ಶತಮಾನೋತ್ಸವದ ಸಂಭ್ರಮಾಚರಣೆಗೆ ಭರದ ತಯಾರಿ
ಬೆಳಗಾವಿ: ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಏಕೈಕ ಕಾಂಗ್ರೆಸ್ ಅಧಿವೇಶನಕ್ಕೆ ಸಾಕ್ಷಿಯಾದ ನೆಲ ಬೆಳಗಾವಿ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ 39 ನೇ ಅಧಿವೇಶನವು 2024 ರ ಡಿಸೆಂಬರ್ 26 ರಿಂದ 28 ರವರೆಗೆ ಬೆಳಗಾವಿಯಲ್ಲಿ ನಡೆದಿತ್ತು.
ಈ ಅವಿಸ್ಮರಣೀಯ ಐತಿಹಾಸಿಕ ಘಟನೆಯ ಶತಮಾನೋತ್ಸವವನ್ನು 2024 ರ ಡಿಸೆಂಬರ್ 26 ರಂದು ಅಂದಿನ ಅಧಿವೇಶನ ನಡೆದ ಸ್ಥಳದಲ್ಲೇ ಆಚರಿಸಲು ತೀರ್ಮಾನಿಸಲಾಗಿದೆ. ಕಾಂಗ್ರೆಸ್ ಪಕ್ಷ ಮತ್ತು ಕರ್ನಾಟಕ ಸರ್ಕಾರ ವಿವಿಧ ಕಾರ್ಯಕ್ರಮಗಳ ಮೂಲಕ ಸಂಭ್ರಮದ ಆಚರಣೆಗೆ ಬೇಕಾದ ವ್ಯವಸ್ಥೆಗಳನ್ನು ಮಾಡುತ್ತಿದೆ. ಆಚರಣೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನ ಪಾಲುಗೊಳ್ಳುವ ನಿರೀಕ್ಷೆಯಿದೆ.
ಬೆಳಗಾವಿಯು ಬ್ರಿಟಿಷ್ ಪ್ರಭುತ್ವದ ಪ್ರಮುಖ ಮಿಲಿಟರಿ ಕೇಂದ್ರವಾಗಿತ್ತು, ಮತ್ತು ಪೋರ್ಚುಗೀಸ್ ಗೋವಾಕ್ಕೆ ಸಮೀಪದಲ್ಲಿತ್ತು. ಆದ್ದರಿಂದ, ಸ್ವಾತಂತ್ರ್ಯ ಹೋರಾಟದ ಉತ್ಕರ್ಷದ ಬಗ್ಗೆ ಎರಡೂ ವಸಾಹತುಶಾಹಿ ಶಕ್ತಿಗಳ ಗಮನ ಸೆಳೆಯಲು ಬೆಳಗಾವಿಯು ಸೂಕ್ತ ಸ್ಥಳವೆಂದು ನಿರ್ಧರಿಸಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತನ್ನ ಅಧಿವೇಶನವನ್ನು ಅಲ್ಲಿ ನಡೆಸಿರುವುದು ಮಹತ್ವ ಪಡೆದುಕೊಂಡಿದೆ. ಜವಾಹರಲಾಲ್ ನೆಹರು, ಸರೋಜಿನಿ ನಾಯ್ಡು, ಅಬ್ದುಲ್ ಗಫಾರ್ ಖಾನ್, ಮೌಲಾನಾ ಆಜಾದ್ ಮತ್ತು ಗಂಗಾಧರರಾವ್ ದೇಶಪಾಂಡೆ ಸೇರಿದಂತೆ ಹಲವಾರು ಪ್ರಮುಖ ನಾಯಕರು ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಿದ್ದರು ಎಂದು ಲಭ್ಯ ಮಾಹಿತಿಗಳು ತಿಳಿಸುತ್ತವೆ.
