ಮಂಗಳೂರು : ಮಂಗಳೂರಿನ ಹೊರವಲಯದ ಕೆ.ಸಿ. ರೋಡಿನಲ್ಲಿರುವ ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿಂದ ಜ.17 ರಂದು ದರೋಡೆ ಮಾಡಿದ್ದ 18.314 ಕೆಜಿ ಚಿನ್ನ ಹಾಗೂ 3.80 ಲಕ್ಷ ರೂ. ನಗದನ್ನು ಮಂಗಳೂರು ನಗರ ಪೊಲೀಸ್ ತಂಡ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಇಂದು ಸುದ್ದಿಗೋಷ್ಠಿ ತಿಳಿಸಿದರು.


ಬಂಧಿತ ಆರೋಪಿಗಳಾದ ಮುರುಗನ್ ಮತ್ತು ಕಣ್ಣನ್ ಮಣಿ 6 ತಿಂಗಳ ಹಿಂದೆಯೇ ತಲೋಜಾ ಜೈಲಿನಲ್ಲಿ ಭೇಟಿಯಾಗಿದ್ದಾಗ ಈ ಬ್ಯಾಂಕ್ ದರೋಡೆಗೆ ಸಂಚು ರೂಪಿಸಿದ್ದರು.ಇನ್ನು ಪರಾರಿಯಾಗಿರುವ ಸ್ಥಳೀಯ ಸಹಚರ ಶಶಿ ತೇವರ್ ಸಹ ಈ ಸಂಚಿನಲ್ಲಿ ಭಾಗಿಯಾಗಿದ್ದಾನೆ. ಮಂಗಳೂರು ಮೂಲದ ಶಶಿ ತೇವರ್ ಆರು ತಿಂಗಳ ಹಿಂದೆ ಕೋಟೆಕಾರು ವ್ಯವಸಾಯ ಸಹಕಾರಿ ಬ್ಯಾಂಕ್ನಲ್ಲಿ ಭದ್ರತಾ ಸಿಬ್ಬಂದಿ ಕೊರತೆ ಹಾಗೂ ದರೋಡೆಗೆ ಸೂಕ್ತವಾದ ಬ್ಯಾಂಕ್ ಎಂಬುದನ್ನು ತಿಳಿಸಿದ್ದ. ಅದರಂತೆ 2024ರ ಆಗಸ್ಟ್, ಅಕ್ಟೋಬರ್ ಹಾಗೂ ನವೆಂಬರ್ನಲ್ಲಿ ಮುರುಗನ್, ಮಂಗಳೂರಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾನೆ. ಶುಕ್ರವಾರ ಮಧ್ಯಾಹ್ನ ಸೂಕ್ತ ದಿನವೆಂದು ನಿರ್ಧರಿಸಿ ಜ. 17ರಂದು ದರೋಡೆ ಕೃತ್ಯ ಎಸಗಿದ್ದಾರೆ.


