ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೇಕ್ಆಫ್ ಆಗುವ ಕೊನೆಯ ಕ್ಷಣದಲ್ಲಿ ವಿಮಾನದ ಇಂಜಿನ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ಪೈಲೆಟ್ನ ಸಮಯಪ್ರಜ್ಞೆಯಿಂದ ತಪ್ಪಿದ ಘಟನೆ ನಡೆದಿದೆ. ವಿಮಾನದಲ್ಲಿದ್ದ 229 ಪ್ರಯಾಣಿಕರು ಹಾಗೂ 7 ಮಂದಿ ಸಿಬ್ಬಂದಿ ಸೇರಿದಂತೆ ಒಟ್ಟು 236 ಮಂದಿ ಸುರಕ್ಷಿತವಾಗಿದ್ದಾರೆ.
ಮಂಗಳೂರಿನಿಂದ ಬೆಂಗಳೂರಿಗೆ ನಿನ್ನೆ ಸಂಜೆ ತೆರಳಲು ಸಿದ್ಧವಾಗಿದ್ದ ಇಂಡಿಗೋ ಸಂಸ್ಥೆಯ ವಿಮಾನವು ರನ್ವೇಯಲ್ಲಿ ಟೇಕ್ಆಫ್ ಪ್ರಕ್ರಿಯೆ ಆರಂಭಿಸಿತ್ತು. ಈ ವೇಳೆ ವಿಮಾನದ ಇಂಜಿನ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ ಎನ್ನಲಾಗಿದೆ. ಪರಿಸ್ಥಿತಿಯನ್ನು ತಕ್ಷಣವೇ ಅರಿತ ಪೈಲೆಟ್, ವಿಮಾನವನ್ನು ಟೇಕ್ಆಫ್ ಮಾಡದೆ ಕೊನೆಯ ಕ್ಷಣದಲ್ಲಿ ತುರ್ತಾಗಿ ಬ್ರೇಕ್ ಹಾಕಿ ಸುರಕ್ಷಿತವಾಗಿ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.
ಪೈಲೆಟ್ ತಕ್ಷಣ ಕಾರ್ಯಪ್ರವೃತ್ತರಾದ ಕಾರಣ ಸಂಭವಿಸಬಹುದಾಗಿದ್ದ ದೊಡ್ಡ ಮಟ್ಟದ ದುರಂತ ತಪ್ಪಿದೆ. ಬಳಿಕ ವಿಮಾನವನ್ನು ಸುರಕ್ಷಿತವಾಗಿ ನಿಲ್ಲಿಸಿ, ಅದರಲ್ಲಿದ್ದ ಎಲ್ಲ ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ಕೆಳಗಿಳಿಸಲಾಯಿತು.
ಘಟನೆಯ ಬಳಿಕ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಇಂಡಿಗೋ ವಿಮಾನಯಾನ ಸಂಸ್ಥೆಯು ಬೆಂಗಳೂರಿಗೆ ತೆರಳಲು ಪರ್ಯಾಯ ವಿಮಾನದ ವ್ಯವಸ್ಥೆ ಮಾಡಿದೆ. ಪೈಲೆಟ್ನ ಸಮಯೋಚಿತ ನಿರ್ಧಾರದಿಂದ 236 ಮಂದಿಯ ಜೀವಕ್ಕೆ ಎದುರಾಗಿದ್ದ ಅಪಾಯ ತಪ್ಪಿದಂತಾಗಿದೆ

