ಮಂಗಳೂರು ; ಇತ್ತೀಚೆಗೆ ಬಿಜೈಯಲ್ಲಿನ ಕಲರ್ಸ ಯೂನಿಸೆಕ್ಸ್ ಮಸಾಜ್ ಪಾರ್ಲರ್ ಮೇಲೆ ದಾಳಿ ನಡೆಸಿ ಅರೆಸ್ಟ್ ಆಗಿ ನ್ಯಾಯಾಂಗ ಬಂಧನದಲ್ಲಿರುವ ರಾಮ್ ಸೇನೆ ಸ್ಥಾಪಕ ಪ್ರಸಾದ್ ಅತ್ತಾವರ ಮೇಲೆ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ.
ಮಸಾಜ್ ಪಾರ್ಲರ್ ಮೇಲೆ ದಾಳಿ ಸಂಬಂಧ ರಾಮ್ ಸೇನೆ ಮುಖಂಡ ಪ್ರಸಾದ್ ಅತ್ತಾವರನನ್ನು ಪೊಲೀಸರು ಅರೆೆಸ್ಟ್ ಮಾಡಿದ್ದರು, ಈ ವೇಳೆ ಅವರ ಮೊಬೈಲ್ ಪರಿಶೀಲನೆ ನಡೆಸಿದಾಗ ಅದರಲ್ಲಿ ಶಕ್ತಿ ದೇವತೆಯ ಮುಂದೆ ಐದು ಕುರಿಗಳನ್ನು ಬಲಿ ಕೊಟ್ಟು ಅದರ ರಕ್ತವನ್ನು ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ಮತ್ತು ಆರ್ ಟಿಐ ಕಾರ್ಯಕರ್ತ ಗಂಗರಾಜು ಫೋಟೋಗೆ ಹಚ್ಚಿರುವ ವಿಡಿಯೋ ಪ್ರಸಾದ್ ಅತ್ತಾವರ ಮೊಬೈಲ್ನಲ್ಲಿ ಇತ್ತು.ಈ ವಿಡಿಯೋ ಪರಿಶೀಲನೆ ವೇಳೆ ಪೊಲೀಸರಿಗೆ ಲಭ್ಯವಾಗಿದೆ. ಸರಣಿ ಪ್ರಾಣಿ ಬಲಿ ಮಾಡಿರುವ ವಿಡಿಯೋಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜುಗೆ ಶಕ್ತಿ ತುಂಬಲು ಈ ರೀತಿ ಮಾಡುತ್ತಿದ್ದರು ಎನ್ನಲಾಗಿದೆ.
ಈ ವಿಚಾರವನ್ನು ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಣತಿಯಂತೆ ಕದ್ರಿ ಪೊಲೀಸ್ ಇನ್ಸ್ಪೆಕ್ಟರ್ ಸೋಮಶೇಖರ್ ನೀಡಿರುವ ದೂರಿನಂತೆ ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಸಾದ್ ಅತ್ತಾವರ ಮತ್ತು ಅನಂತ್ ಭಟ್ ವಿರುದ್ಧ ಗುರುವಾರ ತಡರಾತ್ರಿ ಎಫ್ಐಆರ್ ದಾಖಲಾಗಿದೆ.
ಪ್ರಾಣಿ ಬಲಿ ಪೂಜೆ ಮಾಡಲು ಪ್ರಸಾದ್ ಅತ್ತಾವರ ಅನಂತ್ ಭಟ್ ಗೆ ಹಣ ವರ್ಗಾವಣೆ ಮಾಡಿದ್ದಾನೆ ಎನ್ನಲಾಗಿದೆ. ಈಗ ಅನಂತ್ ಭಟ್ ಯಾರು ಅಂತ ತನಿಖೆ ಮಾಡುತ್ತಿದ್ದೇವೆ. ಬಲಿ ಎಲ್ಲಿ ಕೊಟ್ಟಿದ್ದಾರೆ ಎಂಬುವುದಕ್ಕೆ ಸ್ಪಷ್ಟತೆ ಇಲ್ಲ. ಪ್ರಾರಂಭಿಕ ಮಾಹಿತಿ ಪ್ರಕಾರ ಸ್ನೇಹಮಹಿ ಕೃಷ್ಣ ಮತ್ತು ಗಂಗರಾಜು ಅವರಿಗಾಗಿ ಬಲಿ ಕೊಡಲಾಗಿದೆ ಎಂದು ತಿಳಿದುಬಂದಿದೆ.ಈ ಬಗ್ಗೆ ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಪ್ರಾಣಿ ಬಲಿ ನಿಷೇಧ ಇದೆ. ಹಣದ ಬ್ಯಾಗ್ನ ಫೋಟೋ ಕೂಡ ಇತ್ತು ಎಂದು ತಿಳಿಸಿದರು.