ಮಂಗಳೂರು: ಪ್ರವಾದಿ ಮುಹಮ್ಮದ್ (ಸ) ಅವರ ಜೀವನಾದರ್ಶ, ಬೋಧನೆಗಳು ಹಾಗೂ ಮಾನವೀಯ ಸಂದೇಶಗಳನ್ನು ಸಮಾಜದ ಎಲ್ಲ ವರ್ಗಗಳಿಗೂ ತಲುಪಿಸುವ ಉದ್ದೇಶದಿಂದ ಯುನಿವೆಫ್ ಕರ್ನಾಟಕ ವತಿಯಿಂದ ಕಳೆದ 21 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಸೀರತ್ ಅಭಿಯಾನದ 21ನೇ ವರ್ಷದ ಸಮಾರೋಪ ಸಮಾರಂಭ ನವೆಂಬರ್ 20ರಂದು ಸಂಜೆ 6.45ಕ್ಕೆ ಕಲ್ಲಾಪುವಿನ ಯುನಿಟಿ ಹಾಲ್ನಲ್ಲಿ ಜರುಗಲಿದೆ.
ಈ ಕುರಿತು ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಯುನಿವೆಫ್ ಕರ್ನಾಟಕದ ಸಂಚಾಲಕ ಹಾಗೂ ಕುದ್ರೋಳಿ ಶಾಖಾಧ್ಯಕ್ಷ ನಬೀಲ್ ಶಾಬಾನ್, ಪ್ರಸಕ್ತ ಸಾಲಿನ ಅಭಿಯಾನವನ್ನು ‘ಸರ್ವಾಧಿಕಾರ, ಮಾನವ ಸ್ವಾತಂತ್ರ್ಯ ಮತ್ತು ಪ್ರವಾದಿ ಮುಹಮ್ಮದ್ (ಸ)’ ಎಂಬ ಕೇಂದ್ರ ವಿಷಯದೊಂದಿಗೆ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಪ್ರವಾದಿ ಮುಹಮ್ಮದ್ (ಸ) ಅವರ ಸಂದೇಶಗಳು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿರದೆ ಇಡೀ ಮಾನವಕುಲಕ್ಕೆ ಮಾರ್ಗದರ್ಶನ ನೀಡುವಂತಿವೆ. ಕರುಣೆ, ನ್ಯಾಯ, ಸಮಾನತೆ, ಸಹೋದರತೆ ಮತ್ತು ಮಾನವೀಯತೆಯನ್ನು ಪ್ರತಿಪಾದಿಸಿದ ಅವರ ಜೀವನಾದರ್ಶಗಳು ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿವೆ. ಹೆಚ್ಚುತ್ತಿರುವ ಸರ್ವಾಧಿಕಾರ, ಶೋಷಣೆ, ಅಸಮಾನತೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯಂತಹ ಸಮಸ್ಯೆಗಳಿಗೆ ಅವರ ಬೋಧನೆಗಳು ಸೂಕ್ತ ಮಾರ್ಗದರ್ಶನ ನೀಡಬಲ್ಲವು ಎಂದರು.

ಅಧಿಕಾರವು ಜನರ ಮೇಲೆ ದಬ್ಬಾಳಿಕೆ ನಡೆಸುವ ಸಾಧನವಾಗದೆ, ನ್ಯಾಯ ಮತ್ತು ಜನಸೇವೆಯ ಜವಾಬ್ದಾರಿಯಾಗಬೇಕು ಎಂಬುದು ಪ್ರವಾದಿಯವರ ಜೀವನ ಸಂದೇಶವಾಗಿದೆ. ಪ್ರತಿಯೊಬ್ಬ ವ್ಯಕ್ತಿಯ ಘನತೆ, ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಗೌರವಿಸುವ ಭಯಮುಕ್ತ ಹಾಗೂ ಶೋಷಣೆಮುಕ್ತ ಸಮಾಜ ನಿರ್ಮಾಣದ ಆಶಯವನ್ನು ಜನರಿಗೆ ತಲುಪಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಯುನಿವೆಫ್ ಕರ್ನಾಟಕದ ಅಧ್ಯಕ್ಷ ಜ| ರಫಿಉದ್ದೀನ್ ಕುದ್ರೋಳಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಿ ವ್ಯಾಲಿ ಮತ್ತು ಬಿಎಸಿಸಿಇ ಫೌಂಡೇಶನ್ನ ಸ್ಥಾಪಕ ಶರದ್ ವಿಹಾರಿ ದಾಸ್, ಕರ್ನಾಟಕ ಪ್ರಾಂತೀಯ ಅಂತರ್ಧರ್ಮೀಯ ಸಂವಾದ ಆಯೋಗದ ಕಾರ್ಯದರ್ಶಿ ಫಾ. ವಿನಯ್ ಕುಮಾರ್ ಹಾಗೂ ಕರ್ನಾಟಕ ರಾಜ್ಯ ಮುಸ್ಲಿಂ ಒಕ್ಕೂಟದ ಸಂಚಾಲಕ ಜ| ಯಾಸೀನ್ ಮಲ್ಪೆ ಭಾಗವಹಿಸಿ ವಿಷಯ ಮಂಡಿಸಲಿದ್ದಾರೆ.
