ಮಂಗಳೂರು: ಸನಾತನ ಧರ್ಮದ ಪುನರುತ್ಥಾನದಲ್ಲಿ ಮಹತ್ವದ ಪಾತ್ರ ವಹಿಸಿದ ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಜೀವನ, ಸಾಧನೆ ಹಾಗೂ ಧಾರ್ಮಿಕ ಕೊಡುಗೆಗಳನ್ನು ಸಮಾಜಕ್ಕೆ ಪರಿಚಯಿಸುವ ಮತ್ತು ಅವರ ಅನುಯಾಯಿಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಉದ್ದೇಶದಿಂದ ‘ಶ್ರೀ ಶಂಕರ ವಿಜಯೋತ್ಸವ-2026’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಡಿಸೆಂಬರ್ 28, 29 ಮತ್ತು 30ರಂದು ಉಡುಪಿಯ ಎಂಜಿಎಂ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ಈ ವೈಭವದ ಉತ್ಸವ ನಡೆಯಲಿದೆ. ಇದರ ಪೂರ್ವಭಾವಿಯಾಗಿ ನವೆಂಬರ್ 22ರಂದು ಮಂಗಳೂರಿನಲ್ಲಿ ಆರಂಭೋತ್ಸವ ಕಾರ್ಯಕ್ರಮ ಜರುಗಲಿದೆ ಎಂದು ಶೃಂಗೇರಿ ಶಾರದಾ ಪೀಠದ ಧರ್ಮಾಧಿಕಾರಿ ಶ್ರೀ ಸತ್ಯಶಂಕರ ಬೊಳ್ಳಾವ ತಿಳಿಸಿದರು.
ಮಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ 22ರಂದು ಸಂಜೆ 4 ಗಂಟೆಗೆ ನಗರದ ಶ್ರೀ ರಾಧಾಕೃಷ್ಣ ದೇವಸ್ಥಾನದ ಬಾಳಂಭಟ್ ಸಭಾಭವನದಲ್ಲಿ ಶ್ರೀ ಶಂಕರ ವಿಜಯೋತ್ಸವದ ಆರಂಭೋತ್ಸವ ನಡೆಯಲಿದೆ ಎಂದರು.

8ನೇ ಶತಮಾನದಲ್ಲಿ ಕೇರಳದ ಕಾಲಟಿಯಲ್ಲಿ ಜನಿಸಿದ ಆದಿ ಶಂಕರಾಚಾರ್ಯರು ಇಡೀ ಭಾರತವನ್ನು ಕಾಲ್ನಡಿಗೆಯಲ್ಲಿ ಸಂಚರಿಸಿ, ಸನಾತನ ವೈದಿಕ ಧರ್ಮದ ಪುನರುತ್ಥಾನಕ್ಕಾಗಿ ಅಪಾರ ಕೊಡುಗೆ ನೀಡಿದ್ದಾರೆ. ವೇದೋಪನಿಷತ್ತುಗಳ ಸಾರವನ್ನು ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಸುವ ಮೂಲಕ ಅದ್ವೈತ ವೇದಾಂತ ತತ್ವವನ್ನು ಪ್ರಸಾರ ಮಾಡಿದರು. ಧಾರ್ಮಿಕ ಸವಾಲುಗಳ ನಡುವೆ ಹಿಂದೂ ಸಮಾಜದಲ್ಲಿ ಏಕತೆ ಮತ್ತು ಆಧ್ಯಾತ್ಮಿಕ ಜಾಗೃತಿಯನ್ನು ಮೂಡಿಸಿ, ಧರ್ಮದ ರಕ್ಷಣೆಗೆ ಶ್ರಮಿಸಿದ ಮಹಾನ್ ಆಚಾರ್ಯರಾಗಿದ್ದಾರೆ ಎಂದು ವಿವರಿಸಿದರು.
ಧರ್ಮದ ಸಂರಕ್ಷಣೆ ಮತ್ತು ಪ್ರಸಾರಕ್ಕಾಗಿ ದೇಶದ ನಾಲ್ಕು ದಿಕ್ಕುಗಳಲ್ಲಿ ಆಮ್ನಾಯ ಪೀಠಗಳನ್ನು ಸ್ಥಾಪಿಸಿದ ಶಂಕರಾಚಾರ್ಯರು, ಶೃಂಗೇರಿ ಶಾರದಾ ಪೀಠಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದಾರೆ. ಈ ಪೀಠದಲ್ಲಿ ಗುರುಪರಂಪರೆಯು ಇಂದಿಗೂ ನಿರಂತರವಾಗಿ ಮುಂದುವರಿದಿದೆ. ಆದಿ ಶಂಕರಾಚಾರ್ಯರ ಮಹತ್ಕಾರ್ಯಗಳನ್ನು ಸ್ಮರಿಸುವುದರ ಜೊತೆಗೆ ಅವರ ತತ್ವಾದರ್ಶಗಳನ್ನು ಇಂದಿನ ಪೀಳಿಗೆಗೆ ತಲುಪಿಸುವುದು ಉತ್ಸವದ ಪ್ರಮುಖ ಆಶಯವಾಗಿದೆ ಎಂದರು.
ಪರಮಪೂಜ್ಯ ಶ್ರೀ ಶ್ರೀ ಜಗದ್ಗುರು ವಿಧುಶೇಖರ ಭಾರತೀ ಸನ್ನಿಧಾನಂಗಳವರ ಆಶಯ ಮತ್ತು ಮಾರ್ಗದರ್ಶನದಂತೆ ಈ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಶಂಕರಾಚಾರ್ಯರು ತಮ್ಮ ಅಲ್ಪಾಯುಷ್ಯದಲ್ಲೇ ದೇಶದ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅಳಿಸಲಾಗದ ಸಾಧನೆ ಮಾಡಿದ್ದಾರೆ. ಭಾರತೀಯ ಸಂಸ್ಕೃತಿ, ಧರ್ಮ ಮತ್ತು ಏಕತೆಯ ಉಳಿವಿಗೆ ಅವರು ನೀಡಿದ ಕೊಡುಗೆ ಸದಾ ಸ್ಮರಣೀಯವಾಗಿದೆ. ಈ ಹಿನ್ನೆಲೆಯಲ್ಲಿ ಅವರ ಅನುಯಾಯಿಗಳ ಸಮಾಗಮದೊಂದಿಗೆ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ತಿಳಿಸಿದರು.
ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಶೃಂಗೇರಿ ಮಠಕ್ಕೆ ಸೇರಿದ 40ಕ್ಕೂ ಅಧಿಕ ಶಿಷ್ಯ ಸಮುದಾಯಗಳಿವೆ. ಈ ಎಲ್ಲ ಸಮುದಾಯಗಳ ಪ್ರತಿನಿಧಿಗಳು ಉತ್ಸವದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಅಲ್ಲದೆ ಸಚಿವರು, ಸಂಸದರು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳು, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳ ಮುಖಂಡರು ಮತ್ತು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ಶಂಕರ ವಿಜಯೋತ್ಸವ ಸಮಿತಿಯ ಸಂಚಾಲಕರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಬಾಲಕೃಷ್ಣ ಭಟ್, ಚಂದ್ರಶೇಖರ ಉಚ್ಚಿಲ, ದೇವದಾಸ್, ನರೇಶ್ ಮೊದಲಾದವರು ಉಪಸ್ಥಿತರಿದ್ದರು.

