ಮಂಗಳೂರು ; ಸಾವಯವ ಕೃಷಿಕ ಗ್ರಾಹಕ ಬಳಗ(ರಿ) ಮಂಗಳೂರು ಇವರು ಕಳೆದ ಒಂದು ದಶಕದಿಂದ ವಿಷಮುಕ್ತ ಅನ್ನದ ಬಟ್ಟಲು ಎಂಬ ಧೈಯದಡಿ ಸಂಭದಿತ ಬಹಳಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು. ಈ ಹಿನ್ನೆಲೆಯಲ್ಲಿ ಇದೆ ತಿಂಗಳ ತಾರೀಕು 4 ಮತ್ತು 5 ಶನಿವಾರ ಮತ್ತು ಭಾನುವಾರ ಸಂಘ ನಿಕೇತನದಲ್ಲಿ, ಮಂಗಳೂರಿಗೆ ಪ್ರಥಮ ಬಾರಿಗೆ ಗೆಡ್ಡೆ ಗೆಣಸು ಮತ್ತು ಸೊಪ್ಪು ಮೇಳವನ್ನು ಆಯೋಜಿಸಲಾಗಿದೆ. ಶ್ರೀ ಸರಸ್ಕೃತಿ ಚಾರಿಟೆಬಲ್ ಟ್ರಸ್ಟ್ ಮತ್ತು ಕೇಶವ ಸ್ಮೃತಿ ಸಂವರ್ಧನಾ ಸಮಿತಿ ಈ ಒಂದು ವಿನೂತನ ಕಾರ್ಯಕ್ರಮಕ್ಕೆ ಸಹಯೋಗ ನೀಡಿದ್ದು ಹಲವು ಸಂಘ ಸಂಸ್ಥೆಗಳ ಸಹಕಾರವಿದೆ ಎಂದು ತಿಳಿಸಿದ್ದಾರೆ.
ಗೆಡ್ಡೆ ಗೆಣಸು ಭೂತಾಯಿ ಮಡಿಲಿನ ಅದ್ಭುತ ಸೃಷ್ಟಿ. ಋಷಿ ಮುನಿಗಳು ಮತ್ತು ಆದಿವಾಸಿಗಳು ಗೆಡ್ಡೆ ಗೆಣಸು ತಿಂದು ರೋಗವಿಲ್ಲದೆ ಆರೋಗ್ಯವಂತರಾಗಿ ಜೀವಿಸುತ್ತಿದ್ದರು ಎಂಬುದನ್ನು ಕೇಳಿದ್ದೇವೆ. ರಾಮಾಯಣ, ಮಹಾಭಾರತ ಮತ್ತು ವೇದಕಾಲೀನ ಕೃತಿಗಳಲ್ಲಿ ಗೆಡ್ಡೆ ಗೆಣಸುಗಳ ಉಲ್ಲೇಖವಿದೆ. ಆಯುರ್ವೇದ ಮತ್ತು ಜನಪದ ವೈದ್ಯದಲ್ಲಿ ಗೆಡ್ಡೆ ಗೆಣಸನ್ನು ಔಷಧಿಯಾಗಿ ಬಳಸಲಾಗುತ್ತದೆ. ಗೆಡ್ಡೆ, ಗೆಣಸುಗಳು ಬರಗಾಲವನ್ನು ಎದುರಿಸಿ ನಿಲ್ಲುವ ಸಾಮರ್ಥ್ಯ ಹೊಂದಿವೆ. ಗೆಡ್ಡೆ ಗೆಣಸುಗಳನ್ನು ಸುಲಭವಾಗಿ ಹೊಲದ ಅಂಚಿನಲ್ಲಿ ಇಲ್ಲವೇ ಬೆಳೆಯ ಸಾಲಿನ ನಡುವೆ ಬೆಳೆದುಕೊಳ್ಳಬಹುದು, ಮನೆ ಹಿತ್ತಲು ಮತ್ತು ತಾರಸಿ ತೋಟದಲ್ಲೂ ಇವನ್ನು ಬೆಳೆಸಬಹುದು, ಹತ್ತಾರು ವರ್ಷ ನೆಲದಲ್ಲಿ ಬಿಟ್ಟರೂ ಕಡದೆ, ಕೊಳೆಯದೆ ಉಳಿಯುತ್ತವೆ. ಬಳ್ಳಿ ಆಲೂಗೆಡ್ಡೆ ಹುತ್ತರಿ ಗೆಣಸು, ಪರ್ಪಲ್ ಯಾಮ್ ಬಳ್ಳಿಯಾಗಿ ಹಬ್ಬಿ ಬೆಳೆದರೆ, ಕೆಸು ಅಗಲವಾದ ಆಕರ್ಷಕ ಎಲೆಗಳನ್ನು ಹೊತ್ತು ನಿಲ್ಲುತ್ತದೆ. ಶುಂಠಿ, ಅರಶಿನ, ಆರಾರೂಟ್ ಬೇರಿನ ರೂಪದಲ್ಲಿರುತ್ತವೆ. ಮಾಕಳಿ ಬೇರು ಮೂಲಿಕೆಯೂ ಹೌದು, ಬಾಯಿ ಚಪ್ಪರಿಸುವ ಉಪ್ಪಿನಕಾಯಿಯೂ ಹೌದು. ಕ್ಯಾರೆಟ್, ಬಿಟ್ ರೂಟ್, ಸಿಹಿ ಗೆಣಸು, ಮರ ಗೆಣಸು ನೆಲದೊಡಲ ಸೋಜಿಗ ಪೋಷಕ ನಾರು ಹಾಗೂ ಶರ್ಕರ ಪಿಷ್ಯದಿಂದ ಹೇರಳವಾಗಿರುವ ಗೆಡ್ಡೆ, ಗೆಣಸುಗಳು, ಶರೀರಕ್ಕೆ ಬೇಕಾದ ಚೈತನ್ಯವನ್ನು ಒದಗಿಸುತ್ತವೆ. ಇವುಗಳ ನಿರಂತರ ಬಳಕೆಯಿಂದ ಬೊಜ್ಜು, ಮಧುಮೇಹ, ಕ್ಯಾನ್ಸರ್, ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ದೂರವಿಡಬಹುದು. ಚರ್ಮದ ಮೈಕಾಂತಿ ವೃದ್ಧಿಸಲು ಮತ್ತು ವಯಸ್ಸನ್ನು ನಿಧಾನಿಸಲು ಗೆಡ್ಡೆ ಗೆಣಸು ಸಹಕಾರಿ. ಇವುಗಳಲ್ಲಿ ಕಾರ್ಬೋಹೈಡೇಟ್ ಸಂಯುಕ್ತ ರೂಪದಲ್ಲಿದೆ. ರಕ್ತದಲ್ಲಿ ಸಕ್ಕರೆ ಅಂಶ ಒಮ್ಮೆಲೇ ಹೆಚ್ಚುವುದಿಲ್ಲ. ಮಧುಮೇಹ ರೋಗಿಗಳು ಯಾವುದೇ ಆತಂಕವಿಲ್ಲದೆ ಗೆಡ್ಡೆ ಗೆಣಸು ಸವಿಯಬಹುದು. ಕರ್ನಾಟಕ ಗೆಡ್ಡೆ ಗೆಣಸು ವೈವಿಧ್ಯಕ ಹೆಸರುವಾಸಿ. ಕುಣಬಿ, ಸಿದ್ಧಿ, ಜೇನು ಕುರುಬ, ಬೆಟ್ಟ, ಕುರುಬ, ಸೋಲಿಗ ಮತ್ತು ಇರುಳಿಗ ಸಮುದಾಯಗಳು ಗೆಡ್ಡೆ ಗೆಣಸನ್ನು ಇವತ್ತಿಗೂ ಆಹಾರವಾಗಿ ಬಳಸುತ್ತಿದ್ದಾರೆ. ನೈಸರ್ಗಿಕ ವಿಕೋಪ ಮತ್ತು ಬರಗಾಲದಲ್ಲಿ ಗೆಡ್ಡೆ ಗೆಣಸು ಜೀವ ಉಳಿಸುವ ಸಂಜೀವಿನಿಯತೆ ಕೆಲಸ ಮಾಡುತ್ತವೆ. ವಾತಾವರಣದ ವೈಪರೀತ್ಯವಿದ್ಯಾಗ ಎಲ್ಲ ಬೆಳೆಗಳು ವಿಫಲವಾದಾಗ ಗೆಡ್ಡೆ ಗೆಣಸುಗಳು ರೈತರ ಕೈಹಿಡಿಯುತ್ತವೆ; ಅದಾಯ ತರುತ್ತವೆ. ನೈಸರ್ಗಿಕವಾಗಿ ಬೆಳೆಯುವ ಗಡ್ಡ, ಗೆಣಸುಗಳು ನಮ್ಮ ಅನ್ನದ ತಟ್ಟೆಗೆ ಬರಬೇಕು ಎಂಬ ಉದ್ದೇಶದಿಂದ ಈ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ತಾರೀಕು 4 ಮತ್ತು 5 ರಂದು ಸಂಘನಿಕೇತನದಲ್ಲಿ ಬೆಳಗ್ಗೆ, 9 ರಿಂದ ಸಂಜೆ 7 ರ ತನಕ ಕರ್ನಾಟಕದ ವಿವಿಧ ಭಾಗಗಳಿಂದ ಹಾಗೂ ಮಹಾರಾಷ್ಟ್ರ ಒರಿಸ್ಸಾ, ಆಂಧ್ರ ಪ್ರದೇಶ, ಕೇರಳ ರಾಜ್ಯಗಳಿಂದ ಬರಲಿರುವ ಗೆಡ್ಡೆ ಗೆಣಸು ಬೆಳೆಗಾರರು ಬೆಳೆಸಿದ ಶುಂಠಿ, ಕೂವೆ ಗೆಡ್ಡೆ, ಉತ್ತರಿ ಗೆಡ್ಡ, ಪರ್ಪಲ್ ಯಾಮ್, ಬಿಳಿ ಸಿಹಿ ಗೆಣಸು, ಬಳ್ಳಿ ಬಟಾಟೆ, ಕಪ್ಪು ಹರಿಷಿಣ, ಕಪ್ಪು ಶುಂಟಿ, ಕಾಡು ಗೆಣಸು, ಮುಳ್ಳು ಗೆಣಸು, ಸುವರ್ಣ ಗೆಡ್ಡೆ, ಕೆಸು, ಹಳದಿ ಮತ್ತು ಕೆಂಪು ಸಿಹಿ ಗೆಣಸಿನ ಬೀಜದ ಗೆಡ್ಡೆ ಗೆಣಸನ್ನು ಮಾರಾಟಕ್ಕೆ ತರಲಿದ್ದಾರೆ. ತಾರೀಕು 4 ಶನಿವಾರ ಮತ್ತು 5 ಆದಿತ್ಯವಾರ ಎರಡೂ ದಿನಗಳಲ್ಲಿ ರೈತರಿಗಾಗಿ ಗೆಡ್ಡೆ ಗೆಣಸು ಮತ್ತು ಸೊಪ್ಪು ಕೃಷಿ ತರಬೇತಿ’ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ತರಬೇತಿ ಕಾರ್ಯಕ್ರಮದಲ್ಲಿ ಗೆಡ್ಡೆ ಗೆಣಸು ಹಾಗೂ ಸೊಪ್ಪು ವೈವಿಧ್ಯ, ಸಾಗುವಳಿ ವಿಧಾನಗಳು, ಮೌಲ್ಯವರ್ಧನೆಯ ಅವಕಾಶಗಳು ಮತ್ತು ಮಾರುಕಟ್ಟೆಯ ಸಾಧ್ಯತೆಗಳ ಬಗ್ಗೆ, ತಿಳಿಸಿಕೊಡಲಾಗುವುದು. ಮಕ್ಕಳಲ್ಲಿ ಗೆಡ್ಡೆ ಗೆಣಸಿನ ಬಗ್ಗೆ ಅರಿವು ಮೂಡಿಸುವ ದೃಷ್ಟಿಯಿಂದ ಅದಾಗಲೇ ಪ್ರಭಂದ ಸ್ಪರ್ಧೆ ಮತ್ತು ಪೋಸ್ಟ್ ಕಾರ್ಡ್ ನಲ್ಲಿ ಚಿತ್ರ ಸ್ಪರ್ಧೆ ನಡೆಸಿದ್ದು ಇದರ ಪ್ರಶಸ್ತಿ ವಿಜೇತರಿಗೆ ಸಭೆಯಲ್ಲಿ ಬಹುಮಾನ ವಿತರಣೆಯಾಗಲಿದೆ.
ಇವೆರಡೂ ಕೃಷಿಯ ಬಗ್ಗೆ ಸಂಗ್ರಹಯೋಗ್ಯ ಮಾಹಿತಿ ಕೈಪಿಡಿ ಯೊಂದು ತಾರೀಕು 4ಕ್ಕೆ ಬಿಡುಗಡೆಯಾಗಲಿದೆ. ಎರಡು ದಿನಗಳಲ್ಲಿ ಗೆಡ್ಡೆ ಗೆಣಸು ಮತ್ತು ಸೊಪ್ಪು ಇದರ ಮೌಲ್ಯ ವರ್ಧಿತ ತಾಜಾ ತಿಂಡಿ ತಿನಿಸುಗಳ ಮಾರಾಟ ವ್ಯವಸ್ಥೆ ಕೂಡ ಇದೆ. ಎರಡು ದಿನಗಳ ಗೆಡ್ಡೆ ಗೆಣಸು ಮೇಳದಲ್ಲಿ ಸಿರಿಧಾನ್ಯ, ಬೇಳೆ ಕಾಳು, ಸಾವಯವ ಉತ್ಪನ್ನಗಳು, ಮೌಲ್ಯವರ್ಧಿತ ಉತ್ಪನ್ನಗಳು, ದೇಸಿ ಬೀಜಗಳು ಮತ್ತು ಹಣ್ಣಿನ ಗಿಡಗಳು ಮಾರಾಟಕ್ಕೆ ಬರಲಿವೆ. ಬಾಯಿ ಚಪ್ಪರಿಸಲು ಅಡುಗೆ ಮಳಿಗೆಗಳು ಇರಲಿವೆ.
ತಾರೀಕು 4 ಸಂಜೆ 6.30 ರಿಂದ 8.30ತನಕ ರಾಜ್ಯ ಪ್ರಶಸ್ತಿ ವಿಜೇತ ಕಲಾಕುಂಭ ಕಲಾವಿದರಿಂದ ತುಳುನಾಡ ವೈಭವ’ ಎಂಬ ನೃತ್ಯರೂಪಕ, ತಾರೀಕು 5 ರಂದು 2.30 ರಿಂದ 3.30ತನಕ ಪಿರಿಯಾಪಟ್ಟಣ ಜೇನುಕುರುಬ ಜನಾಂಗದ ಮಕ್ಕಳಿಂದ ಬುಡಕಟ್ಟು ನೃತ್ಯ’. ತದನಂತರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸರಾಯೂ ಬಾಲ ಯಕ್ಷ ವೃಂದ (ರಿ) ಇವರಿಂದ ಯಕ್ಷಗಾನ ಪ್ರದರ್ಶನ ಇರುವುದು
ತಾರೀಕು 4 ಬೆಳಗ್ಗೆ, ಈ ಕಾರ್ಯಕ್ರಮವನ್ನು ಕೊಂಡೆವೂರು ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ಉದ್ಘಾಟಿಸಿ ಆಶೀರ್ವಚನ ನೀಡಲಿರುತ್ತಾರೆ, ಅಧ್ಯಕ್ಷತೆಯನ್ನು ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಮಾನ್ಯ ಕ್ಯಾ ಬ್ರಿಜೇಶ್ ಚೌಟ ವಹಿಸಲಿದ್ದಾರೆ, ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಶ್ರೀ ಯು ಟಿ ಖಾದರ್ ರವರ ಘನ ಉಪಸ್ಥಿತಿಯಲ್ಲಿ ಕೈಪಿಡಿ ಬಿಡುಗಡೆಯನ್ನು ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀ ಮನೋಜ್ ಕುಮಾರ್ ನೆರವೇರಿಸಲಿದ್ದಾರೆ. ಆಹಾರ ಮಳಿಗೆ ಉದ್ಘಾಟನೆಯನ್ನು ಶ್ರೀ ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕರಾದ ಶ್ರೀ ಶ್ರೀಹರಿನಾರಾಯಣದಾಸ ಅಸ್ರಣ್ಣ ಇವರು ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷರು ಡಾ.ಎಮ್ ಮೋಹನ ಆಳ್ವ, ಬ್ಯಾಂಕ್ ಆಫ್ ಬರೋಡ ಇದರ ಪ್ರಧಾನ ವ್ಯವಸ್ಥಾಪಕ ಶ್ರೀ ರಾಜೇಶ್ ಖನ್ನ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಪುತ್ತೂರು ಇದರ ಅಧ್ಯಕ್ಷರಾದ ಶ್ರೀ ಸತೀಶ್ಚಂದ್ರ ಎಸ್ ಆರ್, ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರು ಶ್ರೀ ಶ್ರೀಪಡ ಭಾಗವಹಿಸಲಿದ್ದಾರೆ. ಅಂತೆಯೆ ತಾರೀಕು 5 ಸಂಜೆ 4.30 ಗೆ ನಡೆಯುವ ಸಮಾರೋಪ ಕಾರ್ಯಕ್ರಮಕ್ಕೆ ಒಡಿಯೂರು ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಇವರು ಆಗಮಿಸಿ ಆಶೀರ್ವಚನ ಮಾಡಲಿದ್ದು, ಅಧ್ಯಕ್ಷತೆಯನ್ನು ಮಾನ್ಯ ಶಾಸಕರಾದ ಶ್ರೀ ವೇದವ್ಯಾಸ್ ಕಾಮತ್ ರವರು ವಹಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಕಲ್ಲಡ್ಕ ಡಾ| ಪ್ರಭಾಕರ ಭಟ್, ಕ್ಯಾಂಪೊ ಅಧ್ಯಕ್ಷರಾದ ಶ್ರೀ ಕಿಶೋರ್ ಕೊಡಿ, ಕೆ.ಎಮ್.ಎಫ್ ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಸುಚರಿತ ಶೆಟ್ಟಿ ಮತ್ತು ಮೈಸೂರಿನ ಸಹಜ ಸೀಡ್ ಇದರ ಸಂಸ್ಥಾಪಕರಾದ ಶ್ರೀ ಕೃಷ್ಣ ಪ್ರಸಾದ್ ಜಿ. ಇವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರು ಪ್ರಭಾಕರ ಶರ್ಮಾ,ರತ್ನಾಕರ್ ಕುಲಾಯಿ ಕಾರ್ಯದರ್ಶಿ, ಜಿ.ಆರ್.ಪ್ರಸಾದ್, ಶರತ್ ಕುಮಾರ್,ಸೋಮಪ್ಪ ನಾಯಕ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಚಿತ್ರ- ಶಶಿ ಬೆಳ್ಳಾಯರು