ಸುರತ್ಕಲ್: ಸುರತ್ಕಲ್ನ ಬಾಳದಲ್ಲಿರುವ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಬಾಟ್ಲಿಂಗ್ ಘಟಕದಲ್ಲಿ ಹಲವು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದ ನಾಲ್ವರು ಮಹಿಳಾ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಿರುವುದನ್ನು ವಿರೋಧಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ನ.19ರಂದು 80ನೇ ದಿನಕ್ಕೆ ಕಾಲಿಟ್ಟಿದೆ.
ಬಾಗಲಕೋಟೆ ಜಿಲ್ಲೆಯ ಶರಣವ್ವ ಭಜಂತ್ರಿ, ಸೂರವ್ವ ಕೊಲ್ಲದ್, ಪಾರ್ವತಿ ಗಾಣಿಗೇರ ಹಾಗೂ ಸುವರ್ಣ ಪಾಟೀಲ ಅವರು ಹತ್ತು ವರ್ಷಗಳಿಗೂ ಅಧಿಕ ಕಾಲ HPCL ಘಟಕದಲ್ಲಿ ಗುತ್ತಿಗೆ ಕಾರ್ಮಿಕರಾಗಿ ಸೇವೆ ಸಲ್ಲಿಸಿದ್ದರು. ಯಾವುದೇ ಸಮರ್ಪಕ ಕಾರಣ ನೀಡದೆ ತಮ್ಮನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಆರೋಪಿಸಿರುವ ಈ ಮಹಿಳೆಯರು, ಉದ್ಯೋಗದಲ್ಲಿ ಮರುನೇಮಕ ಮಾಡುವಂತೆ ಒತ್ತಾಯಿಸಿ ಕಂಪೆನಿಯ ಪ್ರಧಾನ ದ್ವಾರದ ಎದುರು ಧರಣಿ ನಡೆಸುತ್ತಿದ್ದಾರೆ.
ಮಹಿಳಾ ಕಾರ್ಮಿಕರ ಸಮಸ್ಯೆಯನ್ನು ಬಗೆಹರಿಸುವಂತೆ ಕೇಂದ್ರ ಕಾರ್ಮಿಕ ಇಲಾಖೆಯ ಉಪ ಆಯುಕ್ತರು ಎರಡು ಬಾರಿ ಕಂಪೆನಿ ಅಧಿಕಾರಿಗಳನ್ನು ಕರೆಸಿ ಸೂಚನೆ ನೀಡಿದ್ದರೂ, ಈವರೆಗೆ ಪರಿಹಾರ ದೊರೆತಿಲ್ಲ ಎಂದು ಹೋರಾಟಗಾರರು ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳೂ ಕಂಪೆನಿ ಆಡಳಿತಕ್ಕೆ ಮಹಿಳಾ ಕಾರ್ಮಿಕರಿಗೆ ನ್ಯಾಯ ಒದಗಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ನಾಗರಿಕ ಹೋರಾಟ ಸಮಿತಿ ಸುರತ್ಕಲ್ ಹಾಗೂ ಸಿಐಟಿಯು ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಆರಂಭದಿಂದಲೂ ಈ ಹೋರಾಟಕ್ಕೆ ಬೆಂಬಲ ನೀಡುತ್ತಿವೆ.
ಧರಣಿಯ 80ನೇ ದಿನದ ಅಂಗವಾಗಿ ಗುರುವಾರ ಹೋರಾಟದ ಸ್ಥಳದಲ್ಲಿ ಮಹಿಳಾ ಕಾರ್ಮಿಕರೊಂದಿಗೆ ಸಹಭೋಜನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಹಿಳೆಯರು ಮನೆಯಿಂದಲೇ ತಂದಿದ್ದ ಖಡಕ್ ರೊಟ್ಟಿ, ಶೇಂಗಾ ಚಟ್ನಿ, ವಿವಿಧ ಬಗೆಯ ಪಲ್ಯ ಹಾಗೂ ಒಬ್ಬಟ್ಟನ್ನು ಹಂಚಿಕೊಂಡು ಸಹಭೋಜನ ನಡೆಸಲಾಯಿತು. ಈ ಮೂಲಕ ಹೋರಾಟ ನಿರತ ಮಹಿಳೆಯರಿಗೆ ನೈತಿಕ ಬೆಂಬಲ ಹಾಗೂ ಧೈರ್ಯ ತುಂಬಲಾಯಿತು.
ಈ ಸಂದರ್ಭದಲ್ಲಿ ಸುರತ್ಕಲ್ನ ಮಾಜಿ ಶಾಸಕ ಮೊಯ್ದಿನ್ ಬಾವ ಅವರು ಧರಣಿ ಸ್ಥಳಕ್ಕೆ ಭೇಟಿ ನೀಡಿ ಮಹಿಳಾ ಕಾರ್ಮಿಕರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಅವರೊಂದಿಗೆ ಸಹಭೋಜನದಲ್ಲೂ ಪಾಲ್ಗೊಂಡರು.

ಇದೇ ವೇಳೆ, ನ.20ರಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಕಾರ್ಮಿಕ ಇಲಾಖೆಯ ಸಹಾಯಕ ಕಾರ್ಮಿಕ ಆಯುಕ್ತರು (ALC) HPCL ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಯಲಿದ್ದು, ಈ ಮೂಲಕ ಸಮಸ್ಯೆಗೆ ಪರಿಹಾರ ಸಿಗುವ ನಿರೀಕ್ಷೆಯನ್ನು ಮಹಿಳಾ ಕಾರ್ಮಿಕರು ವ್ಯಕ್ತಪಡಿಸಿದ್ದಾರೆ.
ನಾಳಿನ ಸಭೆಯಲ್ಲೂ ಕಂಪೆನಿ ಆಡಳಿತ ನ್ಯಾಯಯುತವಾಗಿ ಸಮಸ್ಯೆ ಬಗೆಹರಿಸದಿದ್ದರೆ, ಜಿಲ್ಲೆಯ ವಿವಿಧ ಜನಪರ ಸಂಘಟನೆಗಳನ್ನು ಒಗ್ಗೂಡಿಸಿ ಹೋರಾಟವನ್ನು ತೀವ್ರಗೊಳಿಸಲಾಗುವುದು. ಮುಂದಿನ ದಿನಗಳಲ್ಲಿ ಪ್ರತಿಭಟನೆ ಹೊಸ ಸ್ವರೂಪ ಪಡೆದುಕೊಳ್ಳಲಿದೆ ಎಂದು ನಾಗರಿಕ ಹೋರಾಟ ಸಮಿತಿ ಸುರತ್ಕಲ್ ಮತ್ತು ಸಿಐಟಿಯು ದಕ್ಷಿಣ ಕನ್ನಡದ ಮುನೀರ್ ಕಾಟಿಪಳ್ಳ ಎಚ್ಚರಿಕೆ ನೀಡಿದ್ದಾರೆ.