ಮುರುಗಂಡಿ, ಯೊಸುವಾ ರಾಜೇಂದ್ರನ್, ಮಣಿಕಣ್ಣನ್, ಶಶಿ ಥೆವರ್ ಹಾಗೂ ಉತ್ತರ ಭಾರತದ ಇತರ ಮೂವರನ್ನು ಒಳಗೊಂಡ ತಂಡವು ಕೆ.ಸಿ.ರೋಡ್ ಸಹಕಾರ ಬ್ಯಾಂಕ್ ದರೋಡೆಗೆ 6ತಿಂಗಳು ಮೊದಲೇ ಸಂಚು ರೂಪಿಸಿತ್ತು. ಸ್ಥಳೀಯ ವ್ಯಕ್ತಿಗಳು ಈ ಕೃತ್ಯಕ್ಕೆ ನೆರವಾಗಿರುವ ಸಾಧ್ಯತೆ ಇದೆ. ಶಶಿ ಥೇವರ್ ಈಗಲೂ ತಲೆಮರೆಸಿಕೊಂಡಿದ್ದು, ಆತನ ಬಂಧನವಾದರೆ ಈ ಬಗ್ಗೆ ಖಚಿತ ಮಾಹಿತಿ ಸಿಗಲಿದೆ.ಶಶಿ ತೇವರ್ ಸೇರಿ ಇನ್ನೂ ನಾಲ್ವರ ಬಂಧನ ಆಗಬೇಕಿದೆ ಎಂದು ತಿಳಿಸಿದರು.
ಜನವರಿ 16ರಂದು ಮುರುಗಂಡಿ ಥೇವರ್ ಮೂವರ ಜೊತೆ ಫಿಯೆಟ್ ಕಾರಿನಲ್ಲಿ, ಕಣ್ಣನ್ ಮಣಿ ಮತ್ತು ಇತರ ಆರೋಪಿಗಳು ರೈಲಿನಲ್ಲಿ ಮಂಗಳೂರಿಗೆ ಆಗಮಿಸಿದ್ದರು ಜನವರಿ 17 ರಂದು ಮಧ್ಯಾಹ್ನ 1 ಗಂಟೆಯಿಂದ 1.20 ರವರೆಗೆ ಬ್ಯಾಂಕಿನಲ್ಲಿ ದರೋಡೆ ನಡೆದಿದ್ದು, ಮುಸುಕು ಧರಿಸಿ ಶಸ್ತ್ರಸಜ್ಜಿತರಾದ ನಾಲ್ವರು ವ್ಯಕ್ತಿಗಳ ಗುಂಪು ಪಿಸ್ತೂಲು ಮತ್ತು ಚಾಕುಗಳನ್ನು ಹಿಡಿದು ಬ್ಯಾಂಕ್ ಆವರಣಕ್ಕೆ ನುಗ್ಗಿ ನಗದು ಮತ್ತು ಚಿನ್ನಾಭರಣಗಳನ್ನು ದೋಚಿದ್ದರು.ದರೋಡೆಕೋರರು ಒಟ್ಟು 18.674 ಕೆಜಿ ಚಿನ್ನಾಭರಣ ಹಾಗೂ 11,67,044 ರೂ.ಗಳನ್ನು ದೋಚಿದ್ದರು.


ಎಸಿಪಿಗಳಾದ ಧನ್ಯಾ ಮತ್ತು ಮನೋಜ್ ನೇತೃತ್ವದಲ್ಲಿ ಮಂಗಳೂರು ಪೊಲೀಸರ ಹಲವು ತಂಡಗಳು ತಮಿಳುನಾಡು ಮತ್ತು ಮುಂಬೈನಲ್ಲಿ ಸತತ ನಾಲ್ಕು ದಿನಗಳ ಕಾಲ ಕಾರ್ಯಾಚರಣೆ ನಡೆಸಿದ್ದು, 2700 ಕಿ.ಮೀ. ಅಧಿಕ ಪ್ರಯಾಣ ಬೆಳೆಸಿದ್ದಾರೆ.ಮಂಗಳೂರು ಪೊಲೀಸರು ತಮಿಳುನಾಡು ಹಾಗೂ ಮುಂಬೈಯ ಪೊಲೀಸರ ಸಹಕಾರದಲ್ಲಿ ನಡೆಸಿದ ಕಾರ್ಯಾಚರಣೆಯ ವೇಳೆ 18.314 ಕೆ.ಜಿ. ಚಿನ್ನ, 3,80,500 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಜತೆಗೆ 2 ಪಿಸ್ತೂಲ್, 3 ಸಜೀವ ಗುಂಡುಗಳು, ಫಿಯೆಟ್ ಕಾರು, ಒಂದು ನಕಲಿ ನಂಬರ್ ಪ್ಲೇಟ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸರ ವಿವಿಧ ತಂಡಗಳ ಸತತ ಪ್ರಯತ್ನದಿಂದ ಈ ಯಶಸ್ಸು ಸಾಧ್ಯವಾಗಿದೆ. ಅಲ್ಪಾವಧಿಯಲ್ಲಿ ಪೊಲೀಸರ ತಂಡದ ಸದಸ್ಯರು ಸ್ವಲ್ಪವೂ ವಿಶ್ರಾಂತಿ ಪಡೆಯದೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ಚಿನ್ನವನ್ನು ಮರಳಿ ವಶ ಪಡಿಸಿಕೊಂಡ ಎರಡನೇ ಅತಿದೊಡ್ಡ ಪ್ರಕರಣ ಇದಾಗಿದೆ.

ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಗಳಾದ ಸಿದ್ದಾರ್ಥ ಗೋಯಲ್, ಕೆ.ರವಿಶಂಕರ್, ನಗರ ದಕ್ಷಿಣ ವಿಭಾಗದ ಎಸಿಪಿ ಧನ್ಯಾ ನಾಯಕ್ ಹಾಗೂ ಸಿಸಿಬಿ ಎಸಿಪಿ ಮನೋಜ್ ನಾಯ್ಕ್ ಉಪಸ್ಥಿತರಿದ್ದರು.

