“ಜಿಲ್ಲೆಯಲ್ಲಿ ನೂರಾರು ಅಕ್ರಮ ಕಸಾಯಿಖಾನೆಗಳು ಕಾರ್ಯನಿರ್ವಹಿಸುತ್ತಿದ್ದರು ಪೊಲೀಸ್ ಇಲಾಖೆ ಸರಿಯಾದ ಕ್ರಮ ತೆಗೆದುಕೊಳ್ಳುತ್ತಿಲ್ಲ. ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ವಿದ್ಯಮಾನಗಳನ್ನು ಎಂದಿಗೂ ಸಹಿಸುವುದಿಲ್ಲ” ಎಂದು ಭಜರಂಗದಳ ವಿಹಿಂಪ ಮಂಗಳೂರು ವಿಭಾಗದ ಸಂಯೋಜಕ ಪುನೀತ್ ಅತ್ತಾವರ ಹೇಳಿದರು.
ಇತ್ತೀಚೆಗೆ ತಾಲೂಕಿನ ಚಾರ್ಮಾಡಿ ಬಳಿ ಮೃತ್ಯುಂಜಯ ನದಿಗೆ ಗೋಮಾಂಸ ತ್ಯಾಜ್ಯ ಹಾಕಿ ನದಿಯನ್ನು ಅಪವಿತ್ರಗೊಳಿಸಿದ ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಕಕ್ಕಿಂಜೆಯಲ್ಲಿ ಸೋಮವಾರ ನಡೆದ ಬೃಹತ್ ಪ್ರತಿಭಟನೆ ಸಭೆಯಲ್ಲಿ ಅವರು ಮಾತನಾಡಿದರು.
“ಅಕ್ರಮ ಕಸಾಯಿಖಾನೆಗಳನ್ನು ನಿಲ್ಲಿಸದಿದ್ದರೆ ವಿಹಿಂಪ ಭಜರಂಗದಳ ನೇರ ಕಾರ್ಯಾಚರಣೆಗೆ ಇಳಿಯಲಿದೆ.ಇದಕ್ಕೆ ಸರಕಾರ ಮತ್ತು ಪೊಲೀಸ್ ಇಲಾಖೆ ನೇರ ಹೊಣೆಯಾಗಲಿದೆ. ಗೋವುಗಳ ರಕ್ಷಣೆಗೆ ಹಿಂದೂ ಸಮಾಜ ಯಾವ ತ್ಯಾಗಕ್ಕೂ ಸಿದ್ಧವಿದೆ ಇತ್ತೀಚೆಗೆ ಶಾಸಕ ಹರೀಶ್ ಪೂಂಜ ಅಧಿವೇಶನದಲ್ಲಿ ಆನೆಗಳ ಕುರಿತು ಮಾತನಾಡಿದಾಗ ಮಾನವೀಯತೆ ಬಗ್ಗೆ ತಿಳಿಸಿದ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಗೋವುಗಳಿಗೂ ಬಾಳುವ ಹಕ್ಕಿದೆ ಎಂಬುದನ್ನು ತಿಳಿಯಬೇಕಿದೆ” ಎಂದರು.
ವಿಹಿಂಪ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ಮಾತನಾಡಿ
“ಚಾರ್ಮಾಡಿ ಪ್ರಕರಣದಲ್ಲಿ 5ಕ್ಕಿಂತ ಅಧಿಕ ಮಂದಿ ಭಾಗಿಯಾಗಿ ಇಬ್ಬರನ್ನು ಮಾತ್ರ ಪೊಲೀಸ್ ಇಲಾಖೆ ಬಂಧಿಸಿದೆ. ಉಳಿದವರನ್ನು ತಕ್ಷಣ ಬಂಧಿಸಿ ಕೃತ್ಯಕ್ಕೆ ಬಳೆಸಿದ ವಾಹನವನ್ನು ವಶಪಡಿಸಿಕೊಳ್ಳಬೇಕು. ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಪೊಲೀಸ್ ಇಲಾಖೆಯನ್ನು ಕೈಕಟ್ಟಿ ಕುಳಿತಿರುವಂತೆ ಮಾಡಲಾಗಿದೆ” ಎಂದು ಹೇಳಿದರು.
ವಿಹಿಂಪ ಭಜರಂಗದಳ ತಾಲೂಕು ಪ್ರಖಂಡದ ಅಧ್ಯಕ್ಷ ದಿನೇಶ್ ಚಾರ್ಮಾಡಿ, ತಾಲೂಕು ಸಂಯೋಜಕ ಸಂತೋಷ್ ಅತ್ತಾಜೆ, ಗೋ ರಕ್ಷಕ ರಮೇಶ ಧರ್ಮಸ್ಥಳ ಉಪಸ್ಥಿತರಿದ್ದರು.
ಬೆಳ್ತಂಗಡಿ ಪ್ರಖಂಡದ ಕಾರ್ಯದರ್ಶಿ ಮೋಹನ್ ಬೆಳ್ತಂಗಡಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಅಖಿಲ್ ರೆಖ್ಯ ಸ್ವಾಗತಿಸಿದರು.
ಪ್ರತಿಭಟನಾಕಾರರು
ಚಾರ್ಮಾಡಿ ಪಂಚಾಯಿತಿ ಮೂಲಕ ಮನವಿ ಸಲ್ಲಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಹರೀಶ್ ಪೂಂಜ “ಹಿಂದೂ ಸಮಾಜದ ಭಾವನೆಗಳನ್ನು ಅರ್ಥ ಮಾಡಿಕೊಂಡು ಗೋಹತ್ಯೆ ನಿಷೇಧ ಕಾಯಿದೆಯಲ್ಲಿರುವ ಕಾನೂನುಗಳನ್ನು ಜಾರಿಗೆ ತರಬೇಕು.ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಭಯೋತ್ಪಾದನೆ, ಗೋ ಹತ್ಯೆ ಮೂಲಕ ಹಿಂದೂ ಸಮಾಜದ ಭಾವನೆಗಳಿಗೆ ಘಾಸಿ ಉಂಟುಮಾಡುವ ಕೃತ್ಯಗಳಿಗೆ ಕಡಿವಾಣ ಬೀಳಬೇಕು.ಯೋಗಿ ಸರಕಾರ ಬುಲ್ಡೋಜರ್ ಮಾದರಿ ಕಾರ್ಯಾಚರಣೆ ಕೈಗೊಂಡಿರುವ ಕಾರಣ ಉತ್ತರ ಪ್ರದೇಶದಲ್ಲಿ ಅನೇಕ ಕೃತ್ಯಗಳು ಹತೋಟಿಗೆ ಬಂದಿವೆ. ವಿಧಾನಸಭಾಧ್ಯಕ್ಷರು ಗೋವುಗಳಿಗೂ ಬದುಕು ಹಕ್ಕಿದೆ ಎಂಬುದನ್ನು ಅರಿಯುವ ಅಗತ್ಯವಿದೆ” ಎಂದು ಹೇಳಿದರು.