ಹೃದಯ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದ ಮಂಜೇಶ್ವರದ 90 ವರ್ಷ ಪ್ರಾಯದ ಮಹಿಳೆಯೊಬ್ಬರಿಗೆ ಮುಕ್ಕದ ಶ್ರೀನಿವಾಸ ಮೆಡಿಕಲ್ ಕಾಲೇಜಿನ ವೈದ್ಯರ ತಂಡವು ತೆರೆದ ಹೃದಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ.90 ವರ್ಷದವರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸುವುದು ಬಹಳ ವಿರಳ.ರೋಗಿಯು ಶಸ್ತ್ರಚಿಕಿತ್ಸೆ ನಂತರ ಉತ್ತಮವಾಗಿ ಚೇತರಿಸಿಕೊಂಡಿದ್ದು ಇದೀಗ 5 ದಿನಗಳ ನಂತರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಮಂಜೇಶ್ವರದ ರಾಧಾ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಇತ್ತೀಚೆಗೆ ಮುಕ್ಕದ ಶ್ರೀನಿವಾಸ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಹೃದಯದ ಒಳಗೆ ಎಡ ಭಾಗದಲ್ಲಿ ಗಡ್ಡೆ ಅಂಶ ಕಂಡು ಬಂದಿತ್ತು.ಈ ಅಡಚಣೆಯಿಂದಾಗಿ ಉಸಿರಾಟದ ತೊಂದರೆ, ಎದೆ ಬಡಿತದಲ್ಲಿ ಏರಿಳಿತ ಆಗುತ್ತಿತ್ತು. ಒಂದು ಹೆಜ್ಜೆ ಇಡಲು ಹಾಗೂ ಮಲಗಲು ಕಷ್ಟ ಪಡುತ್ತಿದ್ದರು. ಆಸ್ಪತ್ರೆಯಲ್ಲಿ ಏಕೋ ಕಾರ್ಡಿಯೋಗ್ರಾಫಿಯಲ್ಲಿ ಹೃದಯದ ಎಡ ಭಾಗದಲ್ಲಿ ಗಡ್ಡೆಯು 6 ಸೆ.ಮೀ. ಹಾಗೂ 5 ಸೆ.ಮೀ. ಗಾತ್ರದಲ್ಲಿ ಅವರಿಸಿದ್ದು ಎಡ ಭಾಗದಲ್ಲಿರುವ ಮೈಟ್ರಲ್ ಕವಾಟದ ಮೂಲಕ ಎಡ ವೆಂಟ್ರಿಕಲ್ಗೆ ಬರುತ್ತಿತ್ತು. ಇದರಿಂದಾಗಿ ಮೈಟ್ರಲ್ ಕಾರ್ಯವೈಖರಿಗೆ ಧಕ್ಕೆಯಾಗುತ್ತಿತ್ತು. ವೈದ್ಯರು ತುರ್ತು ತೆರೆದ ಹೃದಯದ ಶಸ್ತ್ರಚಿಕಿತ್ಸೆಯನ್ನು ನಡೆಸಿದರು.ಇದೀಗ ಶಸ್ತ್ರಚಿಕಿತ್ಸೆಯ ಬಳಿಕ ಕೇವಲ 5 ದಿನಗಳಲ್ಲಿ ರೋಗಿ ಗುಣಮುಖರಾಗಿ ಆರೋಗ್ಯವಾಗಿದ್ದಾರೆ.
ಶಸ್ತ್ರಚಿಕಿತ್ಸೆಯಲ್ಲಿ ಹ್ರದಯ ಶಸ್ತ್ರಚಿಕಿತ್ಸಾ ತಜ್ಞ ಡಾ.ಅಮಿತ್ ಕಿರಣ್,ಅರವಳಿಕೆ ತಜ್ಞ ಡಾ.ಬಾಲಕೃಷ್ಣ ಭಟ್ ,ಸಹಾಯಕ ಶಸ್ತ್ರಚಿಕಿತ್ಸಾ ತಜ್ಞರಾದ ಡಾ.ಹರೀಶ್ ಶೆಟ್ಟಿ ,ಡಾ.ಸಿದ್ದಾರ್ಥ ಎಸ್ ,ಡಾ.ಮಧು ಭಾಗವಹಿಸಿದ್ದರು. ಆಸ್ಪತ್ರೆಯ ಆಡಳಿತ ಮಂಡಳಿ ಸಹಕಾರದಿಂದ ಅತೀ ಕಡಿಮೆ ವೆಚ್ಚದಲ್ಲಿ ಶಸ್ತ್ರಚಿಕಿತ್ಸೆ ನೆರವೇರಿತು.