ದುಬೈ: ಯಕ್ಷಗಾನ ಕಲೆಯ ಪ್ರಸಾರ, ಪ್ರಚಾರ ಹಾಗೂ ಮುಂದಿನ ಪೀಳಿಗೆಗೆ ಕಲೆಯನ್ನು ಪರಿಚಯಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಯುಎಇಯ ಯಕ್ಷಗಾನ ಅಭ್ಯಾಸ ಕೇಂದ್ರವು ತನ್ನ 11ನೇ ವರ್ಷದ ಸಂಭ್ರಮದ ಅಂಗವಾಗಿ ‘ದುಬೈ ಯಕ್ಷೋತ್ಸವ–2026’ ಅನ್ನು ಡಿಸೆಂಬರ್ 20ರಂದು ಆಯೋಜಿಸಲಿದೆ. ಈ ಹಿನ್ನೆಲೆಯಲ್ಲಿ ಯಕ್ಷೋತ್ಸವದಲ್ಲಿ ಪ್ರದರ್ಶನಗೊಳ್ಳಲಿರುವ ‘ಶ್ರೀ ಹರಿಲೀಲಾಮೃತಂ’ ಯಕ್ಷಗಾನ ಪ್ರಸಂಗದ ಆಮಂತ್ರಣ ಪತ್ರಿಕೆ ಹಾಗೂ ಪ್ರವೇಶ ಟಿಕೆಟ್ ಬಿಡುಗಡೆ ಸಮಾರಂಭ ನವೆಂಬರ್ 15ರಂದು ದುಬೈಯ ಮ್ಯಾಂಚೆಸ್ಟರ್ ಪ್ಲಾಜಾ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆಯಿತು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಯುಎಇ ಘಟಕದ ಸಹಯೋಗದಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಪೂರ್ವಭಾವಿ ಸಮಾರಂಭದಲ್ಲಿ ಯುಎಇಯ ವಿವಿಧ ಕನ್ನಡ ಹಾಗೂ ತುಳು ಸಂಘಟನೆಗಳ ಪದಾಧಿಕಾರಿಗಳು, ಉದ್ಯಮಿಗಳು, ಕಲಾಪೋಷಕರು ಮತ್ತು ಯಕ್ಷಗಾನ ಅಭಿಮಾನಿಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿದರು.

ಸಮಾರಂಭದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಯುಎಇ ಘಟಕದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಯುಎಇ ಬಂಟ್ಸ್ ಮತ್ತು ಕರ್ನಾಟಕ ಎನ್ಆರ್ಐ ವೇದಿಕೆಯ ಅಧ್ಯಕ್ಷ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಉದ್ಯಮಿ ಹಾಗೂ ಕಲಾಪೋಷಕ ವಾಸುದೇವ ಭಟ್ ಪುತ್ತಿಗೆ, ಚಿತ್ರನಟ ವಿನೀತ್ ಕುಮಾರ್, ಉದ್ಯಮಿ ಸುಂದರ್ ಶೆಟ್ಟಿ ಅಬುಧಾಬಿ, ಸಾಹಿತಿ ಮನೋಹರ್ ತೋನ್ಸೆ, ಉದ್ಯಮಿ ಕಾರ್ತಿಕ್ ಶೆಟ್ಟಿ, ಕರ್ನಾಟಕ ಸಂಘ ದುಬೈಯ ನಾಗರಾಜ್ ರಾವ್ ಉಡುಪಿ, ಮನೋಹರ ಹೆಗ್ಡೆ, ಜಯಂತ್ ಶೆಟ್ಟಿ, ಗಮ್ಮತ್ ಕಲಾವಿದೆರ್ ದುಬೈ ಅಧ್ಯಕ್ಷ ವಾಸುಕುಮಾರ್ ಶೆಟ್ಟಿ, ಹಿರಿಯ ಯಕ್ಷಗಾನ ಕಲಾವಿದ ಪ್ರಭಾಕರ ಸುವರ್ಣ ಕರ್ನಿರೆ, ಮಲ್ಲಿಕಾರ್ಜುನ ಗೌಡ, ಹಿರಿಯ ಹಿಮ್ಮೇಳ ವಾದಕ ವೆಂಕಟೇಶ ಶಾಸ್ತ್ರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಗಣ್ಯರು ದೀಪ ಬೆಳಗಿಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು. ಬಳಿಕ ಆಮಂತ್ರಣ ಪತ್ರಿಕೆ ಹಾಗೂ ಟಿಕೆಟ್ ಬಿಡುಗಡೆಗೊಳಿಸಿ ಮಾತನಾಡಿದ ಸರ್ವೋತ್ತಮ ಶೆಟ್ಟಿ, ಯಕ್ಷಗಾನ ಅಭ್ಯಾಸ ಕೇಂದ್ರವು ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿರುವುದು ಶ್ಲಾಘನೀಯ ಎಂದರು. ಈ ಕಾರ್ಯದ ಹಿಂದೆ ಶ್ರಮಿಸುತ್ತಿರುವ ಯಕ್ಷಗಾನ ಗುರುಗಳಾದ ಶೇಖರ್ ಡಿ. ಶೆಟ್ಟಿಗಾರ್ ಮತ್ತು ಶರತ್ ಕುಡ್ಲ ಅವರ ಸೇವೆಯನ್ನು ಅಭಿನಂದಿಸಿ, ಮುಂಬರುವ ಯಕ್ಷೋತ್ಸವ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಯಕ್ಷಗಾನ ಅಭ್ಯಾಸ ಕೇಂದ್ರದ ಸಂಚಾಲಕ ದಿನೇಶ್ ಶೆಟ್ಟಿ ಕೊಟ್ಟಿಂಜ ಹಾಗೂ ಗುರು ಶೇಖರ್ ಡಿ. ಶೆಟ್ಟಿಗಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಯಕ್ಷೋತ್ಸವದ ಕಾರ್ಯಕ್ರಮಗಳ ರೂಪುರೇಷೆ, ಯಕ್ಷಗಾನದ ವೇಷವೈವಿಧ್ಯ ಹಾಗೂ ಪ್ರದರ್ಶನದ ವಿಶೇಷತೆಗಳ ಕುರಿತು ಮಾಹಿತಿ ನೀಡಿದರು. ಈ ಬಾರಿ ಯಕ್ಷೋತ್ಸವವನ್ನು ಹೊಸ ಸ್ಥಳದಲ್ಲಿ ಆಯೋಜಿಸಲಾಗುತ್ತಿದ್ದು, ಡಿಸೆಂಬರ್ 20ರಂದು ದುಬೈ ಅಲ್ ಗಿಸೈಸ್ನ ಜೇಮ್ಸ್ ಕ್ಯಾಂಬ್ರಿಡ್ಜ್ ಇಂಟರ್ನ್ಯಾಷನಲ್ ಸ್ಕೂಲ್ ಸಭಾಂಗಣದಲ್ಲಿ ಮಧ್ಯಾಹ್ನ 1.30ರಿಂದ ಕಾರ್ಯಕ್ರಮ ನಡೆಯಲಿದೆ. ದುಬೈ ಏರ್ಪೋರ್ಟ್ ಫ್ರೀ ಝೋನ್ ಮೆಟ್ರೋ ನಿಲ್ದಾಣದ ಸಮೀಪ ಈ ಸಭಾಂಗಣವಿದೆ. ಯಕ್ಷಗಾನಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದರು.

