ಸುಳ್ಯ: ಜಾನುವಾರುಗಳನ್ನು ಕಳ್ಳತನ ಮಾಡಿ ಮಾಂಸಕ್ಕಾಗಿ ಮಾರಾಟ ಮಾಡಲು ಸಾಗಾಟ ನಡೆಸಲು ಯತ್ನಿಸಿದ ಇಬ್ಬರನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ.
ನ.18ರಂದು ಮುಂಜಾನೆ ಸುಳ್ಯ ಕಸಬಾ ಗ್ರಾಮದ ಗಾಂಧಿನಗರ ಶಾಲಾ ಮೈದಾನದ ಬಳಿ ಜಾನುವಾರುಗಳನ್ನು ಕಳ್ಳತನ ಮಾಡಿ ಸಾಗಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಸುಳ್ಯ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪನಿರೀಕ್ಷಕ ಉದಯ ರವಿ ಅವರಿಗೆ ಮಾಹಿತಿ ಲಭಿಸಿತ್ತು. ತಕ್ಷಣ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದ ಪೊಲೀಸರು, ಶಾಲಾ ಮೈದಾನದಲ್ಲಿದ್ದ ಕಂಬವೊಂದಕ್ಕೆ ಎರಡು ಜಾನುವಾರುಗಳನ್ನು ಹಗ್ಗದಿಂದ ಕಟ್ಟಿ ಹಾಕಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.
ಬಂಧಿತರನ್ನು ಸುಳ್ಯ ಆಲೆಟ್ಟಿ ನಿವಾಸಿಗಳಾದ ಹಾಶಿರ್.ಎ (28) ಮತ್ತು ಸಂಶುದ್ದೀನ್.ಎಸ್.ಎಂ. (25) ಎಂದು ಗುರುತಿಸಲಾಗಿದೆ. ಜಾನುವಾರುಗಳನ್ನು ಮಾಂಸವನ್ನಾಗಿ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಕಳ್ಳತನಕ್ಕೆ ಯತ್ನಿಸಿರುವುದಾಗಿ ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಕೃತ್ಯಕ್ಕೆ ಬಳಸಲು ಬಂದಿದ್ದ ದ್ವಿಚಕ್ರ ವಾಹನ ಹಾಗೂ ಎರಡು ಜಾನುವಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 161/2026ರಂತೆ ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 303(2) ಜೊತೆಗೆ 62 ಹಾಗೂ ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆಯ ಕಲಂ 7 ಮತ್ತು 15ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

