ಮಂಗಳೂರು: ಮಕ್ಕಳಲ್ಲಿ ಅಡಗಿರುವ ಕ್ರೀಡಾ ಮತ್ತು ಸಾಂಸ್ಕೃತಿಕ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ರೋಟರಿ ಮಂಗಳೂರು ಸೆಂಟ್ರಲ್ ಹಾಗೂ ರೋಟರ್ಯಾಕ್ಟ್ ಮಂಗಳೂರು ಸಿಟಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ 26ನೇ ವಾರ್ಷಿಕ ರೋಟರಿ ಚಿಣ್ಣರ ಉತ್ಸವವನ್ನು ನವೆಂಬರ್ 22ರಂದು ಆಯೋಜಿಸಲಾಗಿದೆ ಎಂದು ಪಿಡಿಜಿ ಎಂಡಿ ರೊ|ಪ್ರೋ ಡಾ.ಬಿ.ದೇವದಾಸ ರೈ ಹೇಳಿದರು
ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಗರದ ಉರ್ವ ಕೆನರಾ ಹೈಸ್ಕೂಲ್ ಆವರಣದಲ್ಲಿ ಬೆಳಿಗ್ಗೆ 9 ಗಂಟೆಯಿಂದ ದಿನವಿಡೀ ನಡೆಯಲಿರುವ ಈ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧಾಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ 10 ಮಕ್ಕಳ ರಕ್ಷಣೆ ಮತ್ತು ಆರೈಕೆ ಕೇಂದ್ರಗಳಿಗೆ ಸೇರಿದ ಸುಮಾರು 434 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಉದ್ಘಾಟಿಸಲಿದ್ದಾರೆ. ರೋಟರಿ ಜಿಲ್ಲೆ 3181ರ ವಲಯ 2ರ ವಲಯ ಸೇನಾನಿ ರೋ. ಪಿ. ಪಿ. ರಾಜೇಶ್ ಶೆಟ್ಟಿ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ. ರೋಟರಿ ಮಂಗಳೂರು ಸೆಂಟ್ರಲ್ ಅಧ್ಯಕ್ಷ ರೋ. ಬಿ. ಎನ್. ಇ. ಆರ್. ರವೀಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಜೆ 4 ಗಂಟೆಗೆ ಕೆನರಾ ಹೈಸ್ಕೂಲ್ ಸಭಾಂಗಣದಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳು ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ರೋಟರಿ ಜಿಲ್ಲೆ 3181ರ 2026-27ನೇ ಸಾಲಿನ ಮಾಜಿ ಗವರ್ನರ್ ರೋ. ಪಿಡಿಜಿ ಎಂ. ಡಿ. ಪ್ರಕಾಶ್ ಕಾರಂತ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಗುವುದು. ಅಲ್ಲದೆ, ಸರ್ವಾಂಗೀಣ ಸಾಧನೆ ಪ್ರದರ್ಶಿಸಿದ ಮಕ್ಕಳ ರಕ್ಷಣೆ ಮತ್ತು ಆರೈಕೆ ಕೇಂದ್ರಕ್ಕೆ ವಿಶೇಷ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು.
ಉತ್ಸವದಲ್ಲಿ ಮಕ್ಕಳು ಆಕರ್ಷಕ ಪಥಸಂಚಲನದೊಂದಿಗೆ ತಮ್ಮ ಕ್ರೀಡಾ ಸಾಮರ್ಥ್ಯ, ಸಾಂಸ್ಕೃತಿಕ ಪ್ರತಿಭೆ ಹಾಗೂ ವಿವಿಧ ಕೌಶಲ್ಯಗಳನ್ನು ಪ್ರದರ್ಶಿಸಲಿದ್ದಾರೆ. ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವುದು, ಅವರ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸುವುದು ಮತ್ತು ಸಂತೋಷದಾಯಕ ಅನುಭವ ನೀಡುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.
ರೋಟರಿ ಸಂಸ್ಥೆಯು 1996ರಿಂದ ನಿರಂತರವಾಗಿ ಈ ಚಿಣ್ಣರ ಉತ್ಸವವನ್ನು ಆಯೋಜಿಸುತ್ತಾ ಬಂದಿದ್ದು, ಈ ಬಾರಿಯೂ ನೂರಾರು ಮಕ್ಕಳಿಗೆ ತಮ್ಮ ಪ್ರತಿಭೆ ಅನಾವರಣಗೊಳಿಸಲು ಉತ್ತಮ ಅವಕಾಶ ಕಲ್ಪಿಸಿದೆ
ಪತ್ರಿಕಾಗೋಷ್ಠಿಯಲ್ಲಿ ಬಿ.ಎನ್ ರವೀಂದ್ರ, ಭಾಸ್ಕರ್ ರೈ ಕಟ್ಟಾ, ಜಾಕ್ಸನ್ ಸಲ್ಡಾನ, ಎಂ.ವಿ ಮಲ್ಯ, ರಕ್ಷಣ್, ಮುಖೇಶ್ ಕರ್ಕೇರ ಉಪಸ್ಥಿತರಿದ್ದರು