ಈ ಬಾರಿಯ ಯಕ್ಷೋತ್ಸವದಲ್ಲಿ ‘ಶ್ರೀ ಹರಿಲೀಲಾಮೃತಂ’ ಎಂಬ ಯಕ್ಷಗಾನ ಪ್ರಸಂಗವನ್ನು ಕೇಂದ್ರದ ಕಲಾವಿದರು ಪ್ರಸ್ತುತಪಡಿಸಲಿದ್ದಾರೆ. ಖ್ಯಾತ ಭಾಗವತರಾದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಹಾಗೂ ಡಾ. ಪ್ರಖ್ಯಾತ್ ಶೆಟ್ಟಿ ಹಿಮ್ಮೇಳದಲ್ಲಿ ಭಾಗವಹಿಸಲಿದ್ದು, ಮದ್ದಳೆಗಾರ ಆನಂದ ಪಡ್ರೆ ಸಾಥ್ ನೀಡಲಿದ್ದಾರೆ.

ಕೇಂದ್ರದ ಕಲಾವಿದರಾದ ಸವಿನಯ ನೆಲ್ಲಿತೀರ್ಥ, ಭವಾನಿ ಶಂಕರ ಶರ್ಮ, ಪುತ್ತಿಗೆ ವೆಂಕಟೇಶ ಶಾಸ್ತ್ರಿ, ರಿತೇಶ್ ಆಚಾರ್ಯ ಬಾರ್ಕೂರು, ಸಂದೇಶ್ ಆಚಾರ್ಯ ಬ್ರಹ್ಮಾವರ ಹಾಗೂ ಆದಿತ್ಯ ದಿನೇಶ್ ಶೆಟ್ಟಿ ಚೆಂಡೆ, ಮದ್ದಳೆ ಮತ್ತು ಚಕ್ರತಾಳದಲ್ಲಿ ಸಹಕರಿಸಲಿದ್ದಾರೆ. ಕೃಷ್ಣ ಪ್ರಸಾದ್ ರಾವ್ ಸುರತ್ಕಲ್, ಕುಮಾರಿ ಶ್ರೀಶ ಪ್ರಭಾಕರ ಪೂಜಾರಿ, ಕುಮಾರಿ ಐಶಾನಿ ದೀಪಕ್ ಸುಳ್ಯ ಹಾಗೂ ಕುಮಾರಿ ನ್ಯೋಮಿ ಸಾಯಿನಾಥ ಶೆಟ್ಟಿ ಅವರ ಸುಶ್ರಾವ್ಯ ಗಾಯನ ಕಾರ್ಯಕ್ರಮಕ್ಕೆ ಮೆರುಗು ನೀಡಲಿದೆ.

ಪ್ರಸಾಧನ ಮತ್ತು ವೇಷಭೂಷಣದ ಜವಾಬ್ದಾರಿಯನ್ನು ಗಂಗಾಧರ ಡಿ. ಶೆಟ್ಟಿಗಾರ್ ಕಿನ್ನಿಗೋಳಿ, ನಿತಿನ್ ಕುಂಪಲ ಹಾಗೂ ಸಾತ್ವಿಕ್ ಅಂಚನ್ ಕಾರ್ಕಳ ನಿರ್ವಹಿಸಲಿದ್ದಾರೆ.

ಯಕ್ಷೋತ್ಸವದ ಪ್ರವೇಶ ಟಿಕೆಟ್ ದರ 25 ದಿರ್ಹಂ ಆಗಿದ್ದು, ಟಿಕೆಟ್ ಕಾಯ್ದಿರಿಸಲು 0529157825, 0566182239 ಅಥವಾ 0552656900 ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು ಎಂದು ಸಂಘಟಕರು ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ಕೇಂದ್ರದ ಸದಸ್ಯ ಗಿರೀಶ್ ನಾರಾಯಣ್ ನಿರೂಪಿಸಿದರು. ದಿನೇಶ್ ಶೆಟ್ಟಿ ಕೊಟ್ಟಿಂಜ ಸ್ವಾಗತಿಸಿ, ವಂದಿಸಿದರು.

