ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಹಮ್ಮಿಕೊಂಡಿರುವ ‘ಇಲ್ಲಗೊಂಜಿ ಗೇನೊದ ಬಂಡಾರ’ ( ಮನೆಗೊಂದು ತುಳು ಗ್ರಂಥಾಲಯ) ಅಭಿಯಾನಕ್ಕೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಕೋಡಿಂಬಾಡಿಯ ಮನೆಯಲ್ಲಿ ಶನಿವಾರ ಚಾಲನೆ ನೀಡಲಾಯಿತು.
ಅಕಾಡೆಮಿ ಪ್ರಕಟಿಸಿದ ಹಾಗೂ ಇತರ ತುಳು ಪುಸ್ತಕಗಳು ಸೇರಿದಂತೆ ಹತ್ತು ಸಾವಿರ ರೂಪಾಯಿ ಮೌಲ್ಯದ 150 ಕೃತಿಗಳನ್ನು ಖರೀದಿಸುವ ಮೂಲಕ ಅಶೋಕ್ ರೈ ಅವರು ‘ಇಲ್ಲಗೊಂಜಿ ಗೇನೊದ ಬಂಡಾರ’ ಅಭಿಯಾನಕ್ಕೆ ಪುತ್ತೂರಿನಲ್ಲಿ ಚಾಲನೆ ನೀಡಿದರು.
ಪುಸ್ತಕ ಓದುವ ಮೂಲಕ ನಮ್ಮ ಜ್ಞಾನಾಭಿವೃದ್ಧಿ ಬೆಳೆಸಿಕೊಳ್ಳಲು ಸಾಧ್ಯ, ತುಳು ಪುಸ್ತಕ ಓದಿನ ಮೂಲಕ ತುಳುನಾಡಿನ ಇತಿಹಾಸ, ಪರಂಪರೆ, ನಂಬಿಕೆಗಳ ಬಗ್ಗೆ ಅರಿವು ಮೂಡಿಸುತ್ತದೆ. ಈ ನಿಟ್ಟಿನಲ್ಲಿ ತುಳು ಅಕಾಡೆಮಿಯ ‘ಇಲ್ಲಗೊಂಜಿ ಗೇನದ ಬಂಡಾರ’ ಅಭಿಯಾನ ಶ್ಲಾಘನೀಯ, ಈ ಅಭಿಯಾನ ನನ್ನ ನಿವಾಸದಿಂದ ಆರಂಭಗೊಂಡಿರುವ ಬಗ್ಗೆ ಅಭಿಮಾನವಿದೆ ಎಂದು ಅಶೋಕ್ ರೈ ಅವರು ಹೇಳಿದರು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ತಮ್ಮ ಗ್ರಂಥಾಲಯಕ್ಕೆ ತುಳು ಪುಸ್ತಕ ಖರೀದಿಸಬೇಕೆಂದು ಅಶೋಕ್ ರೈ ಅವರು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಶಾಸಕ ಅಶೋಕ್ ರೈ ಅವರಿಗೆ ಪುಸ್ತಕ ಹಸ್ತಾಂತರಿಸಿದರು.
ಹಿರಿಯ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ, ಪುತ್ತೂರು ಭೂನ್ಯಾಯ ಮಂಡಳಿ ಸದಸ್ಯ ಕೃಷ್ಞ ಪ್ರಸಾದ್ ಆಳ್ವ, ತುಳು ಅಕಾಡೆಮಿ ಮಾಜಿ ಸದಸ್ಯ ನಿರಂಜನ ರೈ ಮಠಂತಬೆಟ್ಟು, ಪೂವರಿ ತುಳು ಪತ್ರಿಕೆಯ ಸಂಪಾದಕ ವಿಜಯ ಕುಮಾರ್ ಭಂಡಾರಿ ಹೆಬ್ಬಾರಬೈಲು ಉಪಸ್ಥಿತರಿದ್ದರು.
ತುಳು ಅಕಾಡೆಮಿ ಸದಸ್ಯ ಹಾಗೂ ಕಾರ್ಯಕ್ರಮದ ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.