ಮಂಗಳೂರು: ಕಳೆದ 7 ವರ್ಷಗಳಿಂದ ಮಂಗಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಎಂ.ಆರ್.ಜಿ. ಗ್ರೂಪ್ನ ಚೇರ್ಮನ್ ಡಾ.ಕೆ.ಪ್ರಕಾಶ್ ಶೆಟ್ಟಿಯವರ ಗೌರವ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಮಂಗಳೂರು ಕಂಬಳವು
ಡಿಸೆಂಬರ್ 28ರ ಶನಿವಾರ ಬೆಳಗ್ಗೆ 8.30ಕ್ಕೆ ಪ್ರಾರಂಭಗೊಂಡು ಅದೇ ದಿನ ಸಂಜೆ 6.00ಕ್ಕೆ ಸಭಾ ಕಾರ್ಯಕ್ರಮ ಹಾಗೂ ಮರುದಿನ ಡಿಸೆಂಬರ್ 29ರ ಭಾನುವಾರ ಬೆಳಗ್ಗೆ 08.00ಕ್ಕೆ ಬಹುಮಾನ ವಿತರಣಾ ಸಮಾರಂಭದ ಮೂಲಕ ಸಂಪನ್ನಗೊಳ್ಳಲಿದೆ“ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
”ಎಳೆ ಮನಸ್ಸುಗಳನ್ನು ನಮ್ಮ ಈ ಆಚರಣೆಯ ಭಾಗವಾಗಿಸುವ ಸದುದ್ದೇಶದಿಂದ ‘ಕಲರ್ ಕೂಟ’ ಚಿತ್ರಕಲೆ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. ಮೂರು ವಿಭಾಗಗಳಲ್ಲಿ 6 ವರ್ಷ ಮೇಲ್ಪಟ್ಟ
ಮಕ್ಕಳಿಂದ ಎಲ್ಲರೂ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಭಾಗವಹಿಸಿದ ಎಲ್ಲರಿಗೂ ನೆನಪಿನ ಕಾಣಿಕೆ ಹಾಗೂ ಆಕರ್ಷಕ ಬಹುಮಾನಗಳನ್ನು ನೀಡಿ ಗೌರವಿಸಲಾಗುತ್ತದೆ. ನಮ್ಮ ಕಂಬಳದ ಅನುಭವವನ್ನು ಪುಟ್ಟ ಹಾಗೂ ಯುವ ಪ್ರತಿಭೆಗಳು ತಮ್ಮ ಕುಂಚದಿಂದ ತಮ್ಮ ಹಾಳೆ ಹಾಗೂ ಮನಸ್ಸುಗಳಲ್ಲಿ ಸೃಷ್ಟಿಸಿ ಈ ಮಣ್ಣಿನ ಸಾಂಸ್ಕೃತಿಕ ಸಂಪತ್ತಿನ ರಾಯಭಾರಿಗಳಾಗಲಿ ಎಂಬ ಆಶಯ ನಮ್ಮದು“ ಎಂದರು.
ಬಳಿಕ ಮಾತಾಡಿದ ಈಶ್ವರ್ ಪ್ರಸಾದ್ ಅವರು, ”ಸಾಮಾಜಿಕ ಜಾಲತಾಣಗಳ ಈ ಯುಗದಲ್ಲಿ ಹಿಂದಿನಿಂದ ನಡೆದು ಬಂದ ನಮ್ಮ ಈ ಆಚರಣೆಯನ್ನು ಮುಂದಿನ ಪೀಳಿಗೆಯು ಹೆಮ್ಮೆ ಹಾಗೂ ಆಸಕ್ತಿಯಿಂದ ವಾರೀಸುದಾರರಾಗಿಸುವತ್ತ ರೀಲ್ಸ್ ಹಾಗೂ ಫೋಟೋಗ್ರಫಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಅದೇ ದಿನ ಸಂಜೆ 6.30ಕ್ಕೆ ನಾಡಿನ ಧಾರ್ಮಿಕ, ಶೈಕ್ಷಣಿಕ, ರಾಜಕೀಯ, ಕ್ರೀಡೆ, ಚಲನಚಿತ್ರ ಕ್ಷೇತ್ರದ ಸಾಧಕರ, ಹಿರಿಯರ, ಗಣ್ಯ ಮಾನ್ಯ ಅತಿಥಿಗಳ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಮರುದಿನ ಬೆಳಿಗ್ಗೆ ಬಹುಮಾನ ವಿತರಣಾ ಸಮಾರಂಭದ ಮೂಲಕ ಕಂಬಳ ಸಂಪನ್ನಗೊಳ್ಳಲಿದೆ“ ಎಂದರು.
ವೇದಿಕೆಯಲ್ಲಿ ಮಂಗಳೂರು ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಸುಜಿತ್ ಪ್ರತಾಪ್ ಮಂಗಲ್ಪಾಡಿ, ಸಂಚಾಲಕರಾದ ಸಾಂತ್ಯಗುತ್ತು ಸಚಿನ್ ಶೆಟ್ಟಿ, ಕಿರಣ್ ಕೋಡಿಕಲ್, ಪ್ರಸಾದ್ ಕುಮಾರ್ ಶೆಟ್ಟಿ, ಸುಕುಮಾರ್ ಶೆಟ್ಟಿ, ವಿಜಯ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ : ಸತೀಶ್ ಕಾಪಿಕಾಡ್