ಮಂಗಳೂರು: ವಿಷಮುಕ್ತ ಆಹಾರವನ್ನು ನಾವೆಲ್ಲರೂ ಸೇವಿಸಬೇಕೆಂಬ ಒತ್ತಾಸೆಯಿಂದ ನಮ್ಮ ಸಾವಯವ ಕೃಷಿಕ ಗ್ರಾಹಕ ಬಳಗ ಅನೇಕ ಜನಶಿಕ್ಷಣದೊಂದಿಗೆ ನೇರವಾಗಿ ಕರ್ನಾಟಕದ ವಿವಿಧ ಸಾವಯವ ರೈತರ ಉತ್ಪನ್ನಗಳನ್ನು ಮಾರಾಟ ಮಾಡುವ ಸಾವಯವ ಸಂತೆ ಯನ್ನು 2025 ಫೆಬ್ರವರಿ ತಿಂಗಳಿನಿಂದ
ನಿರಂತರ ಪ್ರತೀ ತಿಂಗಳ ಮೊದಲ ಶನಿವಾರ ಮತ್ತು ಭಾನುವಾರ ಮಂಗಳೂರಿನ
ನಂತೂರು ಶ್ರೀಭಾರತೀ ಸಮೂಹ ಶಿಕ್ಷಣ ಸಂಸ್ಥೆಯ ವಠಾರದಲ್ಲಿ ನಡೆಯಲಿದೆ ಎಂದು ಸಂಘಟನೆಯ ಗೌರವಾಧ್ಯಕ್ಷ ಅಡ್ಡೂರು ಕೃಷ್ಣ ರಾವ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಫೆಬ್ರವರಿ 2 ಭಾನುವಾರ ಬೆಳಿಗ್ಗೆ 9.30ರಿಂದ ಸಂಜೆ 5 ರ ತನಕ ಎಲೆ- ಅರಿವು ಎಂಬ ಕಾರ್ಯಕ್ರಮವನ್ನು ಶ್ರೀವತ್ಸ ಗೋವಿಂದ ರಾಜು ನಡೆಸಲಿದ್ದಾರೆ. ಇವರು ಸುಸ್ಥಿರ ಕೃಷಿಕ,ಪ್ರಕೃತಿವಾದಿ, ಹಸಿರು ಉದ್ಯಮಿ ಮತ್ತು ಸುಸ್ಥಿರ ಜೀವನ ತರಬೇತುದಾರರಾಗಿದ್ದು 40ಕ್ಕೂ ಹೆಚ್ಚು ದೇಶಗಳಲ್ಲಿ ಉನ್ನತ ಕಾರ್ಪೂರೇಟ್ ಕಂಪೆನಿಗಳಲ್ಲಿ ಕೆಲಸ ಮಾಡಿದ ಐಟಿ ವೃತ್ತಿಪರರಾಗಿದ್ದಾರೆ. ವಿಶೇಷವಾಗಿ
ಶಾಲಾ ಮಕ್ಕಳಿಗೆ ನೂರಾರು ಕಾರ್ಯಕ್ರಮಗಳನ್ನು ನೀಡಿ ವಿದ್ಯಾರ್ಥಿಗಳು ಈ ದಿಕ್ಕಿನಲ್ಲಿ ಮುನ್ನಡೆಯುವಂತೆ ಮಾಡಿರುತ್ತಾರೆ. ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತವಾಗಿರುತ್ತದೆ“ ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಸಂಘಟನೆಯ ಅಧ್ಯಕ್ಷ ಜಿ.ಆರ್.ಪ್ರಸಾದ್, ಕಾರ್ಯದರ್ಶಿ ರತ್ನಾಕರ ಕುಳಾಯಿ, ಶರತ್ ಮತ್ತಿತರರು ಉಪಸ್ಥಿತರಿದ್ದರು.