ಮಂಗಳೂರು : ಹರಿಕಥಾ ಪರಿಷತ್ (ರಿ.) ಮಂಗಳೂರು, ರಾಮಕೃಷ್ಣ ಮಠ, ಮಂಗಳೂರು ಹಾಗೂ ಷಡ್ಡ ಕಲಾಕೇಂದ್ರ ಟ್ರಸ್ಟ್ (ರಿ.), ಬೆಂಗಳೂರು ಸಂಯುಕ್ತ, ಸಹಯೋಗದಲ್ಲಿ ಜನವರಿ 19-01-2025ರಂದು ರಾಮಕೃಷ್ಣ ಮಠದಲ್ಲಿ ಮಂಗಳೂರು ಹಾಗೂ ಷಡ್ಜ ಕಲಾಕೇಂದ್ರ, ಬೆಂಗಳೂರು ಸಂಯುಕ್ತ ಸಹಯೋಗದಲ್ಲಿ ಹರಿಕಥಾ ಸಮ್ಮೆಳನವನ್ನು ಹಮ್ಮಿಕೊಂಡಿದ್ದಾರೆ.
2010ನೇ ಇಸವಿಯಲ್ಲಿ ಪ್ರಾರಂಭಗೊಂಡ ಹರಿಕಥಾ ಪರಿಷತ್ ಸಂಸ್ಥೆಯು ಕಳೆದ ಹದಿನಾಲ್ಕು ವರ್ಷಗಳಿಂದ ಜನಸಾಮಾನ್ಯರಲ್ಲಿ ಮೌಲ್ಯ ಚಿಂತನೆ, ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವಂತಹ ಪ್ರಾಚೀನ ಹರಿಕಥಾ ಕಲೆಯ ಉಳಿವು ಹಾಗೂ ಬೆಳವಣಿಗೆಗಾಗಿ ನಿರಂತರ ಶ್ರಮಿಸುತ್ತಾ ಬಂದಿದ್ದು, ಇದೀಗ ಹದಿನೈದನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಈ ಸಂದರ್ಭದಲ್ಲಿ ಬರುವ ಜನವರಿ 19ನೇ ತಾರೀಕಿನಂದು ರಾಜ್ಯಾದ್ಯಂತ ಇರುವ ಕೀರ್ತನಕಾರರನ್ನು ಆಹ್ವಾನಿಸಿ, ‘ಹರಿಕಥಾ ಸಮ್ಮೇಳನ’ವನ್ನು ಮಂಗಳೂರಿನ ರಾಮಕೃಷ್ಣ ಮಠದಲ್ಲಿ ಹಮ್ಮಿಕೊಂಡಿದೆ. ‘ಹರಿಕಥಾ ಪರಂಪರೆಯ ಪುನರುತ್ಥಾನ’ದ ಪರಿಕಲ್ಪನೆಯೊಂದಿಗೆ ನಡೆಯುವ ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿ, ಐದು ದಶಕಗಳಿಗೂ ಅಧಿಕ ಹರಿಕಥಾರಂಗದ ಸೇವೆ ಗೈದಿರುವ, ಹಿರಿಯ ಹರಿದಾಸರೂ, ಹರಿಕಥಾ ಪರಿಷತ್ (ರಿ.), ಮಂಗಳೂರು ನಾಕರ ಇದರ ಸ್ಥಾಪಕಾಧ್ಯಕ್ಷರೂ ಆದ ಶ್ರೀ ಕೆ. ಮಹಾಬಲ ಶೆಟ್ಟಿ (ದೇವಕೀತನಯ ಕೂಡು) ಆಯ್ಕೆಯಾಗಿರುತ್ತಾರೆ. ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜೀ ಮಹಾರಾಜ್ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಕೃಷ್ಣ ಜೆ ಪಾಲೆಮಾರ್ ಕೃತಿ ಬಿಡುಗಡೆ ಮಾಡಲಿದ್ದು ಡಾ. ಎಂ ಪ್ರಭಾಕರ ಜೋಷಿ, ದಿಕ್ಸೂಚಿ ಭಾಷಣ ಮಾಡಲಿದ್ದಾರೆ, ಸಂಸದ ಕ್ಯಾ. ಬೃಜೇಶ್ ಚೌಟ, ಶಾಸಕ ಡಿ, ವೇದವ್ಯಾಸ ಕಾಮತ್, ಪ್ರೊ. ಎಂ. ಬಿ. ಪುರಾಣಿಕ್ ಮತ್ತಿತರರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ,
ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿಧಾನ ಸಭಾಧ್ಯಕ್ಷ ಯು. ಟಿ. ಖಾದರ್ ಸಮ್ಮೇಳನದ ಕೈಪಿಡಿ ಬಿಡುಗಡೆ ಮಾಡಲಿದ್ದು, ಆಕಾಶವಾಣಿಯ ಸೂರ್ಯನಾರಾಯಣ ಭಟ್ ಸಮಾರೋಪ ಭಾಷಣ ಮಾಡಲಿದ್ದಾರೆ, ರಾಜ್ಯದಾದ್ಯಂತ ಸುಮಾರು ಐವತ್ತು ಮಂದಿ ಯುವ ಹಾಗೂ ಹಿರಿಯ ಕೀರ್ತನಕಾರರು, ವಿವಿಧ ಸಾಹಿತ್ಯ ಹಾಗೂ ಕಲಾಕ್ಷೇತ್ರದ ವಿದ್ವಾಂಸರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸುವ ಹರಿಕಥಾ ಕಲಾಸಕ್ತರು ಪಾಲ್ಗೊಳ್ಳಲಿದ್ದಾರೆ. ತುಳುನಾಡಿನ ಹರಿಕಥಾ ಪರಂಪರೆ, ಹರಿಕಥಾ ಕಲೆಯ *. ವೈಶಿಷ್ಟ್ಯತೆ, ಹರಿಕಥಾ ಕಲೆಯ ಪುನರುತ್ಥಾನಕ್ಕಿರುವ ಸವಾಲುಗಳು ಎನ್ನುವ ವಿಷಯಗಳ ಕುರಿತು ವಿಚಾರಗೋಷ್ಠಿ, ದಾಸಕೀರ್ತನೆ, ಹಿರಿಯ ಹರಿಕಥಾ ವಿದ್ವಾಂಸರೊಂದಿಗೆ ಸಂವಾದ, ಯುವ ಹಾಗೂ ಹಿರಿಯ ಕೀರ್ತನಕಾರರಿಂದ ಹರಿಕಥೆ ಹೀಗೆ ದಿನವಿಡೀ ವಿಭಿನ್ನ ಗೋಷ್ಠಿಗಳು ಹಾಗೂ ಕಲಾ ಪ್ರದರ್ಶನಗಳು ನಡೆಯಲಿವೆ.
ಹರಿಕಥೆಯ ಕಡೆಗೆ ಯುವಜನತೆಯನ್ನು ಸೆಳೆಯುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಅಯೋಜಿಸಲಾಗಿದೆ. ಹಿರಿಯ ಕಲಾವಿದರನ್ನು ಗೌರವಿಸುವ ಕಾರ್ಯಕ್ರಮ ಇದಾಗಿದ್ದು ಅನೇಕ ಹಿರಿಯ ಹರಿದಾಸರ ಸಂಸ್ಮರಣೆ ಹಾಗೂ ಹರಿಕಥೆಯ ಬಗ್ಗೆ ಗೋಷ್ಠಿಯಲ್ಲಿ ಚರ್ಚೆ ನಡೆಯಲಿದೆ ಹಾಗೂ ಪ್ರಬಂಧ ಮಂಡಿಸಲಿದ್ದಾರೆ ಎಂದು ಡಾ.ಎಸ್.ಪಿ ಗುರುದಾಸ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು, ಸುಂದರ್ ಶೆಟ್ಟಿ ಬೆಟ್ಟಂಪಾಡಿ, ಗುರುದಾಸ್, ಕೋಶಾಧಿಕಾರಿ ನಾರಾಯಣ ರಾವ್, ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ : ಶಶಿ ಬೆಳ್ಳಾಯರು