ಮಂಗಳೂರು ಬೀಚ್ ಫೆಸ್ಟಿವಲ್, ಮಂಗಳೂರು ಟ್ರಯಾಥ್ಲನ್-2025 ಉದ್ಘಾಟನೆ
ಮಂಗಳೂರು: ಮೂರನೇ ಆವೃತ್ತಿಯ ಮಂಗಳೂರು ಬೀಚ್ ಫೆಸ್ಟಿವಲ್, ಮಂಗಳೂರು ಟ್ರಯಾಥ್ಲನ್-2025 ಇದರ ಉದ್ಘಾಟನಾ ಸಮಾರಂಭ ಶನಿವಾರ ಸಂಜೆ ನಗರದ ಓಷನ್ ಪರ್ಲ್ ಹೋಟೆಲ್ ನಲ್ಲಿ ಜರುಗಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಮಾತಾಡಿದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು, “ದಕ್ಷಿಣ ಕನ್ನಡ ಎಲ್ಲ ರೀತಿಯಲ್ಲಿ ಮುಂದೆ ಇರುವ ಜಿಲ್ಲೆ. ಇಲ್ಲಿ ಎಲ್ಲ ಜಾತಿ ಭಾಷೆ ಮತದ ಜನರು ಒಗ್ಗಟ್ಟಾಗಿ ಬದುಕುತ್ತಿದ್ದಾರೆ. ಇಲ್ಲಿ ಸಂಸ್ಕೃತಿ ಮತ್ತು ಕ್ರೀಡೆಯ ಬಗ್ಗೆ ಮಹತ್ವವನ್ನು ಸಾರುವ ಇಂತಹ ಕಾರ್ಯಕ್ರಮ ಆಯೋಜನೆ ಮಾಡುತ್ತಿರುವುದು ಸಂತಸದ ವಿಚಾರ. ಒಂದು ಒಳ್ಳೆಯ ಕಾರ್ಯಕ್ಕಾಗಿ ಇಂತಹ ಕಾರ್ಯ ಮಾಡುತ್ತಿರುವ ತಪಸ್ಯ ಫೌಂಡೇಶನ್ ಶ್ರಮ ಶ್ಲಾಘನೀಯವಾದುದು. ಕಾರ್ಯಕ್ರಮ ಯಶಸ್ವಿಗೊಳಿಸಲು ನಾವೆಲ್ಲರೂ ಒಂದಾಗಿ ದುಡಿಯಬೇಕು. ಜಿಲ್ಲಾಡಳಿತ ಇಂತಹ ಕಾರ್ಯಕ್ರಮಕ್ಕೆ ಎಲ್ಲ ರೀತಿಯ ಸಹಕಾರ ನೀಡಲಿದೆ” ಎಂದರು.
ಬಳಿಕ ಮಾತಾಡಿದ ದಕ್ಷಿಣ ಕನ್ನಡ ಜಿಲ್ಲಾ ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ ಅವರು, “ಸಾಮಾಜಿಕ ಕಳಕಳಿಯ ಉದ್ದೇಶದಿಂದ ನಡೆಸುತ್ತಿರುವ ಇಂತಹ ಕಾರ್ಯಕ್ರಮ ಯಶಸ್ವಿಯಾಗಲಿ. ಇಂತಹ ಕಾರ್ಯಕ್ರಮದಲ್ಲಿ ನನ್ನ ಪಾಲ್ಗೊಳ್ಳುವಿಕೆ ಹೆಚ್ಚಿನ ರೀತಿಯಲ್ಲಿ ಇರಲಿದೆ. ನಿಮ್ಮ ತಪಸ್ಸಿಗೆ ಭಗವಂತ ಆಶೀರ್ವಾದ ಮಾಡುತ್ತಾನೆ“ ಎಂದರು.
ತಪಸ್ಯ ಫೌಂಡೇಶನ್ ಫೌಂಡರ್ ಸಬಿತಾ ಆರ್.ಶೆಟ್ಟಿ ಪ್ರಾಸ್ತಾವಿಕ ಮಾತಾಡಿ, “ದಕ್ಷಿಣ ಕನ್ನಡ ಜಿಲ್ಲೆಯ ಕ್ಯಾನ್ಸರ್ ಪೀಡಿತ ರೋಗಿಗಳ ಕೊನೆಯ ಹಂತದಲ್ಲಿನ ಆರೈಕೆಗಾಗಿ ತಪಸ್ಯ ಫೌಂಡೇಶನ್ ಅನ್ನು 2019ರಲ್ಲಿ ಸ್ಥಾಪಿಸಿದ್ದೇವೆ. ಲಯನ್ಸ್ ಕ್ಲಬ್ ಸಹಭಾಗಿತ್ವದಲ್ಲಿ ಈಗಾಗಲೇ 150ಕ್ಕೂ ಹೆಚ್ಚು ರೋಗಿಗಳ ಆರೈಕೆ ಮಾಡುತ್ತಿದ್ದೇವೆ. ಇನ್ನೂ ಹೆಚ್ಚಿನ ರೋಗಿಗಳ ಆರೈಕೆಗಾಗಿ ಸುಸಜ್ಜಿತ ಕೇಂದ್ರ ಸ್ಥಾಪನೆಗಾಗಿ ಆರ್ಥಿಕ ಸಹಾಯದ ಉದ್ದೇಶದಿಂದ ಮೂರನೇ ಆವೃತ್ತಿಯ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ“ ಎಂದು ಹೇಳಿದರು.
ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಆನಂದ್ ಕೆ, ಎಸಿ ವಿನಯ್ ರಾಜ್, ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ನವೀನ್ ಚಂದ್ರ ಹೆಗ್ಡೆ, ಐಡಿಎಫ್ ಸಿ ಫಸ್ಟ್ ಬ್ಯಾಂಕ್ ಪ್ರಧಾನ ಮಾರ್ಕೆಟಿಂಗ್ ಅಧಿಕಾರಿ ಟಿವಿ ನಾರಾಯಣ್, ಹರ್ಷ ಜೈನ್ ಮತ್ತಿತರರು ಉಪಸ್ಥಿತರಿದ್ದರು.
ಸಿಎ ಎನ್ ಬಿ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ದಿವ್ಯ ವಸಂತ್ ಶೆಟ್ಟಿ ದೇವರನ್ನು ಸ್ತುತಿಸಿದರು.