ಸುರತ್ಕಲ್: ಮೂಡಬಿದ್ರೆಯಲ್ಲಿ ನಡೆದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಒಂದು ನಿಮಿಷದಲ್ಲಿ 200 ಪಂಚ್ ಮೂಲಕ ನೊಬೆಲ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ಹೊಸದಾಗಿ ದಾಖಲೆ ಬರೆದಿರುವ ಅಡ್ಡೂರಿನ ಬಾಲಕಿ ಫಾತಿಮಾ ನಜಫ್ ರನ್ನು ಸುರತ್ಕಲ್ ಅಟ್ಲಾಸ್ ಜ್ಯುವೆಲ್ಲರ್ಸ್ ವತಿಯಿಂದ ವಜ್ರದ ಉಂಗುರ ಕೊಟ್ಟು ಸನ್ಮಾನಿಸಲಾಯಿತು.
ಈ ವೇಳೆ ಸುರತ್ಕಲ್ ಠಾಣಾಧಿಕಾರಿ ರಘು ನಾಯಕ ಅವರು ಬಾಲಕಿಯನ್ನು ಶಾಲು ಹೊದಿಸಿ ಗೌರವಿಸಿದರು. ಬಳಿಕ ಮಾತಾಡಿದ ಅವರು, “ಶಿಕ್ಷಣದ ಜೊತೆಗೆ ಮಕ್ಕಳು ಬಾಲ್ಯದಲ್ಲೇ ಇಂತಹ ಸಾಧನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಈ ಮೂಲಕ ಹೆತ್ತವರು, ಸಮಾಜದ ಹೆಸರನ್ನು ಎಲ್ಲರೂ ಗುರುತಿಸುವಂತೆ ಮಾಡಬೇಕು. ಬಾಲಕಿಯ ಸಾಧನೆಗೆ ಎಲ್ಲರೂ ಬೆನ್ನುತಟ್ಟಿ ಪ್ರೋತ್ಸಾಹಿಸೋಣ” ಎಂದರು.
ಬಳಿಕ ಮಾತಾಡಿದ ಫಾತಿಮಾ ನಜಫ್, “ನಾನು ಅಡ್ಡೂರಿನ ಸಹಾರ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ 6ನೇ ತರಗತಿ ಕಲಿಯುತ್ತಿದ್ದೇನೆ. ನನ್ನ ಸಾಧನೆಗೆ ಹೆತ್ತವರು, ಶಾಲಾ ಶಿಕ್ಷಕರ ಸಹಕಾರ ತುಂಬಾ ಇದೆ. ಅವರಿಗೆ ನಾನು ಧನ್ಯವಾದವನ್ನು ಅರ್ಪಿಸುತ್ತೇನೆ” ಎಂದರು.
ಅಟ್ಲಾಸ್ ಜ್ಯುವೆಲ್ಲರಿಯ ವ್ಯವಸ್ಥಾಪಕರಾದ ಅಬ್ದುಲ್ ಸಲಾಂ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ: ಶಶಿ ಬೆಳ್ಳಾಯರು