ಉಪ್ಪಿನಂಗಡಿ: ಸುಲಿಗೆ ಪ್ರಕರಣವೊಂದರಲ್ಲಿ ಕಳೆದ ಸುಮಾರು 10 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮಾಕುಂಡಿ ನಿವಾಸಿ ಮಸೂದ್ ಅಲಿಯಾಸ್ ಮಸೂರ ಬಂಧಿತ ಆರೋಪಿ. 2006ರಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕೌಕ್ರಾಡಿಯಲ್ಲಿ ವೈದ್ಯಕೀಯ ವೃತ್ತಿ ನಡೆಸುತ್ತಿದ್ದ ಶಿವಶಂಕರ್ ಶಾಸ್ತ್ರಿ ಅವರ ಮನೆಗೆ ನಾಲ್ವರು ಅಪರಿಚಿತರು ಚಿಕಿತ್ಸೆ ಪಡೆಯುವ ನೆಪದಲ್ಲಿ ಬಂದಿದ್ದರು. ಬಳಿಕ ಮನೆಯಲ್ಲಿದ್ದ ಶಿವಶಂಕರ್ ಶಾಸ್ತ್ರಿ ಹಾಗೂ ಅವರ ಪತ್ನಿಯನ್ನು ಬಲವಂತವಾಗಿ ಕಟ್ಟಿಹಾಕಿ, ಚಿನ್ನಾಭರಣ ಮತ್ತು ನಗದು ಸೇರಿದಂತೆ ಒಟ್ಟು 2,35,800 ರೂ. ಮೌಲ್ಯದ ಸೊತ್ತುಗಳನ್ನು ದೋಚಿ ಪರಾರಿಯಾಗಿದ್ದರು.
ಈ ಘಟನೆಯ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 187/2006ರಂತೆ ಭಾರತೀಯ ದಂಡ ಸಂಹಿತೆಯ ಕಲಂ 395 ಮತ್ತು 397ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಆರೋಪಿಯಾಗಿದ್ದ ಮಸೂದ್ ಸುಮಾರು 10 ವರ್ಷಗಳಿಂದ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು.
ಈತನ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ ಉಪ್ಪಿನಂಗಡಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೆಬಲ್ ನಂಜುಂಡಯ್ಯ (ಎಚ್ಸಿ 325) ಮತ್ತು ಪೊಲೀಸ್ ಕಾನ್ಸ್ಟೆಬಲ್ ಮ್ಯಾಥ್ಯೂ ವರ್ಗಿಸ್ (ಪಿಸಿ 1944) ಅವರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಳಿಕ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

