ಮಂಗಳೂರು: “ಡೊಂಗರಕೇರಿ ವೆಂಕಟರಮಣ ದೇವಸ್ಥಾನದಲ್ಲಿ ಜನವರಿ 10ರಂದು ಏಳನೇ ವರ್ಷದ ಏಕಾದಶಿಯನ್ನು ಅದ್ಧೂರಿಯಿಂದ ಆಚರಿಸಲಾಗುವುದು” ಎಂದು ದೇವಳದ ಮೆನೇಜಿಂಗ್ ಟ್ರಷ್ಟಿ ಪ್ರವೀಣ್ ನಾಗ್ವೇಕರ್ ಬೋಳಾರ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
“ಇಲ್ಲಿ ನಡೆಯುವ ಏಕಾದಶಿ ಕಾರ್ಯಕ್ರಮ ದೇವರ ಅಪ್ಪಣೆಯಂತೆ ನಡೆಯುತ್ತಿದ್ದು ಪ್ರತೀ ಬಾರಿಯಂತೆ ಈ ಬಾರಿಯೂ ವಿಜೃಂಭಣೆಯಿಂದ ಆಚರಿಸಲಾಗುವುದು. ಅಂದು ಲೋಕ ಕಲ್ಯಾಣಕ್ಕಾಗಿ ನಾಮತ್ರಯ ಮಹಾಮಂತ್ರ ಜಪಯಜ್ಞ, ಪುಷ್ಪಯಾಗ ಮತ್ತು ಅಷ್ಟಾವಧಾನ ಸೇವೆಯನ್ನು ಹಮ್ಮಿಕೊಳ್ಳಲಾಗಿದೆ. ಅಂದು ಸಾಯಂಕಾಲ 4 ಗಂಟೆಗೆ ಡೊಂಗರಕೇರಿ ಕಟ್ಟೆಯಿಂದ ಪುಷ್ಪಯಾಗದ ಹೂವಿನ ವಿಶೇಷ ಮೆರವಣಿಗೆ ನಡೆಯಲಿದೆ” ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ಉಸ್ತುವಾರಿ ಗಣೇಶ್ ನಾಗ್ವೇಕರ್ ಬೋಳಾರ್ ಮಾತಾಡಿ “ಅಂದು ಬೆಳಗ್ಗೆ 7ರಿಂದ 8ರವರೆಗೆ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ, ಮಧ್ಯಾಹ್ನ 12ಕ್ಕೆ ಮಹಾಪೂಜೆ, 1ರಿಂದ 3ರವರೆಗೆ ಭಜನಾ ಕಾರ್ಯಕ್ರಮ, ರಾತ್ರಿ 9ಕ್ಕೆ ದೀಪಾರಾಧನೆ ಮಹಾಪೂಜೆ ಬಳಿಕ 10 ಗಂಟೆಗೆ ಪ್ರಸಾದ ವಿತರಣೆ ನಡೆಯಲಿದೆ“ ಎಂದು ಹೇಳಿದರು.
ವೇದಿಕೆಯಲ್ಲಿ ವಿನಾಯಕ ಶೇಟ್, ಸಾಯಿದತ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ – ಸತೀಶ್ ಕಾಪಿಕಾಡ್