ಮಂಗಳೂರು : ಕಲಾವಿದರ ಒಕ್ಕೂಟ ಇನ್ಬಷ್ಟು ಸಧೃಢವಾಗಬೇಕು, ಕಲಾವಿದರಿಗೆ ಆಸರೆಯಾಗಿ ಬೆಳೆಯಬೇಕು, ದಾನಿಗಳ ಸಹಕಾರದಿಂದ ಒಕ್ಕೂಟ ಗಟ್ಟಿಯಾಗಿದೆ. ಸ್ಥಳೀಯವಾಗಿ ವಲಯ ಮಟ್ಟದಲ್ಲಿ ಸಂಘಟನಾತ್ಮಕವಾಗಿ ಬೆಳೆಯಲು ಸದಸ್ಯರ ಪ್ರೋತ್ಸಾಹ ಅಗತ್ಯ ಎಂದು ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ. ಶೆಟ್ಟಿ ಹೇಳಿದರು.
ಅವರು ಮಂಗಳೂರಿನ ಕದ್ರಿ ಮಲ್ಲಿಕಟ್ಟೆಯಲ್ಲಿಯ ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ನಡೆದ ತುಳು ನಾಟಕ ಕಲಾವಿದರ ಒಕ್ಕೂಟದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಸಭೆಯಲ್ಲಿ ಜಿಲ್ಲೆಯಲ್ಲಿ ರಂಗ ಮಂದಿರ ನಿರ್ಮಾಣ, ತುಳು ಭಾಷೆಗೆ ವಿಶೇಷ ಮಾನ್ಯತೆ, ಕಲಾವಿದರಿಗೆ ಸಿಗುವ ಮಾಸಾಷನ ಬಗ್ಗೆ ಮುಖ್ಯಮಂತ್ರಿಗೆ ಮನವಿ ,ಪಟ್ಲ ಫೌಂಡೇಷನ್ ಉಚಿತ ವಿಮಾ ಯೋಜನೆ, ವಲಯ ಮಟ್ಟದ ಸಂಘಟನೆ ಇನ್ನಷ್ಟು ಗಟ್ಟಿಯಾಗಬೇಕು ಎಂಬ ವಿಷಯ ಚರ್ಚೆಗೊಂಡಿತು.

2025-26ನೇ ಸಾಲಿನ ಪರಿಶೋಧಿತ ಲೆಕ್ಕಪತ್ರವನ್ನು ಕೋಶಾಧಿಕಾರಿ ಮೋಹನ್ ಕೊಪ್ಪಳ ಕದ್ರಿ ಮಂಡಿಸಿದರು.ಒಕ್ಕೂಟದ ಅಜೀವ ಸದಸ್ಯತನ ಶುಲ್ಕವನ್ನು ರೂ. 500/-ರಿಂದ ರೂ.1,000ಕ್ಕೆ ಹೆಚ್ಚಿಸುವ ಕುರಿತು ನಿರ್ಧಾರ ಸರ್ವಾನುಮತದಂತೆ ಕೈಗೊಳ್ಳಲಾಯಿತು. ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಪುತ್ತೂರಿನ ಸದಸ್ಯ ರೋಹಿತ್ ಅವರಿಗೆ ಹತ್ತು ಸಾವಿರ ರೂಪಾಯಿಯ ನೆರವನ್ನು ವಿತರಿಸಲಾಯಿತು.
ಒಕ್ಕೂಟದ ಬಲವರ್ಧನೆಗೆ ಸದಸ್ಯರು ವಿವಿಧ ರೀತಿಯಲ್ಲಿ ಸಲಹೆ ನೀಡಿದರು. ಒಕ್ಕೂಟದ ಉಪಾಧ್ಯಕ್ಷರಾದ ಗೋಕುಲ್ ಕದ್ರಿ ಹಾಗೂ ತಾರಾನಾಥ ಶೆಟ್ಟಿ, ಕ್ಷೇಮ ನಿಧಿ ಸಂಚಾಲಕ ರಾಘವೇಂದ್ರ ರಾವ್ ಶರವು, ಪ್ರಧಾನ ಸಂಚಾಲಕ ಪ್ರದೀಪ್ ಆಳ್ವ ಕದ್ರಿ ಮತ್ತಿತರರು ಇದ್ದರು. 2024-2025ರ ಮಹಾಸಭೆಯ ವರದಿಯನ್ನು ಜೊತೆ ಕಾರ್ಯದರ್ಶಿ ವಿನಾಯಕ ಜೆಪ್ಪು ಮಂಡಿಸಿದರು.
ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಕುಮಾರ್ ಮಲ್ಲೂರು ವಾರ್ಷಿಕ ವರದಿಯನ್ನು ಮಂಡಿಸಿ, ಕಾರ್ಯಕ್ರಮ ನಿರೂಪಿಸಿದರು. ಕ್ಷೇಮ ನಿಧಿ ಪ್ರಧಾನ ಸಂಚಾಲಕ ಪ್ರದೀಪ್ ಆಳ್ವಾ ಕದ್ರಿ ವಂದಿಸಿದರು.


