ಈ ಕಾಲದಲ್ಲಿ ಕೆಲವರಿಗೆ ದೇವರು ಅನ್ನೋ ಭಯನೂ ಇಲ್ಲ. ಭಕ್ತಿನೂ ಇಲ್ಲ.. ದೇವರ ಮೇಲೆ ನಂಬಿಕೆ ಬದಲು ಮೂಢನಂಬಿಕೆ ತಾಂಡವವಾಡಿದೆ. ಇದಕ್ಕೆ ಒಂದು ಉದಾಹರಣೆ ಎಂಬಂತೆ ಶಿವಲಿಂಗದ ಮುಂದೆಯೇ ಮದ್ಯ ಸೇವಿಸಿ ವಿಕೃತಿ ಮೆರೆದಿರುವ ಘಟನೆ.

ಚಾಮರಾಜನಗರದ 17ನೇ ವಾರ್ಡಿನಲ್ಲಿರುವ ಉಪ್ಪಾರ ಬೀದಿಯಲ್ಲಿರೋ ಶಿವ ದೇವಾಲಯವೊಂದರಲ್ಲಿ ನಡೆದಿದೆ.ಈ ಪುರಾತನ ಶಿವ ದೇವಾಲಯವನ್ನು ಮೈಸೂರು ಮಹಾರಾಜರು ಕಟ್ಟಿಸಿದ್ದರು ಎಂಬ ಇತಿಹಾಸವಿದೆ. ಆದರೆ ಯಾವುದೇ ಮೂಲಸೌಕರ್ಯಗಳಿಲ್ಲದ ಕಾರಣ ಈ ದೇವಾಲಯ ಪಾಳು ಬಿದ್ದಿದೆ. ಹೀಗಾಗಿ ಈ ದೇವಾಲಯವನ್ನು ಕುಡುಕರು ತಮ್ಮ ಅಡ್ಡೆಯನ್ನಾಗಿ ಮಾಡಿಕೊಂಡಿದ್ದಾರೆ. ಮೀಸೆ ಚಿಗುರುವ ಮುನ್ನವೇ ಮದ್ಯ,ಗಾಂಜಾದ ದಾಸರಾಗಿರುವ ಇಲ್ಲಿನ ಪಡ್ಡೆ ಹುಡುಗರು ಪೊಲೀಸರ ಭಯವಿಲ್ಲದೇ, ಶಿವಲಿಂಗದ ಮೇಲೆಯೇ ಎಣ್ಣೆ ಬಾಟ್ಲಿ ಇಟ್ಟು ಕೇಕೆ ಹಾಕುತ್ತಾ ಮಜಾ ತೆಗೆದು ಕೊಳ್ಳುತ್ತಿದ್ದಾರೆ. ಕುಡುಕರ ಪಾಲಿಗೆ ಇದೊಂದು ಬಾರ್ ಎಂಡ್ ರೆಸ್ಟೋರೆಂಟ್ ತರ ಇದೆ.ಇದೀಗ ಮಟ ಮಟ ಮದ್ಯಾಹ್ನವೇ ಕಂಠಪೂರ್ತಿ ಕುಡಿದು ಬೀದಿಗಳಲ್ಲಿ ರಂಪಾಟ ಮಾಡಿಕೊಂಡು ಅಲೆಯುತ್ತಿದ್ದಾರೆ.


ಸ್ಥಳೀಯರು ಈ ಬಗ್ಗೆ ಪೋಲಿಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕುಡುಕರ ಹಾವಳಿಯಿಂದ ಬೇಸತ್ತ ಜನರು ಇನ್ನು ನಶೆಯಲ್ಲಿ ಗಲಾಟೆ ಮಾಡುವ ಭಯದಿಂದ ಯಾರಿಗೂ ದೂರು ಕೊಡದೆ ಸಹಿಸಿಕೊಂಡು ಸುಮ್ಮನಿದ್ದಾರೆ.

