ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ವತಿಯಿಂದ ಯಕ್ಷಧ್ರುವ ಯುವ ಯಕ್ಷಗಾನ ಸ್ಫರ್ಧೆಯು 2025 ರ ಏಪ್ರಿಲ್ ತಿಂಗಳಾಂತ್ಯದಲ್ಲಿ ನಡೆಯಲಿದೆ.
ಇದು ತೆಂಕು- ಬಡಗುತಿಟ್ಟುವಿನ ಯುವ ಯಕ್ಷಗಾನ ಕಲಾವಿದರ ಬಯಲಾಟ ಸ್ಪರ್ಧೆಯಾಗಿದ್ದು ಪ್ರಸಕ್ತ ಸ್ಪರ್ಧೆಯಲ್ಲಿ ಮೇಳದಲ್ಲಿ ತಿರುಗಾಟ ಮಾಡಿದ, ತಿರುಗಾಟ ಮಾಡುತ್ತಿರುವ ಕಲಾವಿದರು ಭಾಗವಹಿಸಬಹುದಾಗಿದೆ.
ಯಕ್ಷಧ್ರುವ ಪಟ್ಲ ಪ್ರಕಾಶನ ಪ್ರಕಟಿಸಿದ ಶಿಮಂತೂರು, ಬಲಿಪ, ಬೊಟ್ಟಿಕೆರೆ, ಕೊಲೆಕಾಡಿ ಪ್ರಸಂಗ ಸಂಪುಟದ ಪ್ರಸಂಗಗಳನ್ನು ಮಾತ್ರ ಸ್ಪರ್ಧೆಗೆ ಬಳಸಬೇಕಾಗಿದ್ದು ಸ್ಫರ್ಧಾಳುಗಳ ವಯೋಮಿತಿಯು 15ರಿಂದ 25 ವರ್ಷದೊಳಗಿನ ಕಲಾವಿದರಿಗೆ ಮಾತ್ರ ಸೀಮಿತವಾಗಿದೆ. ಹಿಮ್ಮೇಳದ ಕಲಾವಿದರಿಗೆ ವಯೋಮಿತಿಯ ನಿರ್ಬಂಧವಿರದಿದ್ದರೂ ಒಂದು ತಂಡದಲ್ಲಿ ಭಾಗವಹಿಸಿದ ಹಿಮ್ಮೇಳ ಕಲಾವಿದರು ಇನ್ನೊಂದು ತಂಡದಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ಶಾಲೆ, ಕಾಲೇಜು, ಸಂಘ, ಬಳಗದ ತಂಡಗಳಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದ್ದು ಕನಿಷ್ಠ 10, ಗರಿಷ್ಠ 15 ಕಲಾವಿದರನ್ನು ಒಳಗೊಂಡು ಒಂದು ಗಂಟೆ ಕಾಲಾವಧಿಯಾಗಿದೆ.
ಅರ್ಹತಾ ಸುತ್ತು ಮತ್ತು ಅಂತಿಮ ಸುತ್ತು ಎನ್ನುವ ಎರಡು ಸುತ್ತುಗಳಿದ್ದು ಅರ್ಹತಾ ಸುತ್ತಿನಲ್ಲಿ ಆಯ್ಕೆಯಾದ ಎರಡು ತಿಟ್ಟುಗಳ ತಲಾ 4 ತಂಡಗಳಿಗೆ ಅಂತಿಮ ಸುತ್ತಿನಲ್ಲಿ ಅವಕಾಶವನ್ನು ನೀಡಲಾಗುವುದು. ಅರ್ಹತಾ ಸುತ್ತು ಮಂಗಳೂರು ಮತ್ತು ಉಡುಪಿಯಲ್ಲಿ ನಡೆಯಲಿದ್ದು ಅಂತಿಮ ಸುತ್ತು ಅಡ್ಯಾರ್ ಗಾರ್ಡನ್ ನಲ್ಲಿ ಜೂನ್ 1 ರಂದು ನಡೆಯುವ ಪಟ್ಲ ಸಂಭ್ರಮದ ದಶಮಾನೋತ್ಸವ ಆಚರಣೆಯ ಸಂದರ್ಭ ನಡೆಯಲಿದೆ.
ವಿಜೇತ ತಂಡಕ್ಕೆ ಪ್ರಥಮ ಬಹುಮಾನ ( 1 ಲಕ್ಷ) ದ್ವಿತೀಯ ಬಹುಮಾನ (75,000) ತೃತೀಯ ಬಹುಮಾನ (50,000) ಸಹಿತ ಒಂದು ಶಿಸ್ತಿನ ತಂಡ (25,000) ಪ್ರಶಸ್ತಿಯು ದೊರೆಯಲಿದೆ.
ಸ್ಪರ್ಧೆಗೆ ಮಾದರಿ ಪ್ರವೇಶ ಪತ್ರ ಕಳುಹಿಸಲು 31/01/2025 ಅಂತಿಮ ದಿನಾಂಕವಾಗಿದ್ದು ಹೆಚ್ಚಿನ ಮಾಹಿತಿಗಾಗಿ ಕದ್ರಿ ನವನೀತ ಶೆಟ್ಟಿ (9448123061), ಉದಯಾನಂದ ಶೆಟ್ಟಿ (9535862709 ), ದೀವಿತ್ ಎಸ್ ಕೆ ಪೆರಾಡಿ (9845109989) ಇವರನ್ನು ಸಂಪರ್ಕಿಸಬಹುದು ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ಪ್ರಕಟಣೆ ತಿಳಿಸಿದೆ.