ಮಂಗಳೂರು: ವಿಶೇಷ ಚೇತನರು ಮತ್ತು ಇತರ ವಿದ್ಯಾರ್ಥಿಗಳ ನಡುವೆ ಸಮಾನತೆ, ಸಹಬಾಳ್ವೆ ಹಾಗೂ ಪರಸ್ಪರ ಸಹಕಾರದ ಮನೋಭಾವ ಬೆಳೆಸುವ ಆಶಯದೊಂದಿಗೆ ಆಯೋಜಿಸಲಾದ ‘ಅಲೋಯ್ ಕ್ವಿಜ್-ವಿಜ್ 2026’ ಅಂತರ್ ಶಾಲಾ ರಸಪ್ರಶ್ನೆ ಸ್ಪರ್ಧೆ ಭಾನುವಾರ ನಗರದ ಪಾಂಡೇಶ್ವರದ ಫಿಝಾ ಬೈ ನೆಕ್ಸಸ್ ಮಾಲ್ನಲ್ಲಿ ನಡೆಯಿತು.

ಸೈಂಟ್ ಅಲೋಶಿಯಸ್ ಕಾಲೇಜು ಹಳೆ ವಿದ್ಯಾರ್ಥಿಗಳ ಸಂಘದ ಅಂಗಸಂಸ್ಥೆಯಾಗಿರುವ ಸೈಂಟ್ ಅಲೋಶಿಯಸ್ ಹೈಯರ್ ಪ್ರೈಮರಿ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘವು ರೋಹನ್ ಕಾರ್ಪೊರೇಷನ್ ಸಹಯೋಗದಲ್ಲಿ ಈ ವಿಶಿಷ್ಟ ಸ್ಪರ್ಧೆಯನ್ನು ಆಯೋಜಿಸಿತ್ತು. ನಗರದ 16 ಶಾಲೆಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.

ಸ್ಪರ್ಧೆಯು ಅಂತರ್ಗತ ಶಿಕ್ಷಣ ಮತ್ತು ಸಮಾನ ಅವಕಾಶದ ಸಂದೇಶ ಸಾರುವ ವಿಶಿಷ್ಟ ಮಾದರಿಯನ್ನು ಹೊಂದಿತ್ತು. ಪ್ರತಿ ತಂಡದಲ್ಲಿ ಐವರು ವಿದ್ಯಾರ್ಥಿಗಳಿದ್ದು, ಅವರಲ್ಲಿ ದೃಷ್ಟಿದೋಷ ಹೊಂದಿರುವ ಒಬ್ಬರು, ಮಾತು ಮತ್ತು ಶ್ರವಣ ದೋಷ ಹೊಂದಿರುವ ಒಬ್ಬರು, ಸರ್ಕಾರಿ ಶಾಲೆಯ ಒಬ್ಬರು ಹಾಗೂ ಖಾಸಗಿ ಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಈ ಮೂಲಕ ವಿಶೇಷ ಚೇತನ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವುದರ ಜತೆಗೆ, ಎಲ್ಲ ಮಕ್ಕಳಿಗೂ ಸಮಾನ ಅವಕಾಶ ನೀಡುವ ಆಶಯವನ್ನು ಸಾಕಾರಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ತಮ್ಮ ಶಾಲಾ ದಿನಗಳನ್ನು ಮೆಲುಕು ಹಾಕಿ, ಇಂತಹ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿರುವ ಸಂಘಟಕರ ಕಾರ್ಯವನ್ನು ಶ್ಲಾಘಿಸಿದರು.

ಸ್ಪರ್ಧೆಯಲ್ಲಿ ಗೆಲುವು ಅಥವಾ ಸೋಲು ಮುಖ್ಯವಲ್ಲ. ಇಲ್ಲಿ ಯಾರೂ ಸೋತವರಲ್ಲ. ವಿವಿಧ ಹಿನ್ನೆಲೆಯ ಮಕ್ಕಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ, ಅವರ ಪ್ರತಿಭೆ ಮತ್ತು ಸಾಮರ್ಥ್ಯಕ್ಕೆ ಅವಕಾಶ ಕಲ್ಪಿಸಿರುವ ಹಳೆ ವಿದ್ಯಾರ್ಥಿಗಳ ಸಂಘವೇ ನಿಜವಾದ ವಿಜೇತರು ಎಂದು ಅವರು ಅಭಿಪ್ರಾಯಪಟ್ಟರು.

