ಮಂಗಳೂರು ನಗರದ ಬಿಜೈಯಲ್ಲಿರುವ ಕಲರ್ ಯೂನಿಸೆಕ್ಸ್ ಸೆಲೂನ್ನ ಮೇಲೆ ದಿನಾಂಕ 23.01.2025 ರಂದು ‘ರಾಮಸೇನಾ ‘ ಸಂಘಟನೆಯ ಸದಸ್ಯರು ನಡೆಸಿದ ದಾಳಿಯಿಂದಾಗಿ ಬಂಧಿತರಾಗಿದ್ದ 14 ಆರೋಪಿಗಳ ಪೈಕಿ ಪ್ರಸಾದ್ ಅತ್ತಾವರ್ ಸೇರಿ 11 ಜನ ಆರೋಪಿಗಳಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಪ್ರೀತಿ ಕೆ.ಪಿ. ರವರು ಶರತ್ತುಬದ್ಧ ಜಾಮೀನು ಮಂಜೂರು ಮಾಡಿರುತ್ತಾರೆ.
ದಿನಾಂಕ 23.01.2025 ರಂದು ಮಂಗಳೂರಿನ ಬಿಜೈ, ಕೆ.ಎಸ್.ಆರ್.ಟಿ.ಸಿ. ಬಳಿಯ ಅದಿತ್ಯ ಕಾಂಪ್ಲೆಕ್ಸ್ನಲ್ಲಿರುವ ‘ಕಲರ್ಸ ಯೂನಿಸೆಕ್ಸ್’ ಸೆಲೂನ್ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿತ್ತು ಎಂದು ಆರೋಪಿಸಿ ಪ್ರಸಾದ್ ಅತ್ತಾವರ್ ನೇತೃತ್ವದಲ್ಲಿ ‘ರಾಮಸೇನಾ’ ಸಂಘಟನೆಯವರು ದಾಳಿ ನಡೆಸಿ ಪೀಠೋಪಕರಣಗಳನ್ನು ಜಖಂ ಮಾಡಿ ಕೊಲೆ ಯತ್ನ ಹಾಗೂ ದರೋಡೆಯಂತಹ ಅಪರಾಧ ಎಸಗಿರುತ್ತಾರೆ. ಎಂದು ಸದ್ರಿ ಸೆಲೂನ್ ಮಾಲಕರು ಮಂಗಳೂರಿನ ಬರ್ಕೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸದ್ರಿ ದೂರಿನ ಆಧಾರದಲ್ಲಿ ಬರ್ಕೆ ಪೊಲೀಸರು ಎಫ್.ಐ.ಆರ್. ದಾಖಲಿಸಿ ಪ್ರಸಾದ್ ಅತ್ತಾವರ ಸೇರಿ ಒಟ್ಟು 14 ಮಂದಿಯನ್ನು ಬಂಧಿಸಿ ಮಂಗಳೂರಿನ 6ನೇ ಜೆ.ಎಂ.ಎಫ್.ಸಿ. ನ್ಯಾಯಾಲಯದ ಮುಂದೆ ದಿನಾಂಕ 24.01.2025 ರಂದು ಹಾಜರುಪಡಿಸಿದ್ದು, ಎಲ್ಲಾ ಆರೋಪಿಗಳಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿತ್ತು. ಈ ನಡುವೆ ಪ್ರಸಾದ್ ಅತ್ತಾವರ್ ಹಾಗೂ ಇತರ ಆರೋಪಿಗಳು ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆರೋಪಿಗಳ ಪರ ನ್ಯಾಯವಾದಿ ಮಯೂರ ಕೀರ್ತಿಯವರು ದಿನಾಂಕ 01.02.2025 ರಂದು ವಾದ ಮಂಡಿಸಿದ್ದು, ಮಾನ್ಯ ನ್ಯಾಯಲಯವು ಜಾಮೀನು ಅರ್ಜಿಯ ಆದೇಶಕ್ಕಾಗಿ ಪ್ರಕರಣವನ್ನು ಮುಂದೂಡಿದ್ದು ದಿನಾಂಕ 05.02.2025 ರಂದು ಮಾನ್ಯ ನ್ಯಾಯಾಲಯವು ಪ್ರಸಾದ್ ಅತ್ತಾವರ್ ಹಾಗೂ ಜಾಮೀನು ಅರ್ಜಿ ಸಲ್ಲಿಸಿದ ಇತರ 11 ಮಂದಿ ಆರೋಪಿಗಳಗೆ ಶರತ್ತುಬದ್ಧ ಜಾಮೀನು ಮಂಜೂರು ಮಾಡಿರುತ್ತದೆ.

