ಭೋಪಾಲ್ : ಡೆಟಾಲ್ ಸೋಪಿನೊಳಗೆ ಅಡಗಿದ್ದ ಕಬ್ಬಿಣದ ಬ್ಲೇಡ್ನಿಂದ ಮಗುವಿನ ಕೆನ್ನೆಗೆ ಗಾಯವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ ಮಹತ್ವದ ತೀರ್ಪು ನೀಡಿದೆ. ಸೋಪು ತಯಾರಿಕಾ ಕಂಪನಿಯಾದ ರೆಕಿಟ್ ಇಂಡಿಯಾ ಲಿಮಿಟೆಡ್ಗೆ ₹50,000 ಪರಿಹಾರ ಪಾವತಿಸುವಂತೆ ಆದೇಶಿಸಿರುವ ಆಯೋಗ, ವಿತರಕ ಹಾಗೂ ಅಂಗಡಿಯವನಿಗೂ ತಲಾ ₹2,000 ದಂಡ ವಿಧಿಸಿದೆ.
ಮಗು ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ಡೆಟಾಲ್ ಸೋಪಿನಿಂದ ಕೆನ್ನೆಗೆ ಗೀರಿದ ಪರಿಣಾಮ ಗಾಯವಾಗಿ ರಕ್ತಸ್ರಾವವಾಗಿತ್ತು. ಇದರಿಂದ ಆತಂಕಗೊಂಡ ಪೋಷಕರು ಗಾಯಕ್ಕೆ ಕಾರಣವೇನೆಂದು ಪರಿಶೀಲಿಸಿದಾಗ ಸೋಪಿನೊಳಗೆ ಬ್ಲೇಡ್ ಹುದುಗಿರುವುದು ಪತ್ತೆಯಾಗಿದೆ.
ತಕ್ಷಣವೇ ಸೋಪು ಖರೀದಿಸಿದ್ದ ಅಂಗಡಿಗೆ ತೆರಳಿದ ಪೋಷಕರು ಅದನ್ನು ಹಿಂದಿರುಗಿಸಿ ಮತ್ತೊಂದು ಸೋಪನ್ನು ಪಡೆದುಕೊಂಡಿದ್ದಾರೆ. ಆದರೆ, ಬದಲಾಯಿಸಿ ನೀಡಿದ ಹೊಸ ಸೋಪಿನಲ್ಲಿಯೂ ಕಬ್ಬಿಣದ ಬ್ಲೇಡ್ ಇರುವುದು ಕಂಡುಬಂದಿದೆ. ಒಂದೇ ರೀತಿಯ ಎರಡು ಸೋಪುಗಳಲ್ಲಿ ಅಪಾಯಕಾರಿ ವಸ್ತು ಪತ್ತೆಯಾದ ಹಿನ್ನೆಲೆಯಲ್ಲಿ ಪೋಷಕರು ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಅವರು, ಉತ್ಪನ್ನದ ಗುಣಮಟ್ಟದ ಲೋಪವನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ಪಾವತಿಸುವಂತೆ ಆದೇಶಿಸಿದ್ದಾರೆ.
ತೀರ್ಪಿನ ಪ್ರಕಾರ, ರೆಕಿಟ್ ಇಂಡಿಯಾ ಲಿಮಿಟೆಡ್ ಕಂಪನಿ ಮಗುವಿನ ಪೋಷಕರಿಗೆ ₹50,000 ಪರಿಹಾರ ನೀಡಬೇಕು. ಸೋಪಿನ ವಿತರಕ ಹಾಗೂ ಮಾರಾಟ ಮಾಡಿದ ಅಂಗಡಿಯವರು ತಲಾ ₹2,000 ಪಾವತಿಸಬೇಕು. ಒಟ್ಟು ₹54,000 ಮೊತ್ತವನ್ನು ಆದೇಶ ಹೊರಡಿಸಿದ 45 ದಿನಗಳೊಳಗೆ ಪಾವತಿಸಬೇಕಾಗಿದೆ.
ನಿಗದಿತ ಅವಧಿಯಲ್ಲಿ ಹಣ ಪಾವತಿಸದಿದ್ದಲ್ಲಿ ವಾರ್ಷಿಕ ಶೇ. 6ರ ಬಡ್ಡಿಯೊಂದಿಗೆ ಮೊತ್ತವನ್ನು ಪಾವತಿಸಬೇಕೆಂದು ಗ್ರಾಹಕ ಆಯೋಗ ಸೂಚಿಸಿದೆ.