ರಸಪ್ರಶ್ನೆ ಸ್ಪರ್ಧೆಯು ‘ಪ್ರಿವೇಲ್ ವಿತ್ ಬ್ರೈಲ್’, ‘ಬಝಿಂಗ್ ಬೀಸ್’, ‘ನಾಲೆಜ್ ಈಸ್ ಯೂನಿವರ್ಸಲ್’, ‘ಆ್ಯಕ್ಷನ್ಸ್ ಸ್ಪೀಕ್ ಲೌಡರ್’ ಮತ್ತು ‘ಹಾರ್ಮನಿ ಇನ್ ಥಾಟ್’ ಎಂಬ ಐದು ಸುತ್ತುಗಳಲ್ಲಿ ನಡೆಯಿತು. ಮಂಗಳೂರು ಕ್ವಿಜ್ ಫೌಂಡೇಶನ್ ಸ್ಪರ್ಧೆಯನ್ನು ನಿರ್ವಹಿಸಿದ್ದು, ಡಾ. ಅಣ್ಣಪ್ಪ ಕಾಮತ್ ರಸಪ್ರಶ್ನೆ ನಿರೂಪಕರಾಗಿ ಗಮನ ಸೆಳೆದರು.

ಸ್ಪರ್ಧೆಯಲ್ಲಿ ಸೈಂಟ್ ತೆರೇಸಾ ಐಸಿಎಸ್ಇ ಶಾಲೆ, ಪಿಎಂ ಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್, ಶಕ್ತಿನಗರ ಹಾಗೂ ಎಸ್ಡಿಎಂ ಮಂಗಳಜ್ಯೋತಿ ಇಂಟಿಗ್ರೇಟೆಡ್ ಶಾಲೆಯ ತಂಡಗಳು ಪ್ರಥಮ ಸ್ಥಾನ ಪಡೆದುಕೊಂಡವು. ಸೈಂಟ್ ಅಲೋಶಿಯಸ್ ಕಾಲೇಜು ಹೈಯರ್ ಪ್ರೈಮರಿ ಶಾಲೆ, ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಹೈಯರ್ ಪ್ರೈಮರಿ ಶಾಲೆ ಮತ್ತು ಎಸ್ಡಿಎಂ ಮಂಗಳಜ್ಯೋತಿ ಇಂಟಿಗ್ರೇಟೆಡ್ ಶಾಲೆಯ ತಂಡಗಳು ದ್ವಿತೀಯ ಸ್ಥಾನ ಗಳಿಸಿದವು.

ಈ ಬಾರಿಯ ಸ್ಪರ್ಧೆಯಲ್ಲಿ ಹೊಸದಾಗಿ ‘ಅತ್ಯುತ್ತಮ ತಂಡ ಸ್ಫೂರ್ತಿ’ ಪ್ರಶಸ್ತಿಯನ್ನು ಪರಿಚಯಿಸಲಾಗಿತ್ತು. ಸ್ಪರ್ಧೆಯ ವಿವಿಧ ಹಂತಗಳಲ್ಲಿ ಉತ್ತಮ ಹೊಂದಾಣಿಕೆ, ಪರಸ್ಪರ ಸಹಕಾರ ಹಾಗೂ ತಂಡದ ಒಗ್ಗಟ್ಟನ್ನು ಪ್ರದರ್ಶಿಸಿದ ವಿದ್ಯಾರ್ಥಿಗಳನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

ರೋಹನ್ ಕಾರ್ಪೊರೇಷನ್ನ ಡಿಯೋನ್ ಮಾಂಟೆರೊ ಅವರು ಸಂಘಟಕರ ಪ್ರಯತ್ನವನ್ನು ಅಭಿನಂದಿಸಿ, ವಿಶೇಷ ಚೇತನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ಸಂಸ್ಥೆಯ ಬದ್ಧತೆಯನ್ನು ವ್ಯಕ್ತಪಡಿಸಿದರು.
ಸೈಂಟ್ ಅಲೋಶಿಯಸ್ ಸಂಸ್ಥೆಗಳ ರೆಕ್ಟರ್ ರೆ. ಫಾ. ರೋನಿ ಪಾಯ್ಸ್ ಮಾತನಾಡಿ, ಪ್ರತಿಯೊಂದು ಮಗುವಿನಲ್ಲೂ ಒಂದೊಂದು ವಿಶಿಷ್ಟ ಪ್ರತಿಭೆ ಅಡಗಿರುತ್ತದೆ. ಆ ಪ್ರತಿಭೆಯನ್ನು ಗುರುತಿಸಿ ಬೆಳೆಸಲು ಎಲ್ಲ ಮಕ್ಕಳಿಗೂ ಸಮಾನ ಅವಕಾಶಗಳನ್ನು ಕಲ್ಪಿಸುವುದು ಸಮಾಜದ ಜವಾಬ್ದಾರಿಯಾಗಿದೆ ಎಂದರು.
ಮೂಡಾ ಅಧ್ಯಕ್ಷ ಸಂತೋಷ್ ಶೆಟ್ಟಿ ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳು ಪ್ರತಿವರ್ಷವೂ ಮುಂದುವರಿಯಬೇಕು ಎಂದು ಆಶಿಸಿದರು.
ಫಿಝಾ ಬೈ ನೆಕ್ಸಸ್, ಮಂಗಳೂರು ಕ್ವಿಜ್ ಫೌಂಡೇಶನ್ ಸೇರಿದಂತೆ ವಿವಿಧ ಸಂಸ್ಥೆಗಳು ಹಾಗೂ ದಾನಿಗಳ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು
.