ಬೆಳಗಾವಿ ಅಧಿವೇಶನಕ್ಕೆ ಮಂಗಳೂರು, ಕಾರವಾರ, ಮೈಸೂರು ಸಂಸ್ಥಾನ ಮತ್ತು ಕೊಡಗು ಸೇರಿದಂತೆ ಎಲ್ಲ ಕಡೆಯ ಕನ್ನಡ ಭಾಷಿಕರೂ ಆಗಮಿಸಿದ್ದರು. ಈ ಅರ್ಥದಲ್ಲಿ ಅದು ಏಕೀಕರಣಪೂರ್ವದ ಕರ್ನಾಟಕ ಸಮಾವೇಶವಾಗಿತ್ತು. ಕರ್ನಾಟಕ ಏಕೀಕರಣಕ್ಕೆ ಸಂಬಂಧಿಸಿದಂತೆ ಅನೇಕ ವಿಚಾರಗಳು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿಯೇ ಸ್ಪಷ್ಟ ರೂಪ ಪಡೆದವು. ಮಹಾತ್ಮ ಗಾಂಧಿಯವರೇ ಇದರ ಹಿಂದಿನ ಪ್ರೇರಕಶಕ್ತಿಯಾಗಿದ್ದರು.
ಸ್ವಾತಂತ್ರ್ಯ ಹೋರಾಟಕ್ಕೆ ಅಖಿಲ ಭಾರತ ಸ್ಪರ್ಶವನ್ನು ನೀಡುವ ಚಿಂತನೆಯ ಅಂಗವಾಗಿ ವಿವಿಧ ಪ್ರದೇಶಗಳನ್ನು ಈ ಚಳುವಳಿಯಲ್ಲಿ ಸಕ್ರಿಯಗೊಳಸುವ ಉದ್ದೇಶವೂ ಈ ಅಧಿವೇಶನದ ಹಿಂದಿತ್ತು. ಇದರ ಮೂಲಕ ರಾಷ್ಟ್ರೀಯ ಚಳವಳಿಯಲ್ಲಿ ಪ್ರಾದೇಶಿಕ ನಾಯಕರ ಪಾತ್ರ ಮತ್ತು ಅವರ ನಾಯಕತ್ವವನ್ನು ಉತ್ತೇಜಿಸುವ ಅಗತ್ಯವನ್ನು ಮನವರಿಕೆ ಮಾಡಿಸುವ ಪ್ರಯತ್ನವಾಯಿತು.
ಬ್ರಿಟಿಷರ ಆಡಳಿತದ ವಿರುದ್ಧದ ಹೋರಾಟದ ಕಾರ್ಯತಂತ್ರ ರೂಪಿಸುವುದು, ಅಸಹಕಾರ ಚಳವಳಿಯ ಪರಿಣಾಮಗಳು ಮತ್ತು ನಾಗರಿಕ ಅಸಹಕಾರದ ಅಗತ್ಯ ಮುಂತಾದ ಪ್ರಮುಖ ವಿಷಯಗಳು ಅಧಿವೇಶನದಲ್ಲಿ ವ್ಯಾಪಕವಾಗಿ ಚರ್ಚಿಸಲ್ಪಟ್ಟವು. ಕಾಂಗ್ರೆಸ್ ಪಕ್ಷದಲ್ಲಿನ ವಿವಿಧ ಬಣಗಳ ನಡುವೆ ಒಗ್ಗಟ್ಟು ಮೂಡಿಸಲು ಅಧಿವೇಶನ ವೇದಿಕೆ ಕಲ್ಪಿಸಿತ್ತು. ಅಹಿಂಸಾತ್ಮಕ ಹೋರಾಟವನ್ನು ಉತ್ಸಾಹದಿಂದ ಮುಂದುವರಿಸಲು ಮತ್ತು ರಚನಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಐಎನ್ಸಿಯ ಬದ್ಧತೆಯನ್ನು ಇಲ್ಲಿ ಪುನರುಚ್ಛರಿಸಲಾಗಿತ್ತು. ಜನರಲ್ಲಿ ರಾಷ್ಟ್ರೀಯತೆಯ ಮನೋಭಾವವನ್ನು ಹುಟ್ಟುಹಾಕುವಲ್ಲಿ ಮತ್ತು ಈ ಪ್ರದೇಶದಲ್ಲಿ ಸ್ವಾತಂತ್ರ್ಯ ಚಳುವಳಿಗೆ ಹೆಚ್ಚಿನ ಬಲ ತುಂಬುವಲ್ಲಿ ಆ ಅಧಿವೇಶನ ಯಶಸ್ವಿಯಾಗಿತ್ತು.
ಈ ಐತಿಹಾಸಿಕ ಅಧಿವೇಶನದ ಪ್ರಮುಖ ಅಂಶಗಳೆಂದರೆ, ಅಹಿಂಸಾತ್ಮಕ ಸ್ವಾತಂತ್ರ್ಯ ಹೋರಾಟವನ್ನು ಉತ್ಸಾಹದಿಂದ ಮುಂದುವರಿಸುವುದು ಮತ್ತು ಅದೇ ಸಮಯದಲ್ಲಿ ಭಾರತೀಯ ಸಮಾಜದಲ್ಲಿ ಅಸ್ಥಿತ್ವದಲ್ಲಿರುವ ಸಾಮಾಜಿಕ ಅನಿಷ್ಟಗಳನ್ನು ನಿರ್ಮೂಲನೆ ಮಾಡಲು ರಚನಾತ್ಮಕ ಕೆಲಸ ಕೈಗೊಳ್ಳುವುದು. ಇವು ಮುಂದೆ ಕಾಂಗ್ರೆಸ್ ಸಿದ್ಧಾಂತದ ಭಾಗಗಳಾಗಿ ರೂಪುಗೊಂಡವು. ಅಧ್ಯಕ್ಷತೆ ವಹಿಸಿದ್ದ ಮಹಾತ್ಮ ಗಾಂಧಿಯವರೂ ಖಾದಿ ಮತ್ತು ಗ್ರಾಮೋದ್ಯೋಗಗಳನ್ನು ಉತ್ತೇಜಿಸುವಂತೆ ಮತ್ತು ಅಸ್ಪೃಶ್ಯತೆಯನ್ನು ನಿವಾರಿಸುವಂತೆ ಕರೆ ನೀಡಿದರು.
100 ವರ್ಷಗಳ ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಡೆಸಿದ 1924ರ ಬೆಳಗಾವಿ ಅಧಿವೇಶನದ ಆಶಯಗಳನ್ನು ಅವಲೋಕಿಸುವಾಗ, ಕಾಂಗ್ರೆಸ್ ಪಕ್ಷವು ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಡಲು ಬಲಿದಾನ ನೀಡಿದ ಮತ್ತು ಹೋರಾಟ ನಡೆಸಿದ ಎಲ್ಲ ಸ್ವಾತಂತ್ರ್ಯ ಹೋರಾಟಗಾರರನ್ನು ಅಭಿಮಾನದಿಂದ ಸ್ಪರಿಸಿಕೊಳ್ಳುತ್ತಾ ಅವರಿಗೆ ಆದರಪೂರ್ವಕ ಶೃದ್ಧಾಂಜಲಿ ಅರ್ಪಿಸುತ್ತದೆ. ಕಾಂಗ್ರೆಸ್ ಪಕ್ಷವು ಸಮಾನತೆ ಮತ್ತು ಸಾಮಾಜಿಕ ಸಾಮರಸ್ಯದ ಹಾದಿಯನ್ನು ಅನುಸರಿಸಲು ಬದ್ಧವಾಗಿದೆ. ಪಕ್ಷವು ಸಾಮಾಜಿಕ ನ್ಯಾಯವನ್ನು ಸಾಧಿಸಲು ಶಕ್ತಿಮೀರಿ ಶ್ರಮಿಸುವ ತನ್ನ ಸಂಕಲ್ಪವನ್ನು ಪುನರುಚ್ಚರಿಸುತ್ತದೆ ಮತ್ತು ಪ್ರತಿಯೊಬ್ಬ ಭಾರತೀಯನಿಗೆ ಆರ್ಥಿಕ ಸ್ವಾತಂತ್ರ್ಯದೊಂದಿಗೆ ಘನತೆಯ ಜೀವನವನ್ನು ಒದಗಿಸಲು ಸದಾ ಶ್ರಮಿಸುತ್ತಿರುತ್ತದೆ.
ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆ ಸಾರ್ವಜನಿಕ ಕಾರ್ಯಕ್ರಮವಾಗಿದ್ದು ಇದರಲ್ಲಿ ಎಲ್ಲರೂ ಭಾಗವಹಿಸುವಂತೆ ವಿಧಾನ ಪರಿಷತ್ ಶಾಸಕರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಮಂಜುನಾಥ ಭಂಡಾರಿ ಅವರು ಮನವಿ ಮಾಡಿದ್ದಾರೆ.