್ಥ್ಯಕ್ಕೆ ಆದ್ಯತೆ ನೀಡುತ್ತವೆ. ಆದರೆ ಈ ಸ್ಪರ್ಧೆಯು ಜ್ಞಾನದ ಜೊತೆಗೆ ಸಮಾನತೆ, ಸಹಕಾರ ಮತ್ತು ತಂಡಭಾವನೆಗೆ ಹೆಚ್ಚಿನ ಮಹತ್ವ ನೀಡಲಿದೆ. ವಿಭಿನ್ನ ಸಾಮರ್ಥ್ಯ ಹೊಂದಿರುವ ಮಕ್ಕಳು ಪರಸ್ಪರ ಸಹಕರಿಸಿ, ತಮ್ಮ ನಡುವಿನ ಅಡೆತಡೆಗಳನ್ನು ಮೀರಿ ಒಟ್ಟಾಗಿ ಯಶಸ್ಸು ಸಾಧಿಸುವುದನ್ನು ಪ್ರೋತ್ಸಾಹಿಸುವುದು ಇದರ ಉದ್ದೇಶವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಡಾ. ಕ್ರಿಸ್ಟೋಫರ್ ಡಿಸೋಜಾ, ಮುಖ್ಯೋಪಾಧ್ಯಾಯಿನಿ ಜೋಸಿಟ್ಟಾ ಸಿಕ್ವೇರಾ ಉಪಸ್ಥಿತರಿದ್ದರು

