ಮಂಗಳೂರು: ತುಳುನಾಡಿನ ಕೃಷಿ ಸಂಸ್ಕೃತಿ, ಧಾರ್ಮಿಕ ಪರಂಪರೆ, ದೈವಾರಾಧನೆ ಹಾಗೂ ಕೌಟುಂಬಿಕ ಜೀವನಮೌಲ್ಯಗಳನ್ನು ಆಧರಿಸಿದ ವಿಶಿಷ್ಟ ಕಥಾಹಂದರದ ‘ಬೆಲ್ಲದಗಟ್ಟಿ’ ತುಳು ಚಲನಚಿತ್ರ ನವೆಂಬರ್ 20ರಂದು ಕರಾವಳಿಯಾದ್ಯಂತ ತೆರೆಕಾಣಲಿದೆ ಎಂದು ಚಿತ್ರದ ನಿರ್ದೇಶಕ ರಾಜಾ ಕಟಪಾಡಿ ತಿಳಿಸಿದ್ದಾರೆ.
ಚಿತ್ರದ ಕುರಿತು ಮಾಹಿತಿ ನೀಡಿದ ಅವರು, ಈಗಾಗಲೇ ವಿದೇಶಗಳಲ್ಲಿ ಹಾಗೂ ಉಡುಪಿ, ಮಣಿಪಾಲ ಮತ್ತು ಮಂಗಳೂರಿನಲ್ಲಿ ಆಯೋಜಿಸಲಾದ ಪ್ರೀಮಿಯರ್ ಪ್ರದರ್ಶನಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ತುಳು ಕಲಾಭಿಮಾನಿಗಳಿಂದ ಮೆಚ್ಚುಗೆ ಮತ್ತು ಪ್ರೋತ್ಸಾಹ ದೊರೆತಿರುವುದು ಚಿತ್ರತಂಡಕ್ಕೆ ಸಂತಸ ತಂದಿದೆ ಎಂದರು.

ಕಟೀಲ್ ಪ್ರಸಾದ್ ಪ್ರೊಡಕ್ಷನ್ಸ್, ಕಟಪಾಡಿ ಲಾಂಛನದಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರವು ಕೃಷಿ ಪ್ರಧಾನ ಕುಟುಂಬವೊಂದರ ಸಾಂಸಾರಿಕ ಬದುಕಿನ ಸುತ್ತ ಕಥೆಯನ್ನು ಹೆಣೆಯಲಾಗಿದೆ. ತುಳುನಾಡಿನ ಹಿರಿಯರ ಆಚರಣೆಗಳು, ಕೃಷಿ ಚಟುವಟಿಕೆಗಳು, ದೈವಾರಾಧನೆ, ಸಂಪ್ರದಾಯಗಳು, ಧಾರ್ಮಿಕ ಹಾಗೂ ಜಾನಪದ ಪರಂಪರೆ ಮತ್ತು ಶ್ರಮದಾಯಕ ಜೀವನಶೈಲಿಯನ್ನು ಚಿತ್ರದಲ್ಲಿ ನೈಜವಾಗಿ ಕಟ್ಟಿಕೊಡಲಾಗಿದೆ.
ತಪ್ಪು ಕಲ್ಪನೆಯಿಂದ ದೈವದ ಮುಂದೆ ಮಾಡುವ ಪ್ರಮಾಣವೊಂದು ಕುಟುಂಬದಲ್ಲಿ ಸೃಷ್ಟಿಸುವ ಘಟನೆಗಳು, ಅದರ ಪರಿಣಾಮಗಳು ಹಾಗೂ ತಮ್ಮ ತಪ್ಪಿನ ಅರಿವಿನೊಂದಿಗೆ ಸರಿ-ತಪ್ಪುಗಳ ನಡುವಿನ ಸಂಘರ್ಷದಲ್ಲಿ ಸಾಗುವ ಕೌಟುಂಬಿಕ ಬದುಕಿನ ಮೌಲ್ಯಗಳು ಚಿತ್ರದ ಪ್ರಮುಖ ಆಕರ್ಷಣೆಯಾಗಿವೆ.