ಪೊಸಕುರಲ್ ಸುದ್ದಿ ವಾಹಿನಿಯ ನಿರ್ದೇಶಕ ವಿದ್ಯಾಧರ ಶೆಟ್ಟಿ, ಉಳ್ಳಾಲ ಸಯ್ಯದ್ ಮದನಿ ದರ್ಗಾದ ಮಾಜಿ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಹಾಗೂ ಉಳ್ಳಾಲ ನಗರಸಭೆಯ ಮಾಜಿ ಅಧ್ಯಕ್ಷ ಬಾಜಿಲ್ ಡಿ ಸೋಜಾ ಉಪಸ್ಥಿತರಿರುವರು. ಕಾರ್ಯಕ್ರಮದ ಸಂಚಾಲಕರಾದ ನಬೀಲ್ ಶಾಬಾನ್ ಮತ್ತು ಶೇಕ್ ಹಫೀಜ್ ಅಹ್ಮದ್ ಭಾಗವಹಿಸಲಿದ್ದಾರೆ.
ಅಭಿಯಾನದ ಅಂಗವಾಗಿ ಕಾಲ್ನಡಿಗೆ ಜಾಥಾ ಸೇರಿದಂತೆ ಹಲವು ಜನಜಾಗೃತಿ ಮತ್ತು ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರವಾದಿಯವರ ಜೀವನ ಸಂದೇಶ ಹಾಗೂ ಅಭಿಯಾನದ ಆಶಯಗಳನ್ನು ಸಮಾಜದ ಎಲ್ಲ ವರ್ಗಗಳಿಗೂ ತಲುಪಿಸುವಲ್ಲಿ ಮಾಧ್ಯಮಗಳ ಸಹಕಾರ ಅಗತ್ಯವಾಗಿದ್ದು, ಪತ್ರಿಕಾ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಪ್ರತಿನಿಧಿಗಳು ವ್ಯಾಪಕ ಪ್ರಚಾರ ನೀಡುವಂತೆ ಯುನಿವೆಫ್ ಕರ್ನಾಟಕ ಮನವಿ ಮಾಡಿದೆ.
ಪ್ರವಾದಿಯವರನ್ನು ಅರಿಯುವುದು ಎಂದರೆ ಅವರ ಜೀವನ ಚರಿತ್ರೆಯನ್ನು ತಿಳಿದುಕೊಳ್ಳುವುದಷ್ಟೇ ಅಲ್ಲ, ಅವರು ಸಾರಿದ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ನಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳುವುದಾಗಿದೆ ಎಂದು ನಬೀಲ್ ಶಾಬಾನ್ ಅಭಿಪ್ರಾಯಪಟ್ಟರು.
ಪತ್ರಿಕಾಗೋಷ್ಠಿಯಲ್ಲಿ ಶೇಕ್ ಹಫೀಜ್ ಅಹ್ಮದ್, ಫಝಲ್ ಮುಹಮ್ಮದ್ ಶೇಕ್, ಬದ್ರುದ್ದೀನ್ ಇರ್ಫಾನ್, ನವಾಝ್ ಖಾಲಿದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

