ಹಿಂದೂಸ್ಥಾನವು ಎಂದೂ ಮರೆಯದ..’, ‘ಒಲವಿನ ಉಡುಗೊರೆ ಕೊಡಲೇನು..’, ‘ಮಂದಾರ ಪುಷ್ಪವು ನೀನು..ಭೂಮಿ ತಾಯಾಣೆ ನೀ ಇಷ್ಟ ಕಣೇ .. ಕನ್ನಡ ನಾಡಿನ ಕರಾವಳಿ.. ನನ್ನವರು ಯಾರೂ ಇಲ್ಲ.. ಯಾರಿಗೂ ಯಾರೂ ಇಲ್ಲ. ಸೇರಿದಂತೆ ಕನ್ನಡದ ಅನೇಕ ಸೂಪರ್ ಹಿಟ್ ಹಾಡುಗಳಿಗೆ ಧ್ವನಿಯಾಗಿದ್ದ ಖ್ಯಾತ ಗಾಯಕ ಪಿ. ಜಯಚಂದ್ರನ್ (80) ಅವರು ಮೃತರಾಗಿದ್ದಾರೆ. ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರು ಇಂದು ತ್ರಿಶೂರ್ ಅಮಲಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ 16,000 ಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿ ನೀಡಿದ್ದ ಇವರು ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಪ್ರಸಿದ್ಧ ಗಾಯಕರು.ಇಳಯರಾಜ, ಎ.ಆರ್. ರೆಹಮಾನ್, ಎಂಎಂ ಕೀರವಾಣಿ, ವಿಜಯ ಭಾಸ್ಕರ್, ಎಂ. ರಂಗ ರಾವ್ ಮುಂತಾದ ಲೆಜೆಂಡರಿ ಸಂಗೀತ ನಿರ್ದೇಶಕರ ಜೊತೆಗೆ ಪಿ. ಜಯಚಂದ್ರನ್ ಅವರು ಕೆಲಸ ಮಾಡಿದ್ದರು. ಮಲಯಾಳಂ, ಕನ್ನಡ, ಹಿಂದಿ, ತೆಲುಗು,ತಮಿಳು ಮುಂತಾದ ಭಾಷೆಗಳ ಸಿನೆಮಾ ಗೀತೆಗಳಿಗೆ ಅವರು ಧ್ವನಿಯಾಗಿದ್ದರು.ಅವರನ್ನು ಕಳೆದುಕೊಂಡು ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.
ಹಾಡುಗಳ ಮೂಲಕವೇ ಎಲ್ಲರ ಮನ ಗೆದ್ದವರು.
ಇವರಿಗೆ ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಐದು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಸಂದಿವೆ. ಕೇರಳ ಸರ್ಕಾರದಿಂದ ಜೆ.ಸಿ. ಡೇನಿಯಲ್ ಪ್ರಶಸ್ತಿ ಮತ್ತು ತಮಿಳುನಾಡು ಸರ್ಕಾರದಿಂದ ಕಲೈಮಾಮಣಿ ಪ್ರಶಸ್ತಿ ಕೂಡ ನೀಡಲಾಗಿದೆ.
1944ರ ಮಾರ್ಚ್ 3ರಂದು ಎರ್ನಾಕುಲಂನಲ್ಲಿ ಜನಿಸಿದ ಜಯಚಂದ್ರನ್ ಅವರು, ಪತ್ನಿ ಲಲಿತಾ, ಮಗಳು ಲಕ್ಷ್ಮಿ ಮತ್ತು ಮಗ ದೀನನಾಥನ್ ಅವರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಇಡೀ ಕುಟುಂಬ ಕಂಬನಿ ಮಿಡಿದಿದೆ.