Sir,
ಮಂಗಳೂರು ; ಅಮೃತಾ ಆಸ್ಪತ್ರೆ ಕೊಚ್ಚಿ ಇವರಿಂದ ಮಂಗಳೂರಿನಲ್ಲಿ ಜನ್ಮಜಾತ ಹೃದಯರೋಗ ಸಮಸ್ಯೆ ಇರುವ ಮಕ್ಕಳಿಗಾಗಿ ಪ್ರಪ್ರಥಮ ಚಿಕಿತ್ಸಾ ಶಿಬಿರವು
ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದ ವತಿಯಿಂದ ಕರಾವಳಿ ಕರ್ನಾಟಕದ ಅಮ್ಮನವರ ಭಕ್ತರು ಮತ್ತು ಸೇವಾಸಮಿತಿಗಳ ಸಹಯೋಗದೊಂದಿಗೆ
ಜರುಗಿದ ಈ ಬೃಹತ್ ಆರೋಗ್ಯ ಮೇಳದಲ್ಲಿ ಕರ್ನಾಟಕದಾದ್ಯಂತ ಹಾಗೂ ಹೊರರಾಜ್ಯಗಳ ಜನರು ವಿಶೇಷವಾಗಿ ಗ್ರಾಮೀಣ ಪ್ರದೇಶದಿಂದ ಬಂದು ಭಾಗವಹಿಸಿ ಪ್ರಯೋಜನ ಪಡೆದರು.
18 ವರ್ಷದೊಳಗಿನ ಮಕ್ಕಳ ತಪಾಸಣೆಯನ್ನು ಕೊಚ್ಚಿಯ ಅಮೃತಾ ಆಸ್ಪತ್ರೆಯ ಪೀಡಿಯಾಟ್ರಿಕ್ ಕಾರ್ಡಿಯಾಲಜಿ ವಿಭಾಗದ ಪ್ರೊಫೆಸರ್ ಆಗಿರುವ ಡಾ. ಬ್ರಿಜೇಶ್ ಪಿ ಕೆ ನೇತೃತ್ವದಲ್ಲಿ ಮಕ್ಕಳ ಹೃದಯ ರೋಗ ತಂಡವು ವೈದ್ಯಕೀಯ ಶಿಬಿರವನ್ನು ಮುನ್ನಡೆಸಿತು.
ಜನ್ಮಜಾತ ಹೃದ್ರೋಗವಿದ್ದು ಶಸ್ತ್ರ ಚಿಕಿತ್ಸೆ ಅಗತ್ಯವುಳ್ಳ ಮತ್ತು ಇತರ ಗಂಭೀರ ಪರಿಸ್ಥಿತಿಗಳೊಂದಿಗೆ ಗುರುತಿಸಲ್ಪಟ್ಟ ಮಕ್ಕಳಿಗೆ ಕೊಚ್ಚಿಯ ಅಮೃತಾ ಆಸ್ಪತ್ರೆ ಯಲ್ಲಿ ಉಚಿತ ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆಗಳನ್ನು ನೀಡುವ ಭರವಸೆ ನೀಡಲಾಯಿತು.400 ಕ್ಕೂ ಅಧಿಕ ಮಕ್ಕಳು ಈ ಶಿಬಿರದ ಪ್ರಯೋಜನ ಪಡೆಯುತ್ತಿರುವುದರಿಂದ ಶಿಬಿರವು ವಿಶೇಷ ಮಹತ್ವ ಪಡೆದಿದೆ.
ಡಾ. ಬ್ರಿಜೇಶ್ ಪಿ ಕೆ ಯವರು ಮಾಹಿತಿ ನೀಡಿ
“ಜಗತ್ತಿನ ಹುಟ್ಟುವ ಮಕ್ಕಳಲ್ಲಿ ಸರಾಸರಿ ನೂರರಲ್ಲಿ ಒಂದು ಮಗುವಿಗೆ ಹೃದಯ ಸಂಬಂಧಿ ಖಾಯಿಲೆ ಕಾಣಿಸುತ್ತದೆ. ಇದು ಗಾಬರಿಯಾಗುವಂತಹ ಖಾಯಿಲೆ ಅಲ್ಲ. ಸರಿಯಾದ ಸಮಯದಲ್ಲಿ ಸೂಕ್ತ ಶಸ್ತ್ರಚಿಕಿತ್ಸೆ ನೀಡಿದರೆ ಇದು ಗುಣ ಪಡಿಸುವ ಖಾಯಿಲೆ.ಜನರಿಗೆ ಇದರ ಬಗ್ಗೆ ಮಾಹಿತಿಯ ಕೊರತೆ ಇದೆ ಮತ್ತು ದುಬಾರಿ ಚಿಕಿತ್ಸಾ ವೆಚ್ಚದ ಕಾರಣ ಸಕಾಲದಲ್ಲಿ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ.
ಅಮ್ಮನವರು ಮಂಗಳೂರಿನಲ್ಲಿ ಇಂತಹ ಒಂದು ಶಿಬಿರ ಆಗಬೇಕೆಂದು ಸೂಚಿಸಿದ ಪ್ರಕಾರ ನಮ್ಮ ತಂಡ ಮಂಗಳೂರಿಗೆ ಬಂದಿದೆ. ಮುಂದಿನ ದಿನಗಳಲ್ಲಿಯೂ ಇದಕ್ಕೆ ಪೂರಕವಾದ ಶಿಬಿರಗಳನ್ನು ಆಯೋಜಿಸಲಾಗುವುದು” ಎಂದರು.
ಕರಾವಳಿ ಕರ್ನಾಟಕದ ಮಾತಾ ಅಮೃತಾನಂದಮಯಿ ಮಠದ ಮುಖ್ಯಸ್ಥರಾದ ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣ ಇವರು ಜ್ಯೋತಿ ಬೆಳಗಿಸುವ ಮೂಲಕ ಶಿಬಿರಕ್ಕೆ ಅಧಿಕೃತ ಚಾಲನೆ ನೀಡಲಾಯಿತು.
ನಂತರ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಕರ್ನಾಟಕ ವಿಧಾನ ಪರಿಷತ್ ಸದಸ್ಯ ಶೀ ಐವನ್ ಡಿ’ಸೋಜ ಮಾತನಾಡಿ “
“ಈ ಯೋಜನೆಯು ದೇವರ ಪ್ರತ್ಯಕ್ಷ ಕಾಳಜಿಗೆ ಸಮಾನವಾದುದು. ಅಮ್ಮನವರು ಸಾರ್ವಜನಿಕ ಸೇವೆಗಾಗಿ ಮಾಡುತ್ತಿರುವ ಅಪ್ರತಿಮ ಸಮರ್ಪಣೆಯು ಅತ್ಯಂತ ಶ್ಲಾಘನೀಯವಾದುದು.ನಾವೆಲ್ಲರೂ ನಮ್ಮ ಜೀವನದಲ್ಲಿ ದೇವರು ಮೆಚ್ಚುವಂತಹ ಕೆಲಸಗಳನ್ನು ಮಾಡಿ ಮತ್ತೊಬ್ಬರ ಕಷ್ಟದಲ್ಲಿ ಭಾಗಿಗಳಾಗಬೇಕು. ಅಮ್ಮನವರು ಮಾನವೀಯತೆಯ ಕಲ್ಯಾಣಕ್ಕಾಗಿ ಮೌನವಾಗಿಯೇ ಕೆಲಸ ಮಾಡುತ್ತಿರುವವರು.ಅವರ ಕರುಣೆ ಮತ್ತು ಪ್ರೀತಿಭರಿತ ದೃಷ್ಟಿ ಕೋನ ಅಪ್ರತಿಮವಾದುದು.ಅಮ್ಮನವರು ನನ್ನನ್ನು ಅಪ್ಪಿಕೊಂಡು ಪ್ರೀತಿ ತುಂಬಿ ಹರಸಿದ ಬಳಿಕವೇ ನಾನು ಕೂಡ ವಿಧಾನ ಪರಿಷತ್ ಗೆ ಆಯ್ಕೆಯಾಗಲು ಸಾಧ್ಯವಾಯಿತು ಎಂದರು.
ಮಂಗಳೂರಿನ ಮೇಯರ್ ಮನೋಜ್ ಕುಮಾರ್ ರವರು ಮಾತನಾಡಿ ಅಮ್ಮನವರ ಮಾನವೀಯ ಸೇವಾಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಗೊಳಿಸುತ್ತಿರುವ ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮಂಗಳೂರು ದಕ್ಷಿಣ ವಿಧಾನಸಭಾ ಸದಸ್ಯರಾದ ಶ್ರೀ ವೇದವ್ಯಾಸ ಕಾಮತ್ ರವರು ಸಭೆಯನ್ನುದ್ದೇಶಿಸಿ
“ಕರ್ನಾಟಕದಲ್ಲಿ, ನನ್ನ ಕ್ಷೇತ್ರದಲ್ಲಿ ಇಂತಹ ವಿನೂತನ ಕಾರ್ಯಕ್ರಮ ನಡೆಯುತ್ತಿರುವುದು ನನಗೆ ಹೆಮ್ಮೆಯ ವಿಚಾರ. ಚಿಂತೆ, ದುಃಖ, ಆರ್ಥಿಕ ಸಂಕಷ್ಟ ಮತ್ತು ಆರೋಗ್ಯ ಸಮಸ್ಯೆ ಇರುವ ಜನರು ಪ್ರತಿನಿತ್ಯ ನಮ್ಮ ಮನೆಗೆ ಪರಿಹಾರ ಕೋರಿ ಬರುತ್ತಾರೆ, ನಮ್ಮ ಮನೆಯ ಇಂತಹ ಪರಿಸ್ಥಿತಿಯನ್ನು ಕಂಡಾಗ ಏನು ಮಾಡಬೇಕೆಂದೇ ತೋಚದೆ ಹೋದಾಗ ದೇವರೇ ಪ್ರತ್ಯಕ್ಷವಾಗಿ ಇಂತಹ ಕೊಡುಗೆಯನ್ನು ಮಾಡುತ್ತಾರೆ ಎನ್ನುವುದಕ್ಕೆ ಈ ಯೋಜನೆ, ಇಂತಹ ಕಾರ್ಯಕ್ರಮಗಳು ಜ್ವಲಂತ ನಿದರ್ಶನ. ಇಂತಹ ಬೃಹತ್ ಮಟ್ಟದ ವೈದ್ಯಕೀಯ ಶಿಬಿರ ಮಾತಾ ಅಮೃತಾನಂದಮಯಿಯ ದೈವತ್ವ ಪ್ರೀತಿ ಮತ್ತು ಕಾಳಜಿಯಿಂದ ಮಾತ್ರ ಸಾಧ್ಯ” ಎಂದರು.ವೇದಿಕೆಯಲ್ಲಿ ಗೌರವಾಧ್ಯಕ್ಷರುಗಳಾದ ಪ್ರಸಾದ್ ರಾಜ್ ಕಾಂಚನ್, ಡಾ.ವಸಂತ ಕುಮಾರ್ ಪೆರ್ಲ ಉಪಸ್ಥಿತರಿದ್ದರು.
ಸೇವಾ ಸಮಿತಿಯ ಅಧ್ಯಕ್ಷ ಸುರೇಶ್ ಅಮಿನ್ ಸ್ವಾಗತಿಸಿದರು. ವೈದ್ಯಕೀಯ ವಿಭಾಗದ ಸಂಚಾಲಕ ಡಾ.ದೇವಿಪ್ರಸಾದ್ ಸದಾನಂದ ಹೆಜಮಾಡಿ ವಂದಿಸಿದರು.ಡಾ.ದೇವದಾಸ್ ಪುತ್ರನ್ ನಿರೂಪಣೆ ಮಾಡಿದರು.
ವೈದ್ಯಕೀಯ ತಂಡದಲ್ಲಿ ಮಕ್ಕಳ ಹೃದಯ ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ.ಬ್ರಿಜೇಶ್ ಜೊತೆಗೆ ಮಕ್ಕಳ ಹೃದಯ ರೋಗ ತಜ್ಞರಾದ ಡಾ. ಶೈನಿ, ಡಾ.ನಿಶಾಂತ್, ವೈದ್ಯಕೀಯ ಸೇವಾ ಕಾರ್ಯಕರ್ತ ವಿಷ್ಣು, ಡಾ.ಅಮೃತ ಸುಧಾಮಣಿ, ಮಂಗಳೂರಿನ ಅಮೃತಾ ಉಚಿತ ವೈದ್ಯಕೀಯ ತಂಡದ ತಜ್ಞ ವೈದ್ಯರುಗಳಾದ ಡಾ.ಸುಚಿತ್ರಾ ರಾವ್, ಡಾ.ಇಂದುಮತಿ ಮಲ್ಯ, ಡಾ.ರಿಷಿಕೇಶ್, ಫಾರ್ಮಸಿ ವಿಭಾಗದಲ್ಲಿ ನಿರಂಜನ್ ಅಡ್ಯಂತಾಯ ,ರಶ್ಮಿತಾ ಮೊದಲಾದವರು ಸೇವೆಗೈದರು.
ಕಲಾಮೃತ ಮಂಗಳೂರು ತಂಡದ ಕಲಾವಿದರು ಸುಶ್ರಾವ್ಯ ಸಂಗೀತ ಕಾರ್ಯಕ್ರಮ ನೀಡಿ ತಮ್ಮ ಸರದಿಗಾಗಿ ಬೆಳಗ್ಗಿನಿಂದ ಕಾದುಕುಳಿತ ಜನರಿಗೆ ಮನರಂಜನೆ ನೀಡಿದರು. ಕರಾವಳಿ ಕಾಲೇಜಿನ ತೃತೀಯ ವರ್ಷದ ಬಿ ಎಸ್ ಸಿ ನರ್ಸಿಂಗ್ ವಿದ್ಯಾರ್ಥಿಗಳು , ಯುನಿವರ್ಸಿಟಿ ಕಾಲೇಜಿನ ಮತ್ತು ಕೆನರಾ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆಯ ವಿದ್ಯಾರ್ಥಿಗಳು ಈ ಪವಿತ್ರ ಕಾರ್ಯದಲ್ಲಿ ಸೇವೆಗೈದು ಸಹಕರಿಸಿದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷರು ಹಾಗೂ ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರದ ಗೌರವ ಸಲಹೆಗಾರಾಗಿರುವ ಡಾ. ಜೀವರಾಜ್ ಸೊರಕೆ, ಕರಾವಳಿ ಕರ್ನಾಟಕದ ವಿವಿಧ ಮಾತಾ ಅಮೃತಾನಂದಮಯಿ ಸೇವಾ ಸಮಿತಿಗಳು, ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರಾಭಿವೃದ್ಧಿ ಸಮಿತಿ ಹಾಗೂ ಅಯುಧ್ ಪದಾಧಿಕಾರಿಗಳು , ಅಮೃತ ವಿದ್ಯಾಲಯಂ ಪ್ರಾಂಶುಪಾಲರಾದ ಅಕ್ಷತಾ ಶೆಣೈ ಹಾಗೂ ಶಾಲಾ ಶಿಕ್ಷಕರು, ಸಿಬ್ಬಂದಿ ವರ್ಗದವರು, ಅಮ್ಮನ ಭಕ್ತರು ಬೆಳಗ್ಗಿನಿಂದ ರಾತ್ರಿಯ ತನಕವೂ ಸಮರೋತ್ಸಾಹದಿಂದ ಸೇವೆಗೈದು ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಕಾಣಲು ಕಾರಣರಾದರು.
ರಾಜ್ಯದ ವಿವಿಧ ಸ್ಥಳಗಳಿಂದ ಆಗಮಿಸಿದವರಿಗೆ ಕರ್ನಾಟಕ ಸರಕಾರಿ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಅಮೃತ ವಿದ್ಯಾಲಯಂ ವತಿಯಿಂದ ಬಿಜೈ ಸರಕಾರಿ ಬಸ್ಸು ನಿಲ್ದಾಣ , ಸೆಂಟ್ರಲ್ ಮತ್ತು ಜಂಕ್ಷನ್ ರೈಲು ನಿಲ್ದಾಣಗಳಿಂದ ಉಚಿತ ಪ್ರಯಾಣದ ವ್ಯವಸ್ಥೆ ಕಲ್ಪಿಸಲಾಯಿತು.ಮಕ್ಕಳು ಹಾಗೂ ಪೋಷಕರು ,ಸೇವಾರ್ಥಿಗಳೆಲ್ಲರಿಗೂ ಬೆಳಗ್ಗೆ ಉಪಹಾರ, ಮಧ್ಯಾಹ್ನ ಭೋಜನ,ಸಂಜೆ ಉಪಹಾರ ಹಾಗೂ ರಾತ್ರಿಯ ಭೋಜನದ ವ್ಯವಸ್ಥೆಗಳನ್ನು ಉಚಿತವಾಗಿ ಕಲ್ಪಿಸಲಾಯಿತು ಎಂದು ಸೇವಾ ಸಮಿತಿಯ ಅಧ್ಯಕ್ಷರಾದ ಸುರೇಶ್ ಅಮೀನ್ ತಿಳಿಸಿದರು.
ಚಿತ್ರ ; ಸತೀಶ್ ಕಾಪಿಕಾಡ್