ಮಂಗಳೂರು: ಮಂಗಳೂರು ನಗರ ಪೊಲೀಸರು ಕೋಟೆಕಾರ್ ಸಹಕಾರಿ ಬ್ಯಾಂಕ್ನ ದರೋಡೆಕೋರರನ್ನು ಕೇವಲ 60 ಗಂಟೆಗಳಲ್ಲಿ ಭೇದಿಸಿದ್ದು,ಮುಂಬೈನ ಧಾರಾವಿಯ ಕುಖ್ಯಾತ ಗ್ಯಾಂಗ್ನ ಭಾಗವಾಗಿದ್ದ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಮಂಗಳೂರು ನಗರ ಪೋಲಿಸ್ ಕಮೀಶನರ್ ಅನುಪಮ ಅಗರ್ವಾಲ್ ಹೇಳಿದ್ದಾರೆ.
ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದ್ಯಮದವರೊಂದಿಗೆ ಮಾತನಾಡಿದ ಕಮೀಶನರ್ ಕೋಟೆಕಾರ್ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣ ಬೇಧಿಸಲು ಗುಪ್ತಚರ ಇಲಾಖೆ ಸಹಾಯ ಮಾಡಿದೆ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಮೂಲದ ಗ್ಯಾಂಗ್ನಿಂದ ದರೋಡೆ ನಡೆದಿದೆ.
ತಮಿಳುನಾಡು ಮೂಲದವರಾದ ದರೋಡೆಕೋರರು ದರೋಡೆ ಮಾಡಲೆಂದೇ ಮಂಗಳೂರಿಗೆ ಬಂದಿದ್ದರು. ಬಳಿಕ ಕೇರಳದಿಂದ ತಮಿಳುನಾಡಿಗೆ ಪರಾರಿಯಾಗಿದ್ದರು.ಪ್ರಕರಣದ ತನಿಖೆಗೆ ಹಲವು ತಂಡಗಳನ್ನು ರಚಿಸಲಾಗಿತ್ತು. ಪರಿಣಾಮಕಾರಿ ಕ್ಷೇತ್ರ ಕಾರ್ಯಾಚರಣೆಯ ಮೂಲಕ, ಮಂಗಳೂರು ನಗರ ಪೊಲೀಸರು ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಪದ್ಮನೇರಿ ಗ್ರಾಮದಲ್ಲಿ ಮೂವರು ಆರೋಪಿಗಳನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತರನ್ನು ಮುರುಗಂಡಿ ತೇವರ್ (36), ಯೋಸುವ ರಾಜೇಂದ್ರನ್ (35) ಮತ್ತು ಕಣ್ಣನ್ ಮಣಿ (36) ಎಂದು ಗುರುತಿಸಲಾಗಿದೆ.
ಗುಪ್ತಚರ ಇಲಾಖೆ ಈ ಪ್ರಕರಣ ಬೇಧಿಸಲು ಸಹಾಯ ಮಾಡಿದೆ. ಬಂಧಿತರಿಂದ ತಲ್ವಾರ್ ಮತ್ತು ಪಿಸ್ತೂಲ್ ವಶಪಡಿಸಿಕೊಂಡಿದ್ದೇವೆ.ಸ್ಥಳೀಯರು ಈ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಇದೆ. ಸ್ಥಳೀಯರ ಬೆಂಬಲ ಇಲ್ಲದೇ ಈ ಕೃತ್ಯ ಮಾಡಲು ಸಾಧ್ಯವಿಲ್ಲ.ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತೇವೆ ಎಂದು ಹೇಳಿದರು.
ಕಾರ್ಯಾಚರಣೆಯ ಸಂದರ್ಭದಲ್ಲಿ, ಪೊಲೀಸರು ಅಪರಾಧಕ್ಕೆ ಬಳಸಿದ ಕಾರು, ಮೂರು ಜೀವಂತ ಗುಂಡುಗಳೊಂದಿಗೆ ಎರಡು ಪಿಸ್ತೂಲ್ಗಳು, ಮಾರಕಾಸ್ತ್ರಗಳು ಮತ್ತು ಕಳವು ಮಾಡಿದ ನಗದು ಮತ್ತು ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.