ಮಂಗಳೂರು: ಸುಮಾರು ಎರಡು ದಶಕಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎರಡು ಪ್ರತ್ಯೇಕ ಪ್ರಕರಣಗಳ ವಾರಂಟ್ ಆರೋಪಿಯನ್ನು ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಅವರ ಅಪರಾಧ ಪತ್ತೆ ತಂಡ ಬಂಧಿಸಿದೆ.
ಬಂಧಿತನನ್ನು ಮನೋಜ್ (44), ಕೃಷ್ಣ ಪೂಜಾರಿ ಅವರ ಪುತ್ರ, ಮಂಗಳೂರು ಎನ್ಎಂಆರ್ಟಿ ಕಾಲೋನಿಯ 2ನೇ ಅವಿನ್ಯೂ ನಿವಾಸಿ ಎಂದು ಗುರುತಿಸಲಾಗಿದೆ. ಪ್ರಸ್ತುತ ಈತ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೌಡೂರು ಗ್ರಾಮದ ರಂಗನ ಪಲ್ಕೆ ಅಂಚೆ ವ್ಯಾಪ್ತಿಯ ಕೃಷ್ಣಬೆಟ್ಟು ಹೌಸ್ನಲ್ಲಿ ವಾಸವಾಗಿದ್ದನು.
2005ರಲ್ಲಿ ನಡೆದ ಕೋಮು ಗಲಭೆಯ ಸಂದರ್ಭದಲ್ಲಿ ಕೊಲೆಯಾಗಿದ್ದ ಪೊಳಲಿ ಅನಂತು ಅವರ ಮೃತದೇಹದ ಮೆರವಣಿಗೆಯ ವೇಳೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಬಜಪೆ ಪೊಲೀಸ್ ಠಾಣೆಯಲ್ಲಿ ಮನೋಜ್ ವಿರುದ್ಧ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.
ಈ ಸಂಬಂಧ ಬಜಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 101/2005ರ ಅಡಿಯಲ್ಲಿ ಐಪಿಸಿ ಕಲಂ 143, 147, 148, 448, 427 ಹಾಗೂ 149 ಮತ್ತು ಕೆಪಿಡಿಎಲ್ಪಿ ಕಾಯ್ದೆಯ ಕಲಂ 2(1)(ಎ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವು ಮಂಗಳೂರಿನ 3ನೇ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಸಿಸಿ ನಂ. 4048/2007ರಂತೆ ವಿಚಾರಣೆಯಲ್ಲಿತ್ತು.
ಅದೇ ರೀತಿ, ಅಪರಾಧ ಸಂಖ್ಯೆ 104/2005ರ ಅಡಿಯಲ್ಲಿ ಐಪಿಸಿ ಕಲಂ 143, 147, 148, 447, 427 ಹಾಗೂ 149ರಂತೆ ಮತ್ತೊಂದು ಪ್ರಕರಣ ದಾಖಲಾಗಿದ್ದು, ಇದು ಸಿಸಿ ನಂ. 4049/2007ರಂತೆ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿತ್ತು.
2007ರಲ್ಲಿ ವಿದೇಶಕ್ಕೆ ತೆರಳಿದ್ದ ಮನೋಜ್, ಬಳಿಕ ವಿದೇಶದಿಂದ ಮರಳಿದ್ದರೂ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಮೊದಲ ಪ್ರಕರಣದಲ್ಲಿ ಎಲ್ಪಿಸಿ ನಂ. 26/2016 ಹಾಗೂ ಎರಡನೇ ಪ್ರಕರಣದಲ್ಲಿ ಎಲ್ಪಿಸಿ ನಂ. 50/2016ರಂತೆ ವಾರಂಟ್ ಹೊರಡಿಸಿತ್ತು.
ಸುಮಾರು 20 ವರ್ಷಗಳಿಂದ ಪೊಲೀಸರಿಗೆ ಹಾಗೂ ನ್ಯಾಯಾಲಯದ ವಿಚಾರಣೆಗೆ ಸಿಗದೆ ತಪ್ಪಿಸಿಕೊಂಡಿದ್ದ ಆರೋಪಿಯನ್ನು ನವೆಂಬರ್ 14ರಂದು ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಅವರ ಅಪರಾಧ ಪತ್ತೆ ತಂಡ ಪತ್ತೆಹಚ್ಚಿ ವಶಕ್ಕೆ ಪಡೆದಿದೆ. ಬಳಿಕ ಆರೋಪಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಬಜಪೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

