ಮಂಗಳೂರು: ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸುಧಾರಿಸಿರುವ ಹಿನ್ನೆಲೆಯಲ್ಲಿ ರಾತ್ರಿ ವ್ಯಾಪಾರ ವಹಿವಾಟು ನಡೆಸುವ ಸಮಯವನ್ನು ಮಂಗಳೂರು ನಗರ ಪೊಲೀಸರು ವಿಸ್ತರಿಸಿದ್ದಾರೆ. ಈ ಮೂಲಕ ನಗರದ ನೈಟ್ ಲೈಫ್ಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಹಿಂದೆ ಇದ್ದ ನಿರ್ಬಂಧವನ್ನು ತುಸು ಸಡಿಲಗೊಳಿಸಲಾಗಿದೆ.
ಈ ಕುರಿತು ಆದೇಶ ಹೊರಡಿಸಿರುವ ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿನ ಎಲ್ಲಾ ವ್ಯಾಪಾರಿಕ ಸಂಸ್ಥೆಗಳು, ಅಂಗಡಿಗಳು, ಹೋಟೆಲ್ಗಳು, ರೆಸ್ಟೋರೆಂಟ್ಗಳು, ಟೀ ಸ್ಟಾಲ್ಗಳು, ಪಾನ್ ಅಂಗಡಿಗಳು ಸೇರಿದಂತೆ ವಿವಿಧ ವಾಣಿಜ್ಯ ಚಟುವಟಿಕೆಗಳನ್ನು ರಾತ್ರಿ 11.45ರವರೆಗೆ ನಡೆಸಲು ಅನುಮತಿ ನೀಡಿದ್ದಾರೆ.
ಹೊಸ ಆದೇಶದ ಪ್ರಕಾರ ರಾತ್ರಿ 11.45ರಿಂದ ಮರುದಿನ ಬೆಳಗ್ಗೆ 5.30ರವರೆಗೆ ನಿರ್ಬಂಧ ಜಾರಿಯಲ್ಲಿರಲಿದೆ. ಆದರೆ ಸಿಎಲ್-4, ಸಿಎಲ್-6(ಎ) ಮತ್ತು ಸಿಎಲ್-7 ಪರವಾನಗಿ ಹೊಂದಿರುವ ಮದ್ಯದಂಗಡಿಗಳಿಗೆ ಈ ಸಮಯದ ನಿರ್ಬಂಧ ಅನ್ವಯಿಸುವುದಿಲ್ಲ. ಅಂತಹ ಸಂಸ್ಥೆಗಳು ತಮ್ಮ ಪರವಾನಗಿಯಲ್ಲಿ ನಮೂದಿಸಿರುವ ನಿಯಮ ಮತ್ತು ಸಮಯವನ್ನು ಕಡ್ಡಾಯವಾಗಿ ಪಾಲಿಸಬೇಕು.
ಆಸ್ಪತ್ರೆಗಳು, ಔಷಧ ಅಂಗಡಿಗಳು, ತುರ್ತು ಸೇವಾ ಕೇಂದ್ರಗಳು, ಅಗತ್ಯ ಸಾರ್ವಜನಿಕ ಸೇವೆಗಳು ಹಾಗೂ ಸರಕಾರ ಅಥವಾ ಸಂಬಂಧಪಟ್ಟ ಪ್ರಾಧಿಕಾರಗಳಿಂದ ವಿಶೇಷ ಅನುಮತಿ ಪಡೆದ ಸಂಸ್ಥೆಗಳಿಗೆ ಈ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ.
ಮಂಗಳೂರು ಕರಾವಳಿ ಕರ್ನಾಟಕದ ಪ್ರಮುಖ ವಾಣಿಜ್ಯ, ಶೈಕ್ಷಣಿಕ ಹಾಗೂ ಬಂದರು ನಗರವಾಗಿದ್ದು, ವಿವಿಧ ಧರ್ಮ, ಜಾತಿ ಮತ್ತು ಸಮುದಾಯಗಳ ಜನರು ಇಲ್ಲಿ ಸೌಹಾರ್ದದಿಂದ ಬದುಕುತ್ತಿದ್ದಾರೆ. ಈ ಹಿಂದೆ ನಡೆದಿದ್ದ ಕೆಲವು ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ರಾತ್ರಿ 10.30ರ ಬಳಿಕ ಅಂಗಡಿ-ಮುಂಗಟ್ಟುಗಳನ್ನು ಮುಚ್ಚುವಂತೆ ನಿರ್ಬಂಧ ವಿಧಿಸಲಾಗಿತ್ತು.
ಪ್ರಸ್ತುತ ನಗರದಲ್ಲಿ ಶಾಂತಿಯುತ ವಾತಾವರಣ ನೆಲೆಸಿರುವುದನ್ನು ಪರಿಗಣಿಸಿ, ವ್ಯಾಪಾರ ಚಟುವಟಿಕೆಗಳಿಗೆ ಹೆಚ್ಚುವರಿಯಾಗಿ 1 ಗಂಟೆ 15 ನಿಮಿಷಗಳ ಕಾಲಾವಕಾಶ ಕಲ್ಪಿಸಲಾಗಿದೆ. ಆದರೆ ರಾತ್ರಿ ವೇಳೆ ಅನಗತ್ಯವಾಗಿ ಗುಂಪುಗೂಡುವುದು, ಓಡಾಟ ನಡೆಸುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳನ್ನು ಹರಡುವುದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾತ್ರಿ 11.45ರಿಂದ ಬೆಳಗ್ಗೆ 5.30ರವರೆಗೆ ನಿರ್ಬಂಧವನ್ನು ಮುಂದುವರಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

