ಮಂಗಳೂರು ; ಮಂಗಳೂರು ನಗರದ ಹೊರವಲಯದ ನೀರುಮಾರ್ಗದ ಪೆದಮಲೆ ಗ್ರಾಮದಲ್ಲಿ ದೈವದ ಪವಾಡ ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ದೇಗುಲವೊಂದರ ಜೀರ್ಣೋದ್ಧಾರ ಸಂಬಂಧ ಮಾಡಲಾದ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದ ಪ್ರಕಾರ, 300 ವರ್ಷಗಳ ಹಳೆಯ ದೈವಸ್ಥಾನದ ಕುರುಹು ಪತ್ತೆಯಾಗಿದೆ. ಪಾಳುಬಿದ್ದ ಪೊದೆಗಳಿಂದ ಅವೃತ್ತವಾಗಿದ್ದ ದಟ್ಟ ನಿರ್ಜನ ಪ್ರದೇಶದಲ್ಲಿ ಗ್ರಾಮದ ಇಂದಿನ ಪೀಳಿಗೆಗೆ ದೈವಸ್ಥಾನ ಇದ್ದ ಬಗ್ಗೆ ಅರಿವೇ ಇರಲೇ ಇಲ್ಲ ಅಲ್ಲದೆ ಗ್ರಾಮದಲ್ಲಿನ ಮನೆಗಳಿಗೆ ಆಗಾಗ ನಾಗರಹಾವು ಪ್ರವೇಶಿಸುವುದು, ಆತ್ಮಹತ್ಯೆ, ಸಾವು-ನೋವು ಹೆಚ್ಚಳವಾಗಿತ್ತು. ಊರಿನ ಜನರಿಗೆ ನೆಮ್ಮದಿ ಇಲ್ಲದೇ ಹಲವು ಮನೆಯವರು ಗ್ರಾಮವನ್ನೇ ತೊರೆದಿದ್ದರು. ಹೀಗಾಗಿ ಪಾಳು ಬಿದ್ದಿದ್ದ ಉಮಾಮಹೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಗ್ರಾಮಸ್ಥರು ಮುಂದಾಗಿದ್ದರು. ಈ ವೇಳೆ ದೇವಸ್ಥಾನದಲ್ಲಿ ಪ್ರಶ್ನಾಚಿಂತನೆ ನಡೆಸಲಾಗಿತ್ತು.ಆ ಸಂಧರ್ಭದಲ್ಲಿ ವಾಜಿಲ್ಲಾಯ ದೈವದ ದೈವಸ್ಥಾನ ಮೊದಲು ಇಲ್ಲಿತ್ತು ಎಂಬ ಸುಳಿವು ಪತ್ತೆಯಾಗಿದೆ.

ದೇಗುಲದ ಉತ್ತರ ದಿಕ್ಕಿನ ನಾಗಬನದ ಬಳಿ ವಾಜಿಲ್ಲಾಯ ದೈವಸ್ಥಾನ ಇರುವ ಸುಳಿವು ದೊರೆತಿದೆ. ನೂರಾರು ವರ್ಷಗಳ ಹಿಂದೆ ಇಲ್ಲಿ ದೈವಾರಾಧನೆ ನಡೆಯುತಿತ್ತು ಎಂಬ ಮಾಹಿತಿ ದೊರೆತಿದೆ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಿದೆ. ಹೀಗಾಗಿ ನಾಗಬನದ ಸುತ್ತಲಿನ 50 ಸೆಂಟ್ಸ್ ಜಾಗದಲ್ಲಿ ಗ್ರಾಮಸ್ಥರು ಹುಡುಕಾಟ ನಡೆಸಿದ್ದಾರೆ. ಆಗ ದೈವಸ್ಥಾನದ ಕುರುಹು ಪತ್ತೆಯಾಗಿದೆ. ಸಂಪೂರ್ಣ ಶಿಥಿಲಗೊಂಡ ರೀತಿಯಲ್ಲಿ ದೈವಸ್ಥಾನದ ಸುತ್ತುಪೌಳಿ ಹಾಗೂ ಗುಡಿಯ ಪಂಚಾಂಗ ಪತ್ತೆಯಾಗಿದ್ದು ಜನಸಂಚಾರವಿಲ್ಲದೆ ಶತಮಾನವೇ ಕಳೆದಿದ್ದ ಖಾಸಗಿ ವ್ಯಕ್ತಿಗಳಿಗೆ ಸೇರಿದ್ದ ಜಾಗ ಇದಾಗಿದೆ. ದೈವಸ್ಥಾನದ ಧ್ವಜ ಸ್ಥಂಭದ ಬುಡವೊಂದರ ದಂಬೆ ಕಲ್ಲು ಕೂಡ ಪತ್ತೆಯಾಗಿದೆ. ಒಂದು ಬದಿ ಕುದುರೆ ಮೇಲೆ ರಾಜನೊಬ್ಬನ ಕೆತ್ತನೆ ಹಾಗೂ ಇನ್ನೊಂದು ಬದಿ ಸೂರ್ಯ ಚಂದ್ರರ ಕೆತ್ತನೆಯ ಕಲ್ಲು ಕಾಣಿಸಿದೆ. ಜೊತೆಗೆ ಮಣ್ಣಿನಡಿ ಗಂಟೆ ಸೇರಿದಂತೆ ಹಲವು ದೈವಾರಾಧನೆ ಪರಿಕರಗಳು ಪತ್ತೆಯಾಗಿವೆ.ಸುಮಾರು 20 ಸೆಂಟ್ಸ್ ಜಾಗದಲ್ಲಿ ಗಿಡ, ಬೃಹತ್ ಗಾತ್ರದ ಮರ ಬಳ್ಳಿಯಿಂದಾವೃತವಾದ ಈ ಪ್ರದೇಶವನ್ನು ಜನರು ಬನ ಎಂದೇ ಕರೆಯುತ್ತಿದ್ದರು.

ಇದೀಗ ವಾಜಿಲ್ಲಾಯ-ಧೂಮವತಿ ದೈವದ ಕಾರ್ಣಿಕ ಕಂಡು ಗ್ರಾಮಸ್ಥರು ಅಚ್ಚರಿಪಟ್ಟಿದ್ದಾರೆ ಅಲ್ಲದೆ ಈಗ ಅದೇ ಸ್ಥಳದಲ್ಲಿ ಹೊಸ ದೈವಸ್ಥಾನ ನಿರ್ಮಾಣ ಪುನರ್ ನಿರ್ಮಾಣ ಕಾರ್ಯಕ್ಕೆ ಊರವರು ತೀರ್ಮಾನ ಮಾಡಿದ್ದಾರೆ. ಇದಕ್ಕಾಗಿ ಗಿರಿಧರ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಶ್ರೀ ಕ್ಷೇತ್ರ ಪೆದಮಲೆ ಶ್ರೀ ವಾಜಿಲ್ಲಾಯ ಧೂಮವತಿ ದೈವಸ್ಥಾನ ಟ್ರಸ್ಟ್ ಎಂಬುದನ್ನು ರಚಿಸಿದ್ದಾರೆ ಅಲ್ಲದೆ ಈಗ ದೈವಸ್ಥಾನದ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ.