ರಾಮಕೃಷ್ಣ ಸುಜೀರ್ ಬಾರ್ದಿಲ ಅವರು ಚಿತ್ರದ ನಿರ್ಮಾಪಕರಾಗಿದ್ದು, ಜಗತ್ ರಾಜಪಾಲ್ ಬಿಕರ್ಣಕಟ್ಟೆ ಅವರ ಪ್ರೇರಣೆಯಲ್ಲಿ ಸಿನಿಮಾ ನಿರ್ಮಾಣಗೊಂಡಿದೆ. ಚಿತ್ರದ ಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಹೊಣೆಯನ್ನು ರಾಜಾ ಕಟಪಾಡಿ ನಿರ್ವಹಿಸಿದ್ದಾರೆ. ಈ ಹಿಂದೆ ಕಿರುಚಿತ್ರಗಳು ಹಾಗೂ ಹಾಡುಗಳ ಮೂಲಕ ಯೂಟ್ಯೂಬ್ನಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದು ಗುರುತಿಸಿಕೊಂಡಿರುವ ರಾಜಾ ಕಟಪಾಡಿ ಅವರಿಗೆ ಇದು ಚೊಚ್ಚಲ ಚಲನಚಿತ್ರವಾಗಿದೆ.
ಪ್ರಜ್ವಲ್ ಸುವರ್ಣ ಸಂಕಲನ ಮತ್ತು ಛಾಯಾಗ್ರಹಣ ನಿರ್ವಹಿಸಿದ್ದು, 5.1 ಲೋಯ್, ಮಂಗಳೂರು ಸಂಸ್ಥೆ ಧ್ವನಿ ವಿನ್ಯಾಸದ ಜವಾಬ್ದಾರಿ ವಹಿಸಿದೆ. ಸಂದೇಶ್ ಬಾಬಣ್ಣ ಸಂಗೀತ ನಿರ್ದೇಶನ ಮಾಡಿದ್ದು, ಸಮನ್ವಿ ರೈ ಪುತ್ತೂರು ಹಾಗೂ ಕೆ.ಪಿ. ಮಿಲನ್ ಹಿನ್ನೆಲೆ ಗಾಯನ ನೀಡಿದ್ದಾರೆ. ಚಿತ್ರಕ್ಕೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ನಿಂದ ಯು/ಎ ಪ್ರಮಾಣಪತ್ರ ಲಭಿಸಿದೆ.

ನವೆಂಬರ್ 20ರಂದು ಬೆಳಗ್ಗೆ 9.30ಕ್ಕೆ ಮಂಗಳೂರಿನ ಭಾರತ್ ಮಾಲ್ನಲ್ಲಿರುವ ಭಾರತ್ ಸಿನಿಮಾ ಥಿಯೇಟರ್ನಲ್ಲಿ ಚಿತ್ರದ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಚಿತ್ರದ ಪ್ರಮುಖ ಪಾತ್ರಗಳಲ್ಲಿ ಮನೋಹರ್ ಶೆಟ್ಟಿ ನಂದಳಿಕೆ, ಸುಜಾತಾ ಶಕ್ತಿನಗರ, ವಿಜಿತ್ ಕೋಟ್ಯಾನ್, ಸುನಿಲ್ ನೆಲ್ಲಿಗುಡ್ಡೆ, ಕಿಶ್ಮಿತಾ ನವೀಶ್, ನಿತೇಶ್ ರಾಜ್, ಅಪೇಕ್ಷಾ ಶೆಟ್ಟಿ, ಸುಜಾತಾ ಶೆಟ್ಟಿ ಪೆರಿಂಜೆ, ಸೊಹಾನಾ ಶಂಕರ್, ಜಯಕರ್ ಕುಂದರ್, ದೀಕ್ಷಾ ಬ್ರಹ್ಮಾವರ, ಗುಣಪ್ರಸಾದ್, ಬಾಲನಟ ಕರಣ್, ಚೈತಾಲಿ ಶೇಟ್, ದೇಶ್ಯಾ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಜಗತ್ ರಾಜ್ ಪಾಲ್ ಭಂಡಾರಿ ಬಿಕರ್ಣಕಟ್ಟೆ, ನಿರ್ಮಾಪಕ ರಾಮಕೃಷ್ಣ ಸುಜೀರ್ ಬಾರ್ದಿಲ, ನಟ ವಿಜಿತ್ ಕೋಟ್ಯಾನ್, ಬಾಲನಟ ಕರಣ್ ಸಾಲಿಯಾನ್ ಸೇರಿದಂತೆ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು

