ಸಲ್ಮಾನ್ ಖಾನ್ ಅನ್ನು ಕೊಂದೇ ತೀರುವುದಾಗಿ ಲಾರೆನ್ಸ್ ಬಿಷ್ಣೋಯಿ ಮತ್ತು ಅವನ ಸಹಚರರು ಶಪಥ ತೊಟ್ಟಿದ್ದಾರೆ. ಈಗಾಗಲೇ ಸಲ್ಮಾನ್ ಖಾನ್ ಆಪ್ತ ಮಾಜಿ ಶಾಸಕ ಬಾಬಾ ಸಿದ್ಧಿಖಿಯನ್ನು ಬಿಷ್ಣೋಯಿ ಸಹಚರರು ಕೊಂದಿದ್ದಾಗಿದೆ. ಸಲ್ಮಾನ್ ಖಾನ್ ತಮ್ಮ ನಿವಾಸದ ಭದ್ರತೆ ಹೆಚ್ಚಿಸಿಕೊಂಡಿದ್ದು, ಗುಂಡು ನಿರೋಧಕ ಗಾಜುಗಳನ್ನು ಅಳವಡಿಸಿಕೊಂಡಿದ್ದಾರೆ
ಸಲ್ಮಾನ್ ಖಾನ್ ಗೆ ಪದೇ ಪದೇ ಜೀವ ಬೆದರಿಕೆ ಬರುತ್ತಲೇ ಇದೆ. ಬೆದರಿಕೆಗಳ ನಡುವೆಯೇ ಸಲ್ಮಾನ್ ಖಾನ್ ತಮ್ಮ ಸಿನಿಮಾ ಚಿತ್ರೀಕರಣ ಇನ್ನಿತರೆಗಳನ್ನು ಮುಂದುವರೆಸಿದ್ದಾರೆ. ಕೆಲ ತಿಂಗಳ ಹಿಂದೆ ಸಲ್ಮಾನ್ ಖಾನ್ ಅವರ ಗ್ಯಾಲೆಕ್ಸಿ ನಿವಾಸದ ಮೇಲೆ ಕೆಲವು ದುಷ್ಕರ್ಮಿಗಳು ದಾಳಿ ಮಾಡಿದ್ದರು. ಗ್ಯಾಲೆಕ್ಸಿ ಅಪಾರ್ಟ್ಮೆಂಟ್ನ ಗಾಜಿನ ಕಿಟಕಿಗಳ ಮೇಲೆ ಶೂಟ್ ಮಾಡಿ ದುಷ್ಕರ್ಮಿಗಳು ಪರಾರಿ ಆಗಿದ್ದರು. ಮತ್ತೊಮ್ಮೆ ಇಂಥಹಾ ದಾಳಿಯ ಸಾಧ್ಯತೆ ಇರುವ ಕಾರಣ ಇದೀಗ ಸಲ್ಮಾನ್ ಖಾನ್ ನಿವಾಸಕ್ಕೆ ಬುಲೆಟ್ ಪ್ರೂಫ್ ಗಾಜುಗಳನ್ನು ಅಳವಡಿಸಲಾಗಿದೆ.
ಸಲ್ಮಾನ್ ಖಾನ್ ಗ್ಯಾಲೆಕ್ಸಿ ಅಪಾರ್ಟ್ಮೆಂಟ್ನ ಕಿಟಕಿಗಳಿಗೆ ಬುಲೆಟ್ ಪ್ರೂಫ್ ಗಾಜುಗಳನ್ನು ಅಳವಡಿಸಲಾಗಿದೆ. ವಿಶೇಷವಾಗಿ ರಸ್ತೆಯ ಬದಿ ಇರುವ ಹಾಗೂ ಇತರೆ ಅಪಾರ್ಟ್ಮೆಂಟ್ಗಳಿಗೆ ಹೊರಗಿನಿಂದ ಕಾಣುವ ಕಿಟಿಕಿಗಳಿಗೆ ಈ ಗುಂಡು ನಿರೋಧಕ ಗಾಜುಗಳನ್ನು ಅಳವಡಿಸಲಾಗಿದೆ. ಇದು ಮಾತ್ರವೇ ಅಲ್ಲದೆ ಸಲ್ಮಾನ್ ಖಾನ್ ಮನೆಯ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ ಎನ್ನಲಾಗುತ್ತಿದೆ.