ಮಂಗಳೂರು: ಮಂಗಳೂರಿನ ಬಿಜೈಯಲ್ಲಿರುವ ಕಲರ್ಸ್ ಎಂಬ ಮಸಾಜ್ ಸೆಂಟರ್ ಮೇಲೆ ರಾಮಸೇನೆ ಸಂಘಟನೆಯಿಂದ ದಾಳಿ ಮಾಡಲಾಗಿದೆ. ಅನೈತಿಕ ಚಟುವಟಿಕೆಗಳು ನಡೆಸುತ್ತಿರುವ ಆರೋಪ ಮೇಲೆ ದಾಳಿ ಮಾಡಲಾಗಿದೆ. ಸದ್ಯ ಮಂಗಳೂರಿನ ಎಲ್ಲಾ ಮಸಾಜ್ ಸೆಂಟರ್ಗಳನ್ನು ಮುಚ್ಚಿಸುವಂತೆ ರಾಮಸೇನೆ ಒತ್ತಾಯಿಸಿದೆ.ಪ್ರಕರಣಕ್ಕೆ ಸಂಬಂಧಿಸಿ ರಾಮಸೇನೆಯ ಮುಖ್ಯಸ್ಥ ಪ್ರಸಾದ್ ಅತ್ತಾವರನನ್ನು ಪೋಲಿಸರು ಬಂಧಿಸಿದ್ದಾರೆ.

ರಾಮ ಸೇನೆಯ ಕಾರ್ಯಕರ್ತರು ಎನ್ನಲಾದವರು ಮಸಾಜ್ ಸೆಂಟರ್ಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದು, ಕಿಟಕಿಗಳ ಗಾಜುಗಳನ್ನು ಪುಡಿಗೈದಿದ್ದಾರೆ.ಅಲ್ಲದೇ ಮಸಾಜ್ ಪಾರ್ಲರ್ನಲ್ಲಿ ಇದ್ದ ಯುವತಿಯರ ಮೇಲೆಯೂ ಹಲ್ಲೆ ಮಾಡಿದ ಘಟನೆ ಗುರುವಾರ ಬೆಳಗ್ಗೆ ನಡೆದಿತ್ತು.
ಇನ್ನೂ ಘಟನೆಗೆ ಸಂಬಂಧಿಸಿದಂತೆ ಬಂಧನಕ್ಕೂ ಮುನ್ನ ಮಾತನಾಡಿದ ರಾಮಸೇನೆ ಸಂಸ್ಥಾಪಕ ಪ್ರಸಾದ್ ಅತ್ತಾವರ್ ಮಸಾಜ್ ಸೆಂಟರ್ ನಲ್ಲಿ ಡ್ರಗ್ಸ್ ನೀಡಿ ವೇಶ್ಯಾವಾಟಿಕೆ ನಡೆಸುತ್ತಿದ್ದರು’ 16, 17 ವರ್ಷದ ಹೆಣ್ಣುಮಕ್ಕಳನ್ನು ಬಳಸಿಕೊಳ್ತಿದ್ದರೆಂದು ಆರೋಪ ಮಾಡಿದ್ದಾರೆ. ನಮ್ಮ ಕಾರ್ಯಕರ್ತನ ಸಂಬಂಧಿ ಯುವತಿ ಇದರಲ್ಲಿ ಸಿಲುಕಿದ್ದಾಳೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದೇವೆ ಎಂದರು.

ನಾವು ದಾಳಿ ಮಾಡೋಕೆಗೆ ಇರೋರು, ಮುಂದೆಯೂ ದಾಳಿ ಮಾಡುತ್ತೇವೆ. ಅಕ್ರಮ ಪತ್ತೆ ಹಚ್ಚೋದು ಪೊಲೀಸರ ಕೆಲಸ ನಮ್ಮದಲ್ಲ. ಮಂಗಳೂರಿನಲ್ಲಿ ತುಂಬಾ ಮಸಾಜ್ ಪಾರ್ಲರ್ ಇವೆ. ಪೊಲೀಸರು ಅಲ್ಲಿ ಕಾರ್ಯಾಚರಣೆ ಮಾಡಲಿ. ಗೃಹಸಚಿವರು ಬಂಧನ ಮಾಡಿದ್ರೆ ಕಾನೂನು ಮೂಲಕ ಉತ್ತರ ಕೊಡುತ್ತೇವೆ ಎಂದರು.
ಮಂಗಳೂರು ಘಟನೆ ಕುರಿತು ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಜಿ ಪರಮೇಶ್ವರ್ ಅವರು, ಯಾವ ಉದ್ದೇಶಕ್ಕೆ ದಾಳಿಯಾಗಿದೆ ಗೊತ್ತಿಲ್ಲ. ದಾಳಿ ಮಾಡಿದವರನ್ನು ತಕ್ಷಣ ಬಂಧಿಸಲು ಸೂಚಿಸಿದ್ದೇನೆ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲು ಸೂಚನೆ ಕೊಟ್ಟಿದ್ದೇನೆ ಎಂದರು.




