ಶಬರಿಮಲೆ, ನ.23: ಶಬರಿಮಲೆಗೆ ತೆರಳುವ ಅಯ್ಯಪ್ಪ ಭಕ್ತರು ಪಂಪಾ ನದಿಗೆ ಬಟ್ಟೆ, ಪ್ಲಾಸ್ಟಿಕ್ ಸೇರಿದಂತೆ ಯಾವುದೇ ತ್ಯಾಜ್ಯ ಎಸೆದರೆ ₹5,000 ದಂಡ ವಿಧಿಸಲಾಗುವುದು ಎಂದು ಕೇರಳ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ನವೆಂಬರ್ 22ರಿಂದ ಎರಡು ತಿಂಗಳವರೆಗೆ ಈ ಆದೇಶ ಜಾರಿಯಲ್ಲಿರಲಿದ್ದು, ದಂಡ ವಿಧಿಸಿದ 15 ದಿನಗಳೊಳಗೆ ಪಾವತಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
ಭಕ್ತರು ನದಿಯಲ್ಲಿ ಸ್ನಾನ ಮಾಡಿದ ಬಳಿಕ ಬಟ್ಟೆಗಳನ್ನು ಎಸೆಯುವುದರಿಂದ ಮಾಲಿನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಬಾರಿಯ ಯಾತ್ರೆಯ ಮೊದಲ ಮೂರು ದಿನಗಳಲ್ಲೇ ಪಂಪಾ ನದಿಯಿಂದ ಸುಮಾರು 23 ಟನ್ ಬಟ್ಟೆ ತ್ಯಾಜ್ಯ ತೆರವುಗೊಳಿಸಲಾಗಿದೆ.

ಭಕ್ತರಿಗೆ ಜಿಲ್ಲಾಡಳಿತದ ಸ್ಪಷ್ಟ ಮನವಿ: ಪವಿತ್ರ ಪಂಪಾ ನದಿಯನ್ನು ಕಲುಷಿತಗೊಳಿಸದೆ ಸ್ವಚ್ಛವಾಗಿಡುವುದು ಪ್ರತಿಯೊಬ್ಬ ಅಯ್ಯಪ್ಪ ಭಕ್ತನ ಕರ್ತವ್ಯವಾಗಿದೆ. ಸ್ನಾನದ ಬಳಿಕ ಬಳಸಿದ ಬಟ್ಟೆ, ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯಗಳನ್ನು ನದಿಗೆ ಅಥವಾ ನದಿಯ ದಡದಲ್ಲಿ ಎಸೆಯದೆ, ನಿಗದಿಪಡಿಸಿದ ಕಸದ ತೊಟ್ಟಿಗಳಲ್ಲೇ ಹಾಕಬೇಕು. ಧಾರ್ಮಿಕ ಶ್ರದ್ಧೆಯೊಂದಿಗೆ ಪರಿಸರ ಸಂರಕ್ಷಣೆಗೂ ಆದ್ಯತೆ ನೀಡಿ, ಸ್ವಚ್ಛತಾ ಕಾರ್ಯಕ್ಕೆ ಎಲ್ಲ ಭಕ್ತರೂ ಸಹಕರಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ

